Saturday, September 25, 2021
spot_img
Homeಅಂಕಣಯಕ್ಷಾಂಕಣ - ತಾಳಮದ್ದಳೆಯಲ್ಲಿ ಅರ್ಥಗಾರಿಕೆ

ಯಕ್ಷಾಂಕಣ – ತಾಳಮದ್ದಳೆಯಲ್ಲಿ ಅರ್ಥಗಾರಿಕೆ

ತಾಳಮದ್ದಳೆ ಕೂಟಗಳಲ್ಲಿ ಅರ್ಥ ಹೇಳುವುದೂ ಒಂದು ಕಲೆ . ಇದನ್ನು ಹೇಗೆ ಪ್ರಸ್ತುತಪಡಿಸಬಹುದು ಎಂಬುದನ್ನು ಈ ಲೇಖನದಲ್ಲಿ ಬರೆದಿದ್ದೇನೆ. ಈ ಲೇಖನದಲ್ಲಿ ಬರುವ ವಿಷಯಗಳೆಲ್ಲಾ ವೃತ್ತಿಪರ ಕಲಾವಿದರಿಗೆ ತಿಳಿದಿರುವುದೇ . ಆದ ಕಾರಣ ಹವ್ಯಾಸಿ ಅರ್ಥಧಾರಿಗಳಿಗಾಗಿ ಈ ಲೇಖನ . ಆದರೂ ವೃತ್ತಿಪರರಿಗೂ ಅನ್ವಯವಾಗುವಂಥಹುದು .
ಅರ್ಥಧಾರಿ ಎನಿಸಬೇಕಾದರೆ ಈ ಕೆಳಗಿನ ಅಂಶಗಳ ಬಗ್ಗೆ ಗಮನ ಹರಿಸಬೇಕು .
1 .ಆಕರ : ಅರ್ಥಧಾರಿಗಳು ರಾಮಾಯಣ , ಮಹಾಭಾರತ ಹಾಗೂ ಪೌರಾಣಿಕ ಕಥೆಯನ್ನು ತಿಳಿದಿರಬೇಕಾದುದು ಪ್ರಥಮ ಅರ್ಹತೆ .ಶಾಸ್ತ್ರ , ವೇದ , ಉಪನಿಷತ್ತುಗಳ ಬಗ್ಗೆ ಓದಿದರೆ ಅರ್ಥ ವೈಭವ ಇನ್ನಷ್ಟು ಉತ್ತಮವಾದೀತು ” ಆಶುಕವಿತ್ವ ” ಇದ್ದರೆ ಒಳ್ಳೆಯದು .
2 . ಬದ್ಧತೆ : ಅರ್ಥಧಾರಿಗಳು ಪ್ರಸಂಗಕ್ಕೇ ಬದ್ಧರಾಗಬೇಕು . ಮೂಲ ಹಾಗೂ ಅನುವಾದಗಳು ಏನಿದ್ದರೂ ಪ್ರಸಂಗದ ಪದ್ಯಗಳಿಗೇ ಬದ್ಧನಾಗಿರಬೇಕಾದುದು ಅರ್ಥಧಾರಿಗಳ ಪ್ರಧಾನ ಅವಶ್ಯಕತೆ ಹಾಗೂ ಕರ್ತವ್ಯ . ಕೆಲವು ಪ್ರಸಂಗಗಳಲ್ಲಿ ಮೂಲಕ್ಕೆ ವ್ಯತಿರಿಕ್ತವಾದುದು ಇದ್ದರೂ ಅಥವಾ ಮೂಲದಲ್ಲೇ ಇಲ್ಲದ್ದು ಇದ್ದರೂ ಆ ಪ್ರಸಂಗದ ಮಟ್ಟಿಗೆ ಪದ್ಯಗಳಲ್ಲಿ ಇರುವುದೇ ಸರಿ . ಪ್ರಸಂಗದ ಆಶಯಕ್ಕೇ ಬದ್ಧನಾಗಿರಬೇಕೇ ಹೊರತು ಮೂಲಕ್ಕಲ್ಲ .ಹಾಗೆಂದು ಮೂಲದ ಜ್ಞಾನ ಹೊಂದಿರಬೇಕು.ಉದಾಹರಣೆ : ” ಕೃಷ್ಣಾರ್ಜುನ ಕಾಳಗ “
” ರಾಮಾಂಜನೇಯ ಯುದ್ಧ ” ಮೂಲದಲ್ಲಿಲ್ಲದ ಪ್ರಕರಣ . ಆದರೂ , ಇಂಥಹ ಪ್ರಸಂಗಗಳಲ್ಲಿ ಪ್ರಸಂಗದ ಪದ್ಯಗಳಿಗೇ ಅರ್ಥಧಾರಿಗಳು ಬದ್ಧರಾಗಬೇಕು.ಆ ಪ್ರಸಂಗದ ಮಟ್ಟಿಗೆ ಪ್ರಸಂಗದ ಪದ್ಯಗಳೇ ಅರ್ಥಕ್ಕೆ ಆಧಾರ. ಅದೇ ರೀತಿ ಮೂಲಕ್ಕೆ ಭಿನ್ನವಾದುದು‌ ಪ್ರಸಂಗಗಳಲ್ಲಿರಬಹುದು.ಆದರೆ ಪ್ರಸಂಗದ ಪದ್ಯವೇ ಅರ್ಥಧಾರಿಗಳಿಗೆ ಆಧಾರವಾಗಬೇಕಾಗುತ್ತದೆ.ಮೂಲದಲ್ಲಿ ಆ ರೀತಿ ಇಲ್ಲವೆಂದು ಸಾಧಿಸಲು ಹೋಗುವಂತಿಲ್ಲ.


3 . ಅರ್ಥಧಾರಿಗಳು ಅರ್ಥ ಹೇಳುವಾಗ ಆ ಪಾತ್ರದ ಘನತೆ ಅರಿತು ಅರ್ಥ ಹೇಳಬೇಕೇ ಹೊರತು ತಮ್ಮ ವ್ಯಕ್ತಿ ಪ್ರತಿಷ್ಠೆ ಬದಿಗಿರಿಸಬೇಕು. ತಾನು ಪಾತ್ರವಾಗಬೇಕೇ ಹೊರತು ಪಾತ್ರ ತಾನಾಗಕೂಡದು. ತನ್ನಲ್ಲಿ ವಿದ್ವತ್ ಇದೆಯೆಂಬ ಕಾರಣಕ್ಕೋ ಅಥವಾ ಎದುರು ಪಾತ್ರಧಾರಿ ದುರ್ಬಲನೆಂದೋ ತಿಳಿದು “ವಿತಂಡವಾದ ” ಮಾಡಕೂಡದು. ಸೋಲಬೇಕಾದ ಪಾತ್ರ ಸೋಲಬೇಕೇ ಹೊರತು ತನ್ನ ವಿದ್ವತ್ತಿನ ಮೂಲಕ ” ಗೆಲ್ಲಿಸುವುದು ” ಸರ್ವಥಾ ಕಲೆಗೆ ಮಾಡುವ ಅಪಚಾರ. ಪ್ರಸಂಗದಲ್ಲಿ ಪಾತ್ರದ ಅನಾವರಣವಾಗಬೇಕೇ ಹೊರತು ಪಾತ್ರಧಾರಿಗಳ ಅನಾವರಣವಾಗಕೂಡದು. ನಮ್ಮ ವಿದ್ವತ್ತು ಆ ಪ್ರಸಂಗಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಳಸಿಕೊಳ್ಳಬೇಕು .
4 . ಸಂಸ್ಕೃತ ಶ್ಲೋಕಗಳ ಬಳಕೆ : ಪಾತ್ರದ ಔಚಿತ್ಯ ಅರಿತು ಸಂಸ್ಕ್ರತ ಶ್ಲೋಕ ಬಳಸಬೇಕೇ ಹೊರತು ಅರ್ಥಧಾರಿಗಳು ತಮಗೆ ತಿಳಿದಿದೆ ಎಂಬ ಕಾರಣಕ್ಕೆ ಸಂಸ್ಕೃತ ಶ್ಲೋಕಗಳನ್ನು ಬಳಸಬಾರದು .ಕಿರಾತ , ಅಗಸ , ಓಲೆದೂತ, ಕುರುಬ ಮುಂತಾದ ಪಾತ್ರ ಮಾಡುವಾಗ ಸಂಸ್ಕ್ರತ ಶ್ಲೋಕ ಬಳಕೆ ಸಾಧುವಲ್ಲ‌ .ಅದೇ ರೀತಿ ಶೂರ್ಪಣಖೀ , ಮಹಿಷಾಸುರ , ಬಕಾಸುರ ,ಕಿಮ್ಮೀರ ಮುಂತಾದ ರಾಕ್ಷಸ ಪಾತ್ರಗಳು ಮಿತಿಮೀರಿ ಸಂಸ್ಕೃತ ಶ್ಲೋಕ ಬಳಸಿದರೆ ಅಭಾಸವಾಗುತ್ತದೆ.ಸಂಸ್ಕೃತ ಶ್ಲೋಕಗಳನ್ನು ಹೇಳುವಾಗ ಅದರ ಅರ್ಥವನ್ನೋ‌ ಭಾವವನ್ನೋ ಬಿಡಿಸಿ ಹೇಳಿದರೆ ಅರ್ಥದ ಘನತೆ ಹೆಚ್ಚುತ್ತದೆ.
5 . ವಾದಗಳು ಸಂವಾದವಾಗಿರಬೇಕೇ ಹೊರತು ವಿವಾದಕ್ಕೆ ತಿರುಗಬಾರದು .ಇಂಥಹ ಸಂದರ್ಭ ಬಂದಾಗ , ಕೂಡಲೇ ಮುಂದಿನ ಪದ್ಯಕ್ಕೆ‌” ಎತ್ತುಗಡೆ ಕೊಡುವುದು ” ಜಾಣತನವಾಗುತ್ತದೆ. ವಾದ ಮಾಡುವಾಗ ಉದಾಹರಣೆ ಅಥವಾ ಆಧಾರ ಕೊಟ್ಟರೆ ಮಾತ್ರ ಸಂಭಾಷಣೆ ಚೆನ್ನಾಗಿರುತ್ತದೆ.ವಾದ ಮಾಡುವಾಗ ,ರಸ‌ , ಕವಿಯ ಆಶಯ , ಸಂದರ್ಭ ಮುಂತಾದ ವಿಷಯ ಗ್ರಹಿಸಿ ಮಾಡುವ ವಾದಗಳು ಅರ್ಥಗಾರಿಕೆಯ ಸೊಬಗು ಹೆಚ್ಚಿಸುತ್ತದೆ. ” ಹವ್ಯಾಸಿ ಅರ್ಥಧಾರಿಗಳು ಉದ್ದ ಮಾತಾಡುವುದನ್ನು ಪ್ರೇಕ್ಷಕರು ಬಯಸಲಾರರು ” . ( ವೃತ್ತಿಪರರಿಗೂ ಇದು ಅನ್ವಯ). ವಾದ ಮಾಡುವಾಗ ಪ್ರಸಂಗದ ಪದ್ಯಗಳ ನಡೆಯಲ್ಲೇ ಇರಬೇಕು ಎಂಬುದು ಅಲಿಖಿತ ನಿಯಮ.ಅದೇ ರೀತಿ ವಾದ ಮಾಡುವಾಗ ತಾನು ನಿರ್ವಹಿಸುವ ಪಾತ್ರದ ಸ್ವಭಾವ ತಿಳಿದಿರಬೇಕಾದುದು ಅಗತ್ಯ. ಉದಾಹರಣೆಗೆ , ” ಭೀಷ್ಮವಿಜಯ ” ಪ್ರಸಂಗದಲ್ಲಿ ಬರುವ ಅಂಬೆ ಅಥವಾ ಏಕಲವ್ಯ ಭೀಷ್ಮನಲ್ಲಿ ಧರ್ಮಸೂಕ್ಷ್ಮತೆಯ ಬಗ್ಗೆ ಹೆಚ್ಚು ವಾದ ಮಾಡಬಾರದು ‌. ಮುಂದಕ್ಕೆ ಪರಶುರಾಮರು ಕೇಳುವ ಪ್ರಶ್ನೆಯನ್ನು ಅಂಬೆಯೋ , ಕಾಡಕಿರಾತನೋ ಕೇಳುವುದು ಅಭಾಸವಾಗುತ್ತದೆ.ಇಂಥಹ ವಿಚಾರಗಳು ಹವ್ಯಾಸಿ ಕಲಾವಿದರಿಗೆ ತಿಳಿದಿರಬೇಕು.
6 . ಹವ್ಯಾಸಿ ಅರ್ಥಧಾರಿಗಳು ಎದುರು ಅರ್ಥಧಾರಿಗಳ ಕುರಿತು ಗೌರವ ತಾಳಬೇಕು.ಎದುರಿನ ಅರ್ಥಧಾರಿ ತನಗೆ ಸಮವಲ್ಲ ಎಂಬ ಮನೋಭಾವ ತಾಳುವುದು ಸರ್ವಥಾ ಸಲ್ಲದು .ಇದರಿಂದ ನಮ್ಮ ಪಾತ್ರಗಳು ಹಾಳಾಗಿ ಕೂಟ ಕೆಡುತ್ತದೆ.ಅದೇ ರೀತಿ ಕತೆಯ ಆವರಣದೊಳಗೇ ಸಂವಾದ ಇರಬೇಕು.
ಎದುರಿನ ಕಲಾವಿದರು ಎಷ್ಟೇ ದೊಡ್ಡವರಾದರೂ (ಬೇಕಾದರೆ ಅವರು ಸುಪ್ರಸಿದ್ಧ ವೃತ್ತಿಪರರೇ ಇರಲಿ) ನಮಗೆ ಗೊತ್ತಿರುವ ಕತೆ ಆ ಪ್ರಸಂಗದ ಮಿತಿಯಲ್ಲೇ ಇದ್ದರೆ ಅಷ್ಟನ್ನೂ ಹೇಳಬೇಕು. ಈ ಕುರಿತು ಕೀಳರಿಮೆ ಇರಕೂಡದು.

7 . ವಿತಂಡವಾದ : ಕೆಲವು ಸಂದರ್ಭಗಳಲ್ಲಿ ವಿತಂಡವಾದವನ್ನು ಪಾತ್ರ ಪೋಷಣೆಗಾಗಿ ಮಾಡಬೇಕಾಗುತ್ತದೆ . ಆದರೆ ಇದನ್ನು ಪಾತ್ರಗಳ ” ಸ್ವಗತ ” ಕ್ಕೆ ಮಾತ್ರ ಮಾಡಬೇಕೇ ಹೊರತು ವಾದಗಳಿಗೆ ಇದನ್ನು ಹೆಚ್ಚು ಎಳೆಯಬಾರದು .ಉದಾಹರಣೆಗೆ
” ದಕ್ಷಾಧ್ವರ ” ಪ್ರಸಂಗದಲ್ಲಿ ಈಶ್ವರನನ್ನು ದಕ್ಷನು ಸ್ವಗತದಲ್ಲಿ ಹೀಗಳೆಯಬಹುದು. ಆದರೆ ವೀರಭದ್ರನೊಂದಿಗಿನ ಯುದ್ಧದಲ್ಲಿ ವಾದ ಮಾಡುವಾಗ , ಶಿವನನ್ನು ಆಕ್ಷೇಪಿಸುವಾಗ ಪಾತ್ರದ ಘನತೆ ಉಳಿಸಿ‌ ವಾದ ಮಾಡಬೇಕು .ಅದೇ ರೀತಿಯಲ್ಲಿ ಕೌರವ , ರಾವಣನ‌ ಪೀಠಿಕೆ ಇತ್ಯಾದಿ.ಉತ್ತರಕುಮಾರ , ಪೌಂಡ್ರಕ , ಕೌರವ , ರುಕ್ಮಿ , ಕಂದರ, ಮಂಥರೆ ಮುಂತಾದ ಪಾತ್ರಗಳಲ್ಲಿ ಸಮಯೋಚಿತವಾಗಿ ವಿತಂಡವಾದ ಮಾಡುವ ಅವಕಾಶವಿದೆ. ಆದರೆ ಇದು ಹಿತಮಿತವಾಗಿದ್ದರೆ ಸೊಗಸು. ಶ್ರೀರಾಮ , ನಳ, ಹರಿಶ್ಚಂದ್ರ ,ಋತುಪರ್ಣ ಮುಂತಾದ ಪಾತ್ರಗಳನ್ನು ನಿರ್ವಹಿಸುವಾಗ ” ವಿತಂಡವಾದ ” ಮಾಡಲೇಬಾರದು . ಇದು ಪಾತ್ರಗಳ ಘನತೆ ಕುಗ್ಗಿಸುತ್ತದೆ .
8 . ಪ್ರಸಂಗದಲ್ಲಿ ಪದ್ಯಗಳ ಜ್ಞಾನ‌ : ಅರ್ಥ ಹೇಳುವಾಗ , ಅರ್ಥಧಾರಿಯು ತನ್ನ ಪಾತ್ರಗಳಿಗೆ ಇರುವ ಪದ್ಯಗಳ ಕುರಿತು ಖಚಿತ ಜ್ಞಾನ ಹೊಂದಿರಬೇಕು .ಕೆಲವು ಪಾತ್ರಗಳಿಗೆ , ಪ್ರಸಂಗದಲ್ಲಿ ಒಂದೇ ಸಂದರ್ಭದ ನಾಲ್ಕೈದು ಪದ್ಯಗಳಿರುತ್ತವೆ . ಆದರೆ ಭಾಗವತರು ಸಮಯದ ಹೊಂದಾಣಿಕೆಗಾಗಿ ಕೆಲವು ಪದ್ಯಗಳನ್ನು ಬಿಡುತ್ತಾರೆ.ಆದರೆ ಅರ್ಥಧಾರಿಗಳು , ಭಾಗವತರು ಕೈಬಿಟ್ಟ ಪದ್ಯಗಳ ಅರ್ಥವನ್ನು ಮುಂದಿನ ಅಥವಾ ಹಿಂದಿನ ಪದ್ಯಗಳಿಗೆ ಅನ್ವಯಿಸಿ ಅರ್ಥ ಹೇಳಲೇಬೇಕು . ಮುಂದಿನ ಪದ್ಯಕ್ಕಾಗಿ ಇರುವ ಅರ್ಥವನ್ನು ಮೊದಲಿನ ಪದ್ಯದ ಅರ್ಥದಲ್ಲಿ ಬಾರದ ಹಾಗೆ ವಿವೇಚನೆ ಇರಬೇಕು.ಇಲ್ಲದಿದ್ದಲ್ಲಿ ಪುನರಾವರ್ತನೆ ಆಗುತ್ತದೆ . ” ಅರ್ಥಗಾರಿಕೆಯಲ್ಲಿ ಪುನರಾವರ್ತನೆ ಆಗುವುದು ದೋಷ ” .
ಕೆಲವೊಮ್ಮೆ ಪ್ರಸಂಗದ ಒಂದು ಸನ್ನಿವೇಶವನ್ನೋ ಅಥವಾ ಒಂದು ಪಾತ್ರವನ್ನೋ ಕೈ ಬಿಡುತ್ತಾರೆ . ಹಾಗಾದಾಗ , ಅರ್ಥಧಾರಿಯು ಆ ಸನ್ನಿವೇಶವನ್ನು ಸಂದರ್ಭಕ್ಕನುಸಾರವಾಗಿ ತನ್ನ ಅರ್ಥದಲ್ಲೇ ತುಂಬಿಸಿಕೊಳ್ಳಬೇಕು .
9.ಕಾಲಪೃಜ್ಞೆ : ಅರ್ಥ ಹೇಳುವಾಗ ತಾನು ನಿರ್ವಹಿಸುವ ಪಾತ್ರದ ಕಾಲಮಾನದ ಬಗ್ಗೆ ತಿಳಿದಿರಬೇಕು‌. ರಾಮಾಯಣದ ಪ್ರಸಂಗಗಳಲ್ಲಿ ಮಹಾಭಾರತದ ವಿಷಯಗಳು ಬಾರದಂತೆ ಜಾಗೃತೆ ವಹಿಸಬೇಕು.ಅದೇ ರೀತಿ ಯಾವ ಪಾತ್ರಗಳು ಮೊದಲಿನವು , ಯಾವುದು ನಂತರದವು ಎಂಬ ಜ್ಞಾನ ಇರಬೇಕು .” ವಾಮನ ಚರಿತ್ರೆ ” ಯ ಬಲಿಯ ಪಾತ್ರ ಮಾಡಿ ರಾಮ – ಕೃಷ್ಣರ ಉದಾಹರಣೆ ಕೊಡುವುದೋ , ಹಿರಣ್ಯಕಶಿಪುವಾಗಿ ರಾವಣನನ್ನು ಉಲ್ಲೇಖಿಸುವುದೋ ” ಕಾಲಬಾಧಿತ‌ ” ಎನಿಸಿಕೊಳ್ಳುತ್ತದೆ .ತಾನು ನಿರ್ವಹಿಸುವ ಪಾತ್ರದ ಬಗ್ಗೆ ಪೂರ್ವತಯಾರಿಯೊಂದಿಗೆ ಅರ್ಥ ಹೇಳಬೇಕು.
10 . ಕನ್ನಡ ಭಾಷೆಯಲ್ಲಿ ಅರ್ಥ ಹೇಳುವಾಗ ಸಂಸ್ಕೃತ ಹೊರತು ಪಡಿಸಿ ಅನ್ಯಭಾಷೆಗಳ ಪದಪ್ರಯೋಗ ಮಾಡಲೇಕೂಡದು.
ಅರ್ಥಧಾರಿಗಳಾಗಬೇಕಾದರೆ ಭಾಷಾ ಜ್ಞಾನ ಅತಿ ಅವಶ್ಯಕ .ಅನ್ಯಭಾಷೆಯ ಪದಗಳು ಅರ್ಥದಲ್ಲಿ ನುಸುಳದಂತೆ ಜಾಗರೂಕತೆ ವಹಿಸಬೇಕು .ಸಂಸ್ಕೃತದ ಶಬ್ದಗಳು ಯಾವುದೇ ಭಾಷೆಯ ಅರ್ಥಗಾರಿಕೆಯಲ್ಲಿ ಸ್ವೀಕಾರಾರ್ಹ .
ಅರ್ಥ ಹೇಳುವಾಗ ಮೇಲಿನ ಅಂಶಗಳಲ್ಲದೇ ಪಾತ್ರಕ್ಕನುಸಾರವಾಗಿ ಬಳಸುವ ಸ್ವರಭಾರ , ವಿವಿಧ ಪೌರಾಣಿಕ ಆಕರಗಳ ಬಳಕೆ , ಸಮಕಾಲೀನ ಸಾಹಿತ್ಯಗಳ ಜ್ಞಾನ , ಒಗಟು , ಗಾದೆ , ಸುಭಾಷಿತಗಳನ್ನು ಅಳವಡಿಸುವಿಕೆ ಮುಂತಾದವುಗಳು ಮೇಳೈಸಿದರೆ , ಅರ್ಥಗಾರಿಕೆಯು ಅರ್ಥಪೂರ್ಣವಾಗುತ್ತದೆ.
ಎಂ.ಶಾಂತರಾಮ ಕುಡ್ವ, ಮೂಡಬಿದಿರೆ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!