Sunday, October 17, 2021
spot_img
Homeಸಾಹಿತ್ಯ/ಸಂಸ್ಕೃತಿಕಾರಣವೇ ಹೇಳದೆ ಹೋಗಿಬಿಟ್ಟ ರವಿ...

ಕಾರಣವೇ ಹೇಳದೆ ಹೋಗಿಬಿಟ್ಟ ರವಿ…

ಅಕ್ಷರದ ಕೌದಿಗೆ ಹೊಸ ಮೋಹ-ದಾಹ ಹೊದಿಸಿದ ನೇಕಾರ

ಅಕ್ಷರಾಂಜಲಿ ಎನ್ನಬೇಕೋ ಸ್ವರಾಂಜಲಿ ಎನ್ನಬೇಕೋ ಅಥವಾ ಅವೆರಡೂ ಮುಪ್ಪುರಿಗೊಂಡ ಬೆಳಗೆರೆ ಎಂಬ ಯುಗಾಂತ್ಯ ಎನ್ನಬೇಕೋ ಅರಿಯದಾಗಿರುವ ಹೊತ್ತಿದು… ಅಥವಾ ಈ ಗಾರುಡಿಗನ ಭಾಷೆಯಲ್ಲೇ ಹೇಳುವುದಾದರೆ ‘ಮರವೊಂದು ಮಲಗಿತು’.
ಅಕ್ಷರದ ಹಾದಿಗೆ, ಪತ್ರಿಕೋದ್ಯಮದ ಪಾಡಿಗೆ ಹೊಸ ಹುರುಪು, ಹೊಸ ಹೊಳಪು , ಹೊಸತೇ ಆದೊಂದು ಮೋಹ- ದಾಹಗಳನ್ನು ಕಟ್ಟಿ ಹೊಸೆದು ಓದುಗ ದೊರೆಯ ಕೈಗಿತ್ತ ಅಕ್ಷರ ಸಂತನೋ ಅಥವಾ ಬಹುಮಂದಿ ಹೇಳುವಂತೆ ಅಕ್ಷರ ರಾಕ್ಷಸನೋ…ಅಂತೂ ಜಾಗ ಖಾಲಿ ಮಾಡಿ ತೆರಳಿರುವುದು ಬೆಳಗಿನ ರವಿಯಂತೆಯೇ ಸ್ಪಷ್ಟ ಸತ್ಯ.
ಹಾಗೇ ನೋಡಿದರೆ ಸಂತನೂ ರಾಕ್ಷಸನೂ, ಕಾಮಿಯೂ ಪ್ರೇಮಿಯೂ ಅದಕ್ಕೂ ಮೀರಿ ನಿಲ್ಲಬಲ್ಲ ಮಹಾ ಮೋಹಿಯೂ ಒಟ್ಟೊಟ್ಟಿಗೆ ಉನ್ಮತ್ತರಾಗಿ ಆವೇಶದಿಂದ ಬೆಸೆದ ದೇಹವೇ ಈ ಬೆಳಗೆರೆ ಎಂಬ ಕನ್ನಡ ಅಕ್ಷರದಚ್ಚರಿ..!
ಒಂದೇ ಆತ್ಮಕ್ಕೊಬ್ಬ ಒಬ್ಬ ನಕ್ಸಲ್‌, ಕ್ರಿಮಿನಲ್‌ ಅವೆರಡನ್ನೂ ಮೀರಿ ನಿಲ್ಲಬಲ್ಲ ಅಮ್ಮನಂಥ ಒಬ್ಬ ಏಂಜೆಲ್‌ ಜೊತೆಜೊತೆಯಾಗಿ ಪೋಣಿಸಲ್ಪಟ್ಟರೆ..? ಹಾಗೆ ಸಾಗಿದ ಕಾಲವೇ ರವಿ ಬೆಳಗೆರೆ ಎಂಬ ಪರ್ವ ಕಾಲ.

ಹಾಯ್ ಬೆಂಗಳೂರು ಪೂರ್ವದ ಪತ್ರಿಕೋದ್ಯಮವನ್ನೇ ಒಮ್ಮೆ ಗಮನಿಸಿ,
ಅದೇ ತಾನೇ ಪ್ರಜಾವಾಣಿಯ ‘ಕಾಲಮ್‌ ಲೋಕ’ದಿಂದ ಹೊರಬಂದಿದ್ದ ‘ಮೇಷ್ಟ್ರು ಲಂಕೇಶ್‌’ ಮೊದಲ ಬಾರಿಗೆ ಕನ್ನಡ ಪತ್ರಿಕೊದ್ಯಮಕ್ಕೆ ಟ್ಯಾಬ್ಲಾಯ್ಡ್‌ ಮಾದರಿಯಲ್ಲಿ ರಸ-ರೋಷಗಳನ್ನು ಉಣಬಡಿಸಿದ ಕಾಲ. ಸಾಹಿತ್ಯ ರಾಜಕಾರಣದ ಸಾಮಾಜಿಕ ಸಾಂಸ್ಕೃತಿಕ ಕ್ಷೇತ್ರಗಳ ಲೊಲ-ಲೊಟ್ಟೆಗಳನ್ನು ತನ್ನ “ಹೊಸ ಭಾಷೆ”ಯ ಏಟಿನ ಮೂಲಕ ಅಗೆದು ಬಗೆಯುತ್ತಿದ್ದ ಚಿಂದಿ ತೆಗೆಯುತ್ತಿದ್ದ ಕಾಲ… ಬಂಗಾರಪ್ಪ ‘ಬಂ’ ಆದದ್ದು, ಗುಂಡೂರಾವ್‌ ‘ಗುಂ’ ಆದದ್ದು, ಹೆಗಡೆ ‘ಗುಳ್ಳೆ ನರಿ’, ದೇಶಪಾಂಡೆ ‘ಗೊಬ್ಬರದ ಹುಳು’…ಇದೇ ಹಾದಿಯಲ್ಲಿ ಮೊಳೆತು ಸಾಗಿದ್ದು ತಳುಕು – ಬಳುಕು ಇಲ್ಲದ ಆದರೆ ಕಪ್ಪು ಬಿಳುಪಲ್ಲಿ ಹದಿಹರೆಯದ ಹುಡುಗ ಹುಡುಗಿಯರಿಂದ ನಲ್ವತ್ತರ ನಲುಗು ದಾಟಿದ್ದವರನ್ನೂ ಮೋಹಕ್ಕೆ ಕೆಡವಿದ ಹಾಯ್‌ ಬೆಂಗಳೂರು ಎಂಬ ಜನಪ್ರಿಯ ಟ್ಯಾಬ್ಲೊಯ್ಡ್ !
ಲಂಕೇಶರ ‘ಟೀಕೆ ಟಿಪ್ಪಣಿ’ಗೆ ಗಾಂಭೀರ್ಯದ ಹೊಳಪಿದ್ದರೆ ಬೆಳಗೆರೆಯ ‘ಖಾಸ್‌ಬಾತ್‌’ಗೆ ಬಾಟಮ್‌ ಐಟಂಗಳ ಸೆಳಕಿತ್ತು. ಅಲ್ಲಿ ‘ನೀಲೂ’ ಯೌವನದ ಋಜುತ್ವದ ಬೇಲಿ ಅಲ್ಲಾಡಿಸಿದರೆ ಇಲ್ಲಿ ಲವಲವಿಕೆ ಹದಿಹರಯಕೆ ಮತ್ತೇರಿಸುತ್ತಿತ್ತು.. ಒಟ್ಟಾರೆಯಾಗಿ ಈ ಎರಡು ಭಿನ್ನ ಧ್ರುವಗಳ ನಡುವೆ ಕನ್ನಡ ಪತ್ರಿಕೋದ್ಯಮ ಹೊಸತೇ ಆದ ಎರಡು ಮಾದರಿಗಳನ್ನೂ ಪ್ರತೀಮೀಕರಿಸಿತ್ತು.
ಇವು ಎಲ್ಲಕ್ಕಿಂತಲೂ ಮಿಗಿಲಾಗಿ ಹೊಳೆಯುವಂಥದ್ದು ಬೆಳಗೆರೆಯೊಳಗಿನ ಅಕ್ಷರ – ಸ್ವರ ಮೋಹ ಮತ್ತು ಜಗತ್ತನ್ನೇ ತನ್ನೊಳಗು ಮಾಡಿಕೊಳ್ಳಬಲ್ಲ ಓದಿನ ದಾಹ. ಅದು ಪಶ್ಚಿಮದ ಮಾರ್ಕ್ವೆಜ್‌ ಇರಬಹುದು, ದಿಲ್ಲಿಯ ಬರಹ ಸಾಮ್ರಾಟ, ಪತ್ರಿಕೋದ್ಯಮದ ಹಿರಿಯಣ್ಣ ಖುಷ್ವಂತ್‌ ಸಿಂಗ್‌ ಆಗಿರಬಹುದು, ನಮ್ಮದೇ ಪಕ್ಕದ ತೆಲುಗಿನ ‘ಚಲಂ’ ಇರಬಹುದು.. ಇಷ್ಟೊಂದು ಚಂದಕ್ಕೆ ಕನ್ನಡಕ್ಕೆ ಬಂದದ್ದು ಅದೇ ಮೊದಲು.

ಅಪ್ಪನ ಬೆಂಗಾವಲಿನ ಬೇಲಿ ಇಲ್ಲದೆ, ಅಮ್ಮನ ಪ್ರೀತಿ, ಕಕ್ಕುಲಾತಿಯ ಸೆರಗಲ್ಲಿ ಅಮ್ಮನ ಮಗನಾಗಿಯೇ ಬೆಳೆದ ಬೆಳಗೆರೆ ದೇವಳದ ಬಸವನಂತೆ ಹೋದಲ್ಲೆಲ್ಲ ಪುಂಡು ಮಾಡುತ್ತ, ಅಶಿಸ್ತಿನ ಅಡ್ನಾಡಿಯಾಗಿ, ಬಾಲ್ಯ, ಯೌವನವನ್ನು ದಾಟಿದ್ದು… ಒಟ್ಟೊಟ್ಟಿಗೆ ಆತನೊಳಗೊಬ್ಬ ಅಸೀಮ ಸಾಹಸಿಯನ್ನು ಸದಾ ಹೊಸತನ್ನು ಹುಡುಕುವ ಹಪಾಹಪಿಯ ಅಲೆಮಾರಿಯನ್ನು ಸೃಷ್ಟಿಸಿದ್ದು ಜ್ವಲಂತ ಸತ್ಯ.
ವಿಶಿಷ್ಟ-ವಿಕ್ಷಿಪ್ತ ವ್ಯಕ್ತಿ-ವ್ಯಕ್ತಿತ್ವದ ರವಿ ಬೆಳಗೆರೆ ಕನ್ನಡ ಪತ್ರಿಕೋದ್ಯಮಕ್ಕೆ ತಂದಿತ್ತ ಸಾಹಸದ ಅಧ್ಯಾಯ ಎಂದಿಗೂ ಮರೆಯಲಾಗದ್ದು. ಅದು ಕಾರ್ಗಿಲ್‌ನ ಕಣಿವೆಯಿಂದ ಬಂದ ನೇರ ವರದಿಗಳಿರಬಹುದು, ಅಫ್ಘಾನಿನ ಯುದ್ಧ ಪೀಡಿತ ಫಸ್ತೂನ್‌ ಕಣಿವೆಯ ಜೀವಂತ ವರದಿಗಳಿರಬಹುದು, ಆಫ್ರಿಕಾದ ಜನಾಂಗೀಯ ಕಲಹದ ಒಳ ನೋಟಗಳಿರಬಹುದು, ಸದಾ ಯುದ್ಧ ಬೇಡುತ್ತಾ ಕಾಲ್ಕೆರೆಯುವ ಪಾಕಿಸ್ಥಾನದ ಶಹರಗಳಿಂದ ಬಂದ ಗುಪ್ತ ಷಡ್ಯಂತ್ರಗಳ ನೇರಾನೇರ ವರದಿಯಿರಬಹುದು… ಕನ್ನಡದ ಪತ್ರಕರ್ತನೊಬ್ಬ ಕನ್ನಡ ಪತ್ರಿಕೆಗಾಗಿಯೇ ದೇಶದ ಸರಹದ್ದು ದಾಟಿ ವರದಿ ಮಾಡಿದ್ದು ಅದೇ ಮೊದಲು.
ಬೆಳಗೆರೆಯನ್ನು ಈ ಹೊತ್ತು ಇನ್ನೂ ಧೇನಿಸಬೇಕಾದ ಕಾರಣಗಳಿವೆ —
ಅದರಲ್ಲೊಂದು ಟ್ಯಾಬ್ಲೊಯ್ಡ್ ಪತ್ರಿಕೋದ್ಯಮವನ್ನು ಸಮಾಜವಾಹಿನಿಯ ಸರ್ವಧಮನಿಗಳಲ್ಲಿ ಹರಿಸಿದ್ದು…ಅಸಾಧಾರಣ ನೆನಪುಗಳ ಮೆರವಣಿಗೆಯನ್ನೆ ಪೇರಿಸಿಡುತ್ತಿದ್ದ ಸೃಜನಶೀಲ- ಹೊಸತನದ ಬರವಣಿಗೆಯ ಭಾಷ್ಯದಂತಿದ್ದ ಖಾಸ್ ಬಾತ್,ಬಾಟಮ್ ಐಟಂ ಗಳು ಆಗತಾನೆ ಕಾಲೇಜಿಗೆ ಕಣ್ಣು ಬಿಡುತ್ತಿದ್ದ ಹರಯದ ಹುಡುಗ ಹುಡುಗಿಯರ ಜೊತೆಗೆ ಸಾಮಾನ್ಯ ಟ್ಯಾಕ್ಸಿ- ರಿಕ್ಷಾ ಚಾಲಕನ ಬದುಕಿಗೂ, ಮನೆವಾರ್ತೆಯಲ್ಲೆ ಕಳೆದು ಹೋಗಿದ್ದ ಗೃಹಿಣಿಯ ಬದುಕಿಗೂ ಎಲ್ಲೋ ತಾಳೆಹಾಕುತ್ತಿದ್ದವು..
ಬೆಳಗೆರೆಯೊಳಗೆ ಸದಾ ಗರಿಗೆದರುತ್ತಿದ್ದ ಅಸಾಧಾರಣ ಕತೆಗಾರ ಕಾದಂಬರಿಗಾರ ನುಡಿಚಿತ್ರಗಳ ಕುಸುರಿಗಾರ ಕನ್ನಡದ ಮುಖ್ಯವಾಹಿನಿಯ ಬರಹಗಾರ, ಸಾಹಿತಿ, ಕವಿಗಳನ್ನೂ ಒಟ್ಟಿಗೇ ಸೆಳೆದುಕೊಳ್ಳುತ್ತಿತ್ತು. ಹಾಗಾಗಿಯೆ ಇರಬೇಕು ಕಟು ಟೀಕಾಕಾರರಿದ್ದಂತೆ ಅನಂತಮೂರ್ತಿ, ಕೆ. ಎಸ್. ನ. , ಹಾಮಾನಾ, ಸೀತಾರಾಮ್ ಅವರಂತಹ ದೊಡ್ಡವರು ಬೆಳಗೆರೆ ಜೊತೆಗಿದ್ದರು!
ಭಿನ್ನತೆ-ಹೊಸತನವೆ ಬಂಡವಾಳ
ನೆನಪು, ಮತ್ತು ಆ ನೆನಪುಗಳನ್ನೆ ಅಕ್ಷರ ಮತ್ತು ಸ್ವರಗಳ ಮೂಲಕ ಬಹು ಭಿನ್ನವಾಗಿ ಸೃಜನಾತ್ಮಕವಾಗಿ ಕಟ್ಟಿ ಕೊಟ್ಟು ಒಂದು ‘ಬಹುಜನ ಪ್ರೀತಿಯ’ ಅಚ್ಚಿನಲ್ಲಿ ಎರಕ ಹೊಯ್ಯುವ ಕಲೆ ರವಿಗೆ ಅದ್ಭುತವಾಗಿ ಕರಗತವಾಗಿತ್ತು.
ಪಾವೆಂ ಹೇಳಿದ ಕತೆಗಳು, ಮಾಂಡೋವಿ, ಹಿಮಗಿರಿಯ ನಾಡಿನಲ್ಲಿ, ಹಿಮಾಲಯನ್ ಬ್ಲಂಡರ್, ಚಲಂ ಇವೆಲ್ಲ ಅವರ ಕಥನಕಲೆ, ಅವರ ಬರಹಗಾರಿಕೆಯ ಕುಸುರಿ, ಅನುವಾದ ವೈಶಿಷ್ಟ್ಯ ಕ್ಕೆ ಸಾಕ್ಷಿ !
ಈಟಿವಿಯಲ್ಲಿ ಎಂದೂ ಮರೆಯದ ಹಾಡು ಸರಣಿ ರವಿಯ ಬಹುಮುಖೀ ಸೃಜನತೆಯ ಅಮರ ಕಾಣ್ಕೆ. ಬಹುಶಃ ಎಲ್ಲ ವಯಸ್ಸಿನ ಜನ ಒಂದೇ ಕಾರ್ಯಕ್ರಮದಲ್ಲಿ ಎದೆ ತಣಿಸಿಕೊಂಡ ಸರಣಿ ಇದು.ಕೆ ಎಸ್ ನ , ನಿಸಾರ್, ಕುವೆಂಪು, ಬೇಂದ್ರೆ,ಇತ್ಯಾದಿ ಕವಿ ಕಾವ್ಯ ಭಾವ – ಪ್ರೇಮಗೀತೆಗಳು ಹನಿ ಹನಿಯಾಗಿ ಗೀತೆಗಳು ನಮ್ಮೊಳಗೆ ಅದ್ಭುತ ನಿರೂಪಣೆಯ ಸೊಗಡಿನಲ್ಲಿ ಇಳಿದದ್ದು, ರವಿ ಬೆಳಗೆರೆ ಅಕ್ಷರಗಳನ್ನು ದಾಟಿ ಎಲ್ಲರೆದೆಗಳಲ್ಲಿ ಸ್ವರ ಕಂಪನಗಳ ಅಲೆ ಎಬ್ಬಿಸಿದ್ದು ಇಲ್ಲೇ!
ಮುಖೇಶ್ , ರಫಿ, ಉರ್ದು ಗಝಲ್ ಗಳು ಒಳಮನದಲ್ಲಿ ಸೇರೆ ಇಂಗಿ- ತಂಗಿದ್ದು.. ಎಲ್ಲ, ಎಲ್ಲ ರವಿಯ ಕಾಣ್ಕೆಗಳೆ !
ತನ್ನ ಬಹುಕಾಲದ ಕನಸೊಂದನ್ನು ವಿಶಿಷ್ಠವಾದ ಪ್ರಾರ್ಥನಾ ಸ್ಕೂಲಿನ ಸ್ಥಾಪನೆಯ ಮೂಲಕ ನನಸಾಗಿಸಿದ ಬೆಳಗೆರೆ ಅಕ್ಷರಗಳಲ್ಲದೆ, ಅಕ್ಷರ ‘ಮೂಲ’ ದಿಂದಲೆ ಶಾಲೆ ಕಟ್ಟಿದ ಸಾಧಕ !
ನಿರುದ್ಯೋಗಿಯಾಗಿ ಒಂದೊಮ್ಮೆ ಉದ್ಯೋಗಕ್ಕಾಗಿ ಅಲೆದಾಡಿದ್ದ ಬೆಳಗೆರೆ ನೂರಾರು ಮಂದಿಗೆ ನೌಕರಿ ಕಲ್ಪಿಸಿದ ಅನ್ನದಾತನಾದದ್ದು ವಿಸ್ಮಯವೇ ಸರಿ.

ಮಧ್ಯವಯಸ್ಸಿನಲ್ಲಿ ಸಿಲ್ವರ್ ಸ್ಕ್ರೀನ್ ನತ್ತ ಕಾಲಿಟ್ಟ ರವಿ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡದ್ದು, ಪತ್ರಿಕೋದ್ಯಮದಂತೆ ಅಲ್ಲೂ ಬಿಸಿ- ಹಸಿ ಚರ್ಚೆಗೆ ಗ್ರಾಸವಾದದ್ದು ಎಲ್ಲವೂ ಸಿನೇಮಾದಷ್ಟೇ ಸಿನಿಮೀಯ. ಹಾಗೇ ನೋಡಿದರೆ ರವಿಯ ಬದುಕು ಕೂಡ ಒಂದು ಸಿನೇಮಾವೇ. ಸಿನೇಮಾಗಳಿಗೆ ಕತೆ ಬರೆದ ರವಿಯ ಬದುಕು ಕೂಡ ಕೆಲವು ಸಿನೇಮಾಗಳಿಗೆ ಸರಕಾದದ್ದು, ಹಾಯ್‌ ಬೆಂಗಳೂರು ಪತ್ರಿಕೆಯೂ ಸಿನೇಮಾಕ್ಕೆ ಪ್ರೇರಣೆಯಾದದ್ದೆಲ್ಲ ಪತ್ರಿಕೋದ್ಯಮದ ವಿಸ್ಮಯಗಳೇ!
ಬೆಳಗೆರೆಯಂತೆ ಜೀವಿಸಿದ, ಬರೆದ, ಬರೆಸಿದ ಲೇಖಕ ಈ ಹೊತ್ತಿಗಿನ್ನೂ ಇನ್ನೊಬ್ಬನಿಲ್ಲ. ಲೇಖಕರಿಂದಷ್ಟೆ ಅಲ್ಲ, ದೂರದೂರದ ಮುಂಬಯಿಯಂಥ ಹೊರನಾಡುಗಳಲ್ಲೂ ತನ್ನ ಅಕ್ಷರವಂತಿಕೆಗೆ ಓದುಗರನ್ನು ಸೃಷ್ಟಿಸಿದ ರವಿ, ಸಾಮಾನ್ಯ ಹೊಟೇಲ್ ಹುಡುಗನನ್ನೂ ಬರಹದ ಕೃಷಿಯತ್ತ ಆಕರ್ಷಿಸಿದ ಕಾಂತಾದೇಹಿ!
ಸಾಹಿತ್ಯ- ಪತ್ರಿಕೋದ್ಯಮದಾಚೆಗೂ ರವಿ ಬೆಳಗೆರೆ ನೂರು ವಿವಾದಗಳ ಸರದಾರ! ಸಕಾಲಿಕ ಸಾಂದರ್ಭಿಕ ವಿದ್ಯಮಾನಗಳಿಗೆ ತನ್ನ ಅದ್ಭುತ ಅಕ್ಷರ ಮಾದರಿಯ ಲೇಪ ಹಚ್ಚಿ ಮಾರುಕಟ್ಟೆ ಮಾಡಿಕೊಳ್ಳುತ್ತಿದ್ದ ಬೆಳಗೆರೆ ಇನ್ನೊಂದೆಡೆ ಏಡ್ಸ್ ಮಾರಿಗೆ ತುತ್ತಾದ ವೀಣಾಧರಿಯನ್ನು ಉಡಿಯಲ್ಲಿಟ್ಟು ಸಾಕಿದ ಉದಾರ ಹೃದಯಿ !
ಇನ್ನೊಬ್ಬರ ಖಾಸಗಿ ಬದುಕನ್ನು ಹಸಿಹಸಿಯಾಗಿ ಎಳೆದು ಜೋಳಿಗೆ ತುಂಬಿಕೊಂಡಂತೆ ತನ್ನಮ್ಮನ ತಿಂಗಳ ನೋವಿನ ಹಸಿ ಬಟ್ಟೆ ತೊಳೆದು ಮಮತೆ-ಅಕ್ಕರೆ, ಮಾತೃತ್ವಕ್ಕೆ ಹೊಸ ಭಾಷ್ಯ ಬರೆದ ಮೃಣ್ಮಯಿ!
ತನಗಿಂತ ಹತ್ತರ ಮೇಲೊಂದು ಸಂವತ್ಸರ ದೊಡ್ಡವಳನ್ನು ವರಿಸುವ ಪ್ರೇಮಿ. ಮತ್ತದೇ ಉಸಿರಲ್ಲಿ ಇನ್ನೊಂದು ತನ್ನಾಯುಷ್ಯದ ಅರ್ಧ ಪ್ರಾಯದವಳ ಜೊತೆ ಪ್ರೇಮ ದಾಂಪತ್ಯ ಹೊಸೆವ ಕೌತುಕದ ವ್ಯಕ್ತಿ.
ಹೇಗಂತ ಬಣ್ಣಿಸುವುದೀ ರವಿಯನ್ನು. ಪ್ರೇಮಿ ಎಂದೆ ಕಾಮಿ ಎಂದೆ? ಅವೆರಡೂ ಹೌದಾಗಿರುವ ಅದೇ ಹೊತ್ತಲ್ಲಿ ಇನ್ನೂ ಹತ್ತು ಹಲವು ಭಾವಗಳ ಪೋಷಕ ..!
ಹಾಗಾಗಿಯೆ ಇರಬೇಕು ಬೆಳಗೆರೆ ಕೆಲವರ ಜೀವಾಜೀವ ಸ್ನೇಹಿ.ಕೆಲವರ ಆಜನ್ಮ ವೈರಿ.ಕೆಲರಿಗೆ ಉರಿ ಧಾವಾಗ್ನಿ. ಇನ್ನು ಕೆಲವರಿಗೆ ಸಂಜೀವನಿ.ಎಲ್ಲೋ ಕೆಲವರಿಗೆ ಇನ್ನೆಂದೂ ಹುಟ್ಟಬಾರದ ಶಕುನಿ. ಕೆಲರಿಗೆ ಮುಟ್ಟಬಾರದ ಅಕ್ಷರ ಹಾದರ. ಅದೆಷ್ಟೊ ಮಂದಿಗೆ ಹೃದಯಾಂತರಾಳದ ಪರಮ ಆದರ . ಕನ್ನಡದ ಅದೆಷ್ಟೊ ಮನಸು ಹೃದಯಗಳಿಗೆ ಇನ್ನೊಂದು ಹುಟ್ಟಿದ್ದರೆ,ರವೀ ಇದೋ ನಮ್ಮದೇ ಮಡಿಲು – ಎಂಬ ಅಮೃತ ವಾಹಿನಿ !!

ಅಂತೂ ಸಾವಿದು ಬರಿದೆ ಸಾವಲ್ಲ. ರವಿ ಬೆಳಗೆರೆ ಇಲ್ಲದ ನಮ್ಮೊಳಗಿನ ಅಕ್ಷರದ ಭೂಮಿ ಬಹುಕಾಲ ಹಡಿಲು!
ಈಗ್ಗೆ ಎರಡು ದಶಕಗಳ ಹಿಂದೆ ಅಂದರೆ 9೦ರ ದಶಕದ ಕೊನೆಯಲ್ಲಿ ಮುಂಬಯಿಯಂತಹ ಹೊರನಾಡಲ್ಲಿ ನಾವು ಏರ್ಪಡಿಸಿದ್ದ ಪತ್ರಿಕೋದ್ಯಮ ಸಂವಾದಕ್ಕೆ ಸಭಾಂಗಣ ತುಂಬಿ ಕಿಕ್ಕಿರಿದು ಹೋಗಿತ್ತು ಎಂದರೆ ಊಹಿಸಬಹುದು ಬೆಳಗೆರೆ ಯ ಪ್ರಭಾವಳಿ.
ಆ ಗೋಷ್ಠಿ ಮುಗಿಯುತ್ತಲೆ ನನಗೊಂದು ಅರ್ಕೆಸ್ಟ್ರಾ ಬಾರ್ ನಲ್ಲಿ ಕುಳಿತುಕೊಳ್ಳಬೇಕಲ್ಲ ಎಂದ ಬೆಳಗೆರೆ ಯಾವ ಇಮೇಜಿನ ಹಂಗಿಲ್ಲದೆ ಆ ರಾತ್ರಿ ಹರಿದು ನಸುಕಿನವರೆಗೂ ಚೆಂಬೂರಿನ ಬಾರೊಂದರಲ್ಲಿ ತನ್ನ ನೆಚ್ಚಿನ ಪೇಯ, ತುದಿಯಲ್ಲಿ ಸುಡುವ ಸಿಗರೇಟ್ ಸುರುಳಿ ಹೊಗೆ ಚೆಲ್ಲುತ್ತ ಬಾರ್ ನೃತ್ಯಗಾತಿಯರ ತಾಳಕ್ಕೆ ತೂಗುತ್ತಾ ಮುಖೇಶ್ ನ ದರ್ದ್ ಬರೇ ಹಾಡುಗಳಲ್ಲಿ ತನ್ನಿರವು ಮರೆತು ಕೂತಿದ್ದರು !….ಇದು ಬೆಳಗೆರೆ

ದಯಾಸಾಗರ್‌ ಚೌಟ,ಕಳ್ಳಿಗೆ (ಪತ್ರಕರ್ತರು, ಮುಂಬಯಿ)

ದಯಾಸಾಗರ್‌ ಚೌಟ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!