Sunday, October 17, 2021
spot_img
Homeಸಂಪಾದಕೀಯಸಂಪಾದಕೀಯ- ಮರಾಠಾ, ವೀರಶೈವ ಅಭಿವೃದ್ಧಿ ನಿಗಮ ಆಯ್ತು‌, ಮುಂದೆ?

ಸಂಪಾದಕೀಯ- ಮರಾಠಾ, ವೀರಶೈವ ಅಭಿವೃದ್ಧಿ ನಿಗಮ ಆಯ್ತು‌, ಮುಂದೆ?


ಬಿಎಸ್ ವೈ ಸರಕಾರ ಪ್ರತಿ ಉಪಚುನಾವಣೆ ಗೆಲ್ಲಲು ಹಟಕ್ಕೆ ಬಿದ್ದಂತೆ ಕೆಲಸ ಮಾಡುತ್ತಿದೆ. ವಾಮ ಮಾರ್ಗದ ಮೂಲಕ ಆದರೂ ಗೆಲುವು ಪಡೆಯಲು ಪ್ರಯತ್ನಗಳು ನಡೆದಿವೆ. ಹಾಗೆ ನೋಡಲು ಹೋದರೆ ಬಿಜೆಪಿಗೆ ಅಧಿಕಾರ ನಡೆಸಲು ಬೇಕಾದ ಸಂಖ್ಯಾಬಲ ಇದೆ. ಆದರೆ ಬೆಳೆಯುತ್ತಿರುವ ಡಿಕೆಶಿ ಪ್ರಾಬಲ್ಯವನ್ನು ಹಣಿಯಲು ಪ್ರತಿ ಉಪಚುನಾವಣೆ ಗೆಲ್ಲಬೇಕು ಎನ್ನುವುದು ಬಿಜೆಪಿ ಚಿಂತನೆ.
ಹಿಂದೆ ಬೇರೆ ಪಕ್ಷಗಳಿಂದ ಬಿಜೆಪಿಗೆ ಬಂದವರು ಮತ್ತೆ ಅಧಿಕಾರ ಹಿಡಿಯಲು ಮತ್ತು ಬಿಜೆಪಿ ಸರಕಾರಕ್ಕೆ ಕನಿಷ್ಟ ಸಂಖ್ಯಾಬಲ ಖಾತರಿ ಪಡಿಸಲು ಉಪಚುನಾವಣೆಯ ಗೆಲುವು ಅಗತ್ಯವೇ ಆಗಿತ್ತು. ಇವೆರಡೂ ಗಳಿಸಿದ ನಂತರ ಈಗ ಪ್ರತಿಷ್ಠೆಯ ಪ್ರಶ್ನೆ ಎದುರಾಗಿದೆ. ಡಿಕೆಶಿ ಕೂಡ ಇದನ್ನು ಪ್ರತಿಷ್ಠೆ ಆಗಿ ತೆಗೆದುಕೊಂಡಿದ್ದಾರೆ. ಈಗ ತಾನೇ ಪೂರ್ತಿ ಆಗಿರುವ ಆರ್. ಆರ್. ನಗರ ಮತ್ತು ಶಿರಾ ಗೆದ್ದ ನಂತರ ಬಿಜೆಪಿ ಆತ್ಮವಿಶ್ವಾಸ ನೂರು ಪಟ್ಟು ಹೆಚ್ಚಾಗಿದೆ. ಹಿಂದಿನ ಚುನಾವಣೆಯಲ್ಲಿ ಇಡುಗಂಟು ಕೂಡ ಉಳಿಸಿಕೊಳ್ಳಲು ಒದ್ದಾಡಿದ ಪಕ್ಷವೊಂದು ಈ ಬಾರಿ ಗೆಲ್ಲಲು ಸಾಧ್ಯವಾಯಿತು ಅಂದರೆ ಅದು ಶಿರಾ ಗೆಲುವು! ಇದು ಆಳುವ ಪಕ್ಷಕ್ಕೆ ಟಾನಿಕ್ ದೊರೆತ ಹಾಗೆ. ಈಗ ಕಾಂಗ್ರೆಸ್ ಪಕ್ಷವು ಆತ್ಮಾವಲೋಕನಕ್ಕೆ ಮೊದಲೇ ಇನ್ನೆರಡು ಉಪಚುನಾವಣೆ ಬಂದು ಬಿಟ್ಟಿದೆ. ಬಸವಕಲ್ಯಾಣ ಮತ್ತು ಮಸ್ಕಿ ಅವೆರಡು ಕ್ಷೇತ್ರಗಳು.
ಚುನಾವಣೆ ಘೋಷಣೆಗೆ ಮೊದಲೇ ಸಿಎಂ ಮಗ ವಿಜಯೇಂದ್ರ ಅಲ್ಲಿಗೆ ಭೇಟಿ ಕೊಟ್ಟಿದ್ದಾರೆ. ಗ್ರೌಂಡ್ ವರ್ಕ್ ಮುಗಿಸಿದ್ದಾರೆ. ವರದಿ ಸಿಎಂ ಕೈ ಸೇರಿದ ತಕ್ಷಣ ಅವರು ಮರಾಠ ಅಭಿವೃದ್ದಿ ನಿಗಮದ ಘೋಷಣೆ ಮಾಡಿದ್ದಾರೆ. 50 ಕೋಟಿ ರೂಪಾಯಿ ಹಣವನ್ನು ಆ ನಿಗಮಕ್ಕೆ ವಿಂಗಡಿಸಲು ಅಧಿಕಾರಿಗಳಿಗೆ ಹೇಳಿದ್ದಾರೆ.
ಇದರಿಂದ ಸಿಟ್ಟು ಮಾಡಿಕೊಂಡ ಬಿಎಸ್‌ವೈ ಅವರದ್ದೇ ಮತದ ವೀರಶೈವರು ತಮಗೂ ಒಂದು ನಿಗಮದ ಬೇಡಿಕೆ ಮುಂದಿಟ್ಟಿದ್ದಾರೆ. ಅದಕ್ಕೆ ಕೂಡ ಸಿಎಂ ಯೆಸ್ ಅನ್ನಬಹುದು. ಮುಂದೆ ಕುರುಬರು, ವಾಲ್ಮೀಕಿ ಜನಾಂಗದವರು, ಒಕ್ಕಲಿಗರು, ವಿಶ್ವಕರ್ಮರು…ಬೇಡಿಕೆ ಇಡುತ್ತ ಹೋದಂತೆ ಸಿಎಂ ಅವರಿಗೆ ನಿಭಾಯಿಸುವುದು ಕಷ್ಟ ಆಗಬಹುದು. ಇದು ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ!
ಮೊದಲೇ ಕೊರೊನ ಕಾರಣಕ್ಕೆ ಸರಕಾರದ ಖಜಾನೆ ಖಾಲಿ ಆಗಿದೆ. ಸಂಬಳ ಕೊಡುವುದು ಕೂಡ ಕಷ್ಟ ಎಂದು ಕೆಲವು ಮಂತ್ರಿಗಳೇ ಹೇಳುತ್ತಿದ್ದಾರೆ. ಈಗಾಗಲೇ ಉದ್ಯೋಗಗಳನ್ನು ಕಳೆದುಕೊಂಡ ಸಾವಿರಾರು ಜನರು ಬವಣೆ ಪಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಈ ಅಭಿವೃದ್ದಿ ನಿಗಮ ಸರಕಾರಕ್ಕೆ ಮತ್ತಷ್ಟು ಹೊರೆ ಆಗಲಾರದೇ? ಹಿಂದಿನ ಸಿದ್ಧರಾಮಯ್ಯ ಸರಕಾರ ಅಹಿಂದ ಮತಗಳ ಹಿಂದೆ ಹೋಗಿ ತುಷ್ಟೀಕರಣ ನೀತಿಯಿಂದ ಅಧಿಕಾರ ಕಳೆದುಕೊಂಡದ್ದು ಎಲ್ಲರಿಗೂ ಗೊತ್ತಿದೆ. ಈ ನಿಗಮಗಳು ಆ ಭಾಗ್ಯಗಳ ಹಾಗೆ! ಒಂದು ಸಮುದಾಯವನ್ನು ಖುಷಿ ಪಡಿಸಲು ಹೋದಾಗ ಇನ್ನಷ್ಟು ಸಮುದಾಯಗಳು ಬೇಡಿಕೆ ಇಡುವುದು, ಕೊಡದೆ ಹೋದಾಗ ಸರಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುವುದು ಸಾಮಾನ್ಯ.
ಉಪಚುನಾವಣೆಯ ಒಂದೆರಡು ಸೀಟುಗಳನ್ನು ಗೆಲ್ಲಲು ತುಷ್ಟೀಕರಣ ನೀತಿಗೆ ಅಂಟಿಕೊಂಡರೆ ಲಾಂಗ್ ರೇಂಜಿನಲ್ಲಿ ಸರಕಾರಕ್ಕೆ ಮುಜುಗರ ಉಂಟಾಗಬಹುದು. ಅಥವಾ ಬಹುದೊಡ್ಡ ಸಮುದಾಯಗಳ ವಿಶ್ವಾಸ ಕಳೆದುಕೊಳ್ಳಬಹುದು! ಕೆಟ್ಟ ಮೇಲೆ ಬುದ್ಧಿ ಕಲಿಯುವುದಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳುವುದು ಬುದ್ಧಿವಂತರ ಲಕ್ಷಣ. ಓಲೈಕೆ ರಾಜಕಾರಣವನ್ನು ವಿರೋಧಿಸುತ್ತಾ ಬಂದವರು ಅದನ್ನೇ ಮಾಡುವುದು ವಿರೋಧಾಭಾಸ ಎನಿಸುವುದಿಲ್ಲವೇ? ಇತಿಹಾಸದಿಂದ ಪಾಠ ಕಲಿಯದವರು ಮುಂದೆ ಪಾಠ ಕಲಿಯುವುದು ಹೇಗೆ?

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!