Wednesday, October 27, 2021
spot_img
Homeಅಂಕಣರಾಜಕೀಯ ಪಡಸಾಲೆ- ಪ್ರಜಾಪ್ರಭುತ್ವವೆಂಬ ಬಹುಮತೀಯ ವ್ಯವಸ್ಥೆಯ ಕೆಲವು ವಿರೋಧಾಭಾಸಗಳು

ರಾಜಕೀಯ ಪಡಸಾಲೆ- ಪ್ರಜಾಪ್ರಭುತ್ವವೆಂಬ ಬಹುಮತೀಯ ವ್ಯವಸ್ಥೆಯ ಕೆಲವು ವಿರೋಧಾಭಾಸಗಳು

ಪ್ರಜಾಪ್ರಭುತ್ವವೆಂದಾಗ ನಮ್ಮಮೊದಲ ನಂಬಿಕೆ ಅಂದರೆ ಜನರ ತೀಮಾ೯ನವೇ ಅಂತಿಮ.ಎಲ್ಲವೂ ಬಹುಮತದ ಆಧಾರದಲ್ಲಿಯೇ ನಿಧಾ೯ರವಾಗಬೇಕು.ಇದು ಸಹಜ ಕೂಡ. ಆದರೆ ನಾವು ನಂಬಿಕೊಂಡು ಬಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲವೂ ನಡೆದುಕೊಂಡು ಬರುತ್ತಿದೆಯೇ? ಇದು ಸಾಧ್ಯವೇ? ಸಾಧುವಾ? ಅನ್ನುವ ಮೂಲಭೂತ ಪ್ರಶ್ನೆ ಈಗ ಒಂದೊಂದಾಗಿ ಹುಟ್ಟಿಕೊಳ್ಳಲು ಪ್ರಾರಂಭವಾಗಿದೆ.
1.ರಾಜ್ಯ ಸಭೆ/ವಿಧಾನ ಪರಿಷತ್ತು ಸದಸ್ಯರು ಸಚಿವರಾಗುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟರ ಮಟ್ಟಿಗೆ ಪ್ರಜಾಸತ್ತಾತ್ಮಕವಾದ ವಿಧಾನ? ಅದರಲ್ಲೂ ನಾಮನಿದೇ೯ಶಿತ ಸದಸ್ಯರನ್ನು ಸಚಿವರನ್ನಾಗಿಸಿ ಪ್ರಜಾ ನಿಧಾ೯ರದ ಅಧಿಕಾರವನ್ನು ಅವರಿಗೆ ನೀಡುವುದು ಇದು ನೈತಿಕವಾಗಿ ನ್ಯಾಯ ಪರವೇ?
ಸಂಸದೀಯ ವ್ಯವಸ್ಥೆಯ ಜನಕ ಅನ್ನಿಸಿ ಕೊಂಡ ಬ್ರಿಟನ್ ನಲ್ಲಿ ಒಂದು ಸಂಪ್ರದಾಯವಿದೆ.ಅಲ್ಲಿನ ಪ್ರಧಾನಿ ಅಥವಾ ಮಂತ್ರಿಯಾಗಬೇಕಾದರೆ ಆತ ಪ್ರಜಾಪ್ರಭುತ್ವ ಸದನ ಅನ್ನಿಸಿ ಕೊಂಡ ಹೌಸ್ ಆಫ್ ಕಾಮನ್ಸ್ ನಿಂದ ಆಯ್ಕೆಯಾಗಿ ಬಂದಿರಲೇ ಬೇಕು.ಆದರೆ ನಮ್ಮಲ್ಲಿ ಹಾಗಿಲ್ಲ ರಾಜ್ಯ ಸಭೆ /ವಿಧಾನ ಪರಿಷತ್ ಅನ್ನಿಸಿಕೊಂಡ ಈ ಎರಡು ವ್ಯವಸ್ಥೆಯ ಸದಸ್ಯರೂ ಕೂಡಾ ಪ್ರಧಾನಿಯಾಗಬಹುದು!ಮುಖ್ಯಮಂತ್ರಿಯೂ ಆಗಬಹುದು,ಸಚಿವರೂ ಆಗಬಹುದು.ಹತ್ತು ವರ್ಷ ಕಾಲ ಸತತವಾಗಿ ನಮ್ಮನ್ನು ಆಳಿದ ಕಾಂಗ್ರೆಸ್‌ ಪ್ರಧಾನಿ ಮನಮೋಹನ ಸಿಂಗ್‌ ಒಂದು ಪಂಚಾಯತ್‌ ಚುನಾವಣೆಯಲ್ಲೂ ಸ್ಪರ್ಧಿಸಿದವರಲ್ಲ! ಅವರಿಗೆ ಸಂಬಂಧವೇ ಇಲ್ಲದ ಅಸ್ಸಾಂ ರಾಜ್ಯದಿಂದ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಇಂಥ ಹಲವು ಪ್ರಕರಣಗಳನ್ನು ಉದಾಹರಿಸಬಹುದು. ಇದು ಸಂಸದೀಯ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ತತ್ವದ ತಿಲಾಂಜಲಿಯಲ್ಲವೇ?ಇದು ಅಧಿಕಾರ ಹಿಡಿಯಲು ಆರಿಸಿಕೊಂಡ ಹಿಂಬಾಗಿಲಿನ ಹೆದ್ದಾರಿಯಾಗುವುದಿಲ್ಲವೇ?
2.ವಿಧಾನ ಪರಿಷತ್ತಿನ ಎರಡು ಕ್ಷೇತ್ರಗಳಲ್ಲಿ ಸದಸ್ಯರಾಗಲು ಇರುವ ಆಹ೯ತೆ ಹೇಗಿದೆ ನೋಡಿ!ಶಿಕ್ಷಕರ ಕ್ಷೇತ್ರದಿಂದ ಸ್ಪಧಿ೯ಸುವ ಅಭ್ಯರ್ಥಿ ಶಿಕ್ಷಕ ಆಗಿರಬೇಕಾಗಿಲ್ಲ.ಅದೇ ರೀತಿ ಪದವೀಧರರ ಕ್ಷೇತ್ರದಲ್ಲಿ ಸ್ಪಧಿ೯ಸುವವ ಪದವೀಧರನೇ ಆಗಿರಬೇಕಾಗಿಲ್ಲ. ಆದರೆ ಮತದಾರರು ಮಾತ್ರ ಶಿಕ್ಷಕರಾಗಿರಲೇ ಬೇಕು.ಪದವೀಧರ ಆಗಿರಲೇ ಬೇಕು.ಇದೆಂತಹ ವಿಪಯಾ೯ಸ?
ಸಹಕಾರಿ ಸಂಸ್ಥೆಯಲ್ಲಿ ಚುನಾವಣೆ ನಡೆಯುವಾಗ ಸದಸ್ಯರು ಮಾತ್ರ ನಿದೇಶ೯ಕರ ಸ್ಥಾನಕ್ಕೆ ಸ್ಪಧಿ೯ಸಲು ಆಹ೯ತೆ ಪಡೆಯುತ್ತಾರೆ.ಆದರೆ ಇಲ್ಲಿ ಅದಕ್ಕಿಂತಲೂ ಕೆಳಗೆ ಅನ್ನುವುದು ವೇದ್ಯವಾಗುತ್ತದೆ. ಇದರಲ್ಲಿ ಪ್ರಾಥಮಿಕ ಶಿಕ್ಷಕರನ್ನು ಮತದಾರರನ್ನಾಗಿ ಸ್ವೀಕರಿಸದೇ ಇರುವುದು ಇನ್ನೊಂದು ವಿಪಯಾ೯ಸ.ಹೆಚ್ಚಿನ ಸಂಖ್ಯೆಯ ಮತದಾರರರನ್ನೆ ಹೊರಗಿಟ್ಟ ಎಲೆಕ್ಟೋರಲ್ ಕಾಲೇಜು (electrol college ).
ಅಲ್ಪಸಂಖ್ಯಾತರಿಂದ ಆಯ್ಕೆಗೊಂಡ ಸದಸ್ಯರು ಬಹುಸಂಖ್ಯಾತ ಸದಸ್ಯರ ಹಿತರಕ್ಷಣೆ ಮಾಡುವ ಪ್ರಜಾಪ್ರಭುತ್ವದ ಪರಿಪಾಠವೇ ವಿಪಯಾ೯ಸ ವಲ್ಲವೇ?
3.ಪ್ರಜಾಪ್ರಭುತ್ವವೇ ಒಂದು ಮಿಥ್ಯೆ.ಯಾಕೆ ಕೇಳಿ.ಯಾವುದೇ ಒಂದು ಕ್ಷೇತ್ರದಲ್ಲಿ ಚುನಾವಣೆ ನಡೆಯುವಾಗ ಮೂರು ಮಂದಿ ಅಭ್ಯರ್ಥಿಗಳು ಸ್ಪಧಿ೯ಸುತ್ತಾರೆ ಅಂತ ಇಟ್ಟುಕೊಳ್ಳಿ.ಅಲ್ಲಿ ಮೊದಲ ಅಭ್ಯರ್ಥಿಗೆ 40 ಶೇ.ಮತ ಚಲಾವಣೆ ಆಗಿರುತ್ತದೆ;ಅದೇ ಎರಡನೇಯ ಅಭ್ಯರ್ಥಿಗೆ 30 ಶೇ.ಮತಗಳಿಕೆ, ಹಾಗೇನೆ ಮೂರನೇಯ ಅಭ್ಯರ್ಥಿಯೂ 30 ಶೇ.ಮತ ಪಡೆದಿರುತ್ತಾನೆ.ಇಲ್ಲಿ ಯಾರನ್ನು ಚುನಾಯಿತ ಅಭ್ಯರ್ಥಿ ಅಂತ ಘೋಷಿಸುವುದು? ಶೇ. 40.ರಷ್ಟು ಮತ ಗಳಿಸಿದವನೇ ಚುನಾಯಿತ ಅಭ್ಯರ್ಥಿ!ಹಾಗಾದರೆ ಶೇ.60.ರಷ್ಟು ಜನರ ಅಭಿಪ್ರಾಯ ನಗಣ್ಯ.ಅಂದರೆ ಪ್ರಜಾಪ್ರಭುತ್ವ ಬಹುಮತದ ಸರಕಾರ ಅನ್ನುವುದು ಮಿಥ್ಯೆ ಅಲ್ಲವೇ?
4.ಪ್ರಜಾಪ್ರಭುತ್ವ ಮಿಥ್ಯೆ ಅನ್ನುವುದಕ್ಕೆ ಇನ್ನೊಂದು ಉದಾಹರಣೆ ನೋಡಿ.ಉಡುಪಿ ಚಿಕ್ಕಮಗಳೂರು ಸಂಸದರು ಸರಿಸುಮಾರು 15 ಲಕ್ಷ ಮತದಾರರನ್ನು ಪ್ರತಿನಿಧಿಸುವ ಲೋಕ ಸಭಾ ಪ್ರತಿನಿಧಿ.ಸಂಸತ್ತಿನಲ್ಲಿ ಯಾವುದೇ ನಿಣ೯ಯ ತೆಗೆದುಕೊಳ್ಳುವಾಗ ತನ್ನ ಕ್ಷೇತ್ರದ ಜನರ ಅಭಿಪ್ರಾಯ ಪಡೆದು ಮತ ಚಲಾಯಿಸಲು ಸಾಧ್ಯವೇ? ಖಂಡಿತವಾಗಿಯೂ ಅಸಾಧ್ಯವಾದ ಮಾತು.ಅವರು ಅಲ್ಲಿ ತೆಗೆದು ಕೊಳ್ಳುವ ತೀಮಾ೯ನವೇ ನಮ್ಮ ಅಭಿಪ್ರಾಯವೆಂದು ಬಾಯಿ ಮುಚ್ಚಿ ಒಪ್ಪಿ ಕೊಳ್ಳುವುದೇ ನಮ್ಮ ಧಮ೯ ಅನ್ನುವುದೇ ನಮ್ಮ ಪ್ರಜಾಪ್ರಭುತ್ವವಲ್ಲವೇ? ಆದುದರಿಂದಲೇ ನಮ್ಮ ಪ್ರಜಾಪ್ರಭುತ್ವ ಒಂದು ಮಿಥ್ಯೆಯ ಬದುಕು.ಈ ಎಲ್ಲಾ ಸತ್ಯ – ಮಿಥ್ಯೆಗಳ ನಡುವಿನ ಸುಖ – ಕಷ್ಟಗಳ ಮಿಶ್ರಣದ ಬದುಕೇ ಪ್ರಜಾಪ್ರಭುತ್ವವೆಂದು ನಂಬಿ ನಡೆಯ ಬೇಕಾಗಿದೆ.ಬೇರೆ ಎಲ್ಲಾ ಪದ್ಧತಿಯ ಸರಕಾರಗಳಿಗೆ ತುಲನೆ ಮಾಡಿ ನೋಡಿದಾಗ ಪ್ರಜಾಪ್ರಭುತ್ವವೇ ಶ್ರೇಷ್ಠ ಅನ್ನುವುದು ರಾಜ್ಯ ಶಾಸ್ತ್ರ ಪಿತಾಮಹ ಅರಿಸ್ಟಾಟಲ್‌ನ ಅಭಿಪ್ರಾಯಯೂ ಹೌದು.ಇಂದಿನ ನಮ್ಮ ಅನುಭವವೂ ಹೌದು.ಬದಲಾವಣೆ ಜಗದ ನಿಯಮ.ಸುಧಾರಣೆ ತರಲು ಸಾಧ್ಯವೇ? ಅನ್ನುವುದು ಇಂದಿನ ರಾಜಕೀಯ ಪಡಸಾಲೆಯ ಪ್ರಮುಖ ಚಿಂತನಾ ವಿಷಯ.
ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ, ಉಡುಪಿ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!