Friday, September 24, 2021
spot_img
Homeಅಂಕಣಆರೋಗ್ಯಧಾರಾ -ದೀಪಾವಳಿ ಹಬ್ಬದಲ್ಲಿರುವ ಆರೋಗ್ಯದ ಗುಟ್ಟು

ಆರೋಗ್ಯಧಾರಾ -ದೀಪಾವಳಿ ಹಬ್ಬದಲ್ಲಿರುವ ಆರೋಗ್ಯದ ಗುಟ್ಟು

ಬೆಳಕಿನ ಹಬ್ಬ ದೀಪಾವಳಿ ಅದರ ಜೊತೆಗೆ ನೆನಪಿಗೆ ಬರುವುದು ವಿವಿಧ ರೀತಿಯ ಸಿಹಿ ತಿನಿಸುಗಳು, ಎಣ್ಣೆಸ್ನಾನ ,ಪಟಾಕಿ .
ಪ್ರತಿ ಹಬ್ಬಕ್ಕೂ ಅದರದ್ದೇ ಆದ ಆಚರಣೆ ಇದೆ. ಈ ಆಚರಣೆಯನ್ನು ಅವಲೋಕಿಸಿದಾಗ ಗೊತ್ತಾಗುವುದೇನೆಂದರೆ ಆ ಹಬ್ಬಗಳ ಆಚರಣೆಯಲ್ಲಿ ಅಡಗಿರುವ ಆರೋಗ್ಯದ ಗುಟ್ಟು. ಯುಗಾದಿಯಲ್ಲಿ ಬೇವು ಬೆಲ್ಲವಿರಲಿ, ಸಂಕ್ರಾಂತಿಯ ಎಳ್ಳುಬೆಲ್ಲವಿರಲಿ ಆರೋಗ್ಯದ ದೃಷ್ಟಿಯಿಂದ ನಮ್ಮ ಪೂರ್ವಜರು ಮಾಡಿರುವಂತಹ ಕ್ರಮದಲ್ಲಿ ಆರೋಗ್ಯದ ಗುಟ್ಟು ಅಡಗಿದೆ.
ದೀಪಾವಳಿಯು ಚಳಿಗಾಲ ಆರಂಭವಾಗುವ ಕೆಲವು ದಿನಗಳ ಮುಂಚಿತವಾಗಿ ಬರುವುದು. ಪರಿಸರದ ಬದಲಾವಣೆಗೆ ತಕ್ಕಂತೆ ನಮ್ಮ ದೇಹದಲ್ಲಿ ಆಗುವ ಬದಲಾವಣೆಗೆ ಹೊಂದಿಕೊಂಡು ಹೋಗುವ ನಿಯಮಗಳನ್ನು ಪಾಲಿಸಿದರೆ ಆರೋಗ್ಯವೂ ನಮ್ಮದಾಗುವುದು .
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಧ್ಯಾನ, ಪ್ರಾಣಾಯಾಮ, ವ್ಯಾಯಾಮ, ಯೋಗ ಮಾಡುವುದರಿಂದ ನಮ್ಮ ಮನಸ್ಸು ಹಾಗೂ ದೇಹವು ಉಲ್ಲಸಿವಾಗುವುದರಲ್ಲಿ ಸಂಶಯವಿಲ್ಲ. ಚಳಿಗಾಲದಲ್ಲಿ ವಾತ ಹಾಗು ಪಿತ್ತ ವೃದ್ಧಿಯಾಗುವುದರಿಂದ ಇದನ್ನು ಶಮನ ಮಾಡುವಂತಹ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ದೀಪಾವಳಿಗೆ ಎಣ್ಣೆ ಸ್ನಾನ ಮಾಡುವ ಕ್ರಮ ಯಾಕೆ ಗೊತ್ತೆ ? ಈ ಸಮಯದಲ್ಲಿ ವಾತ ವೃದ್ಧಿಯಾಗುವುದರಿಂದ ತ್ವಚೆಯು ಶುಷ್ಕಗೊಳ್ಳುವುದು. ಎಣ್ಣೆಹಚ್ಚಿ ತಿಕ್ಕಿ ಸ್ನಾನ ಮಾಡುವುದರಿಂದ ತ್ವಚೆಯ ಶುಷ್ಕತೆ ದೂರವಾಗುವುದಲ್ಲದೆ ತ್ವಚೆಯ ಕಾಂತಿಯೂ ಕೂಡ ಹೆಚ್ಚುವುದು. ಬಲಾತೈಲ ,ಅಶ್ವಗಂಧ ತೈಲ, ಮಹಾಮಾಷಾದಿ ತೈಲ ಉಪಯೋಗಿಸುವುದು ಹಿತಕರ. ಮನೆಯಲ್ಲಿ ಇರುವಂತಹ ಎಳ್ಳೆಣ್ಣೆ, ತೆಂಗಿನೆಣ್ಣೆ ಕೂಡ ಬಳಸುವುದು ಒಳ್ಳೆಯದು.
ಇನ್ನೂ ಉದ್ವರ್ತನ ಎಂದರೆ ಚೂರ್ಣವನ್ನು ಬಳಸಿ ಮೈಗೆ ತಿಕ್ಕುವುದು .ಇದು ಕಫ ಹಾಗೂ ಕೊಬ್ಬು ಕರಗಲು ಉತ್ತಮ ಕ್ರಿಯೆ. ಹುರುಳಿ ಹಿಟ್ಟು ಕೊಬ್ಬನ್ನು ಕರಗಿಸಲು ಉತ್ತಮವಾದ ದ್ರವ್ಯ ಎಂದು ಆಯುರ್ವೇದದಲ್ಲಿ ಹೇಳಿದೆ. ಕಡ್ಲೆ ಹಿಟ್ಟು, ಹೆಸರಹಿಟ್ಟು ತ್ವಚೆಗೆ ಹಿತ . ತ್ವಚೆಯ ಹೊಳಪನ್ನು ಹೆಚ್ಚಿಸಲು ಹಾಲು, ಅರಸಿನ, ಜೇನುತುಪ್ಪ, ಕಡ್ಲೆಹಿಟ್ಟು ಬೆರಸಿ ಉದ್ವರ್ತನ ಮಾಡಬಹುದು. ವಾತಾವರಣ ತಂಪು ಇರುವುದರಿಂದ ಹದ ಬಿಸಿ ನೀರಿನಲ್ಲಿ ಬೇವಿನ ಎಲೆಯನ್ನು ಹಾಕಿ ಸ್ನಾನ ಮಾಡುವುದು ಹಿತಕರ. ಇದರಿಂದ ತ್ವಚೆಯ ಕೊಳೆ ತುರಿಕೆ ಕಡಿಮೆಗೊಳಿಸಿ ದಣಿವು ನಿವಾರಣೆಯಾಗುತ್ತದೆ. ತಲೆಸ್ನಾನ ಮಾಡುವಾಗ ಬಿಸಿ ನೀರನ್ನು ಬಳಸಬಾರದು . ಇದು ಹಾನಿಯುಂಟು ಮಾಡುತ್ತದೆ.
ಸಿಹಿತಿನಿಸು ಇಲ್ಲದೆ ದೀಪಾವಳಿಯು ಸಪ್ಪೆ ಎನಿಸುವುದು. ಇದಕ್ಕೂ ಕೂಡ ಕಾರಣವಿದೆ. ವಾತ ಹಾಗು ಪಿತ್ತ ವೃದ್ಧಿಯಾಗಿರುವುದರಿಂದ ಮಧುರ ರಸ ಸೇವಿಸುವುದು ಒಳ್ಳೆಯದು. ಇದು ಕುಪಿತ ವಾತಪಿತ್ತವನ್ನು ಶಮನಗೊಳಿಸುತ್ತದೆ.ಈ ಸಮಯದಲ್ಲಿ ಜೀರ್ಣಶಕ್ತಿಯೂ ಉತ್ತಮವಿರುವುದರಿಂದ ತುಪ್ಪ ಹಾಗು ಬೆಲ್ಲದಿಂದ ತಯಾರಿಸಿದ ಸಿಹಿ ತಿನಿಸು ಸೇವಿಸುವುದು ಆರೋಗ್ಯಕರ. ಗುರು ಆಹಾರ ಸೇವಿಸಬಹುದಾದ ಕಾಲವಿದು. ತುಪ್ಪದ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ತುಪ್ಪದ ದೀಪ ಹಚ್ಚುವುದು ತುಳಸಿ, ಲೋಳೆಸರ ಗಿಡವನ್ನು ನೆಡುವುದರಿಂದ ವಾತಾವರಣ ಶುದ್ಧಗೊಳ್ಳುವುದು. ತುಳಸಿ ,ಬೆಲ್ಲ, ಅರಸಿನ, ಕರಿಮೆಣಸಿನಿಂದ ತಯಾರಿಸಿದ ಕಷಾಯ ವಾರದಲ್ಲಿ 2 ದಿನ ಸೇವಿಸಿುವುದು ಹಿತಕರ. ಇದು ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುವುದು. ಇಷ್ಟೆಲ್ಲ ಪಾಲಿಸಿದರೆ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿರುವುದು ಖಚಿತ.
ಸಂಭ್ರಮ ಸಡಗರದ ಜೊತೆ ಆರೋಗ್ಯವಂತವಾಗಿರಲಿ ಎಲ್ಲರ ದೀಪಾವಳಿ.
ಡಾ.ಹರ್ಷಾ ಕಾಮತ್
ಖ್ಯಾತ ಆಯುರ್ವೇದ ತಜ್ಞರು

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!