ಈ ಅಧಿಕಾರಿಯ ಸಾಧನೆಗೆ ಶಂಕರ್‌ ನಾಗ್ ಸ್ಫೂರ್ತಿ

4

ಕಾರ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ಅವರು ತಮ್ಮ ಶೈಕ್ಷಣಿಕ ಮತ್ತು ಸಾಮಾಜಿಕ ಕಾಳಜಿಯಿಂದ ಮತ್ತು ಬದ್ಧತೆಯಿಂದ ತುಂಬಾ ಜನಪ್ರಿಯರು. ಅವರು ಕಾರ್ಕಳದಲ್ಲಿ ಆರಂಭ ಮಾಡಿದ ಗುಬ್ಬಚ್ಚಿ ಸ್ಪೋಕನ್ ಸ್ಪೀಕಿಂಗ್ ಇಂಗ್ಲಿಷ್, ಕುಟೀರ ಶಿಕ್ಷಣ, ಮಿಷನ್ ಹಂಡ್ರೆಡ್, ಪೆನ್ ಟೀಮ್ ಮೊದಲಾದ ಮಾದರಿ ಕಾರ್ಯಕ್ರಮಗಳು ಈಗಾಗಲೇ ಜನ ಮನ ತಟ್ಟಿವೆ ಮತ್ತು ಫಲಿತಾಂಶವನ್ನು ಪಡೆಯುತ್ತಿವೆ. ದಿನಕ್ಕೆ ಕೇವಲ 4 ಘಂಟೆ ಮಲಗುವ ಅವರು ಉಳಿದ ಎಲ್ಲಾ ಹೊತ್ತು ಕ್ರಿಯಾಶಾಲಿ ಚಟುವಟಿಕೆಯಲ್ಲಿ ಮುಳುಗಿರುತ್ತಾರೆ. ಶೈಕ್ಷಣಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ಕೊಡುತ್ತಾರೆ. ಪ್ರತೀ ಒಬ್ಬ ಶಿಕ್ಷಕರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸುತ್ತಾರೆ. ಪ್ರತೀ ಶಿಕ್ಷಕರ ಹೆಸರನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಮತ್ತು ಅವರನ್ನೆಲ್ಲ ಸರ್ ಎಂದು ಗೌರವದಿಂದ ಕರೆಯುತ್ತಾರೆ. ಅವರೊಬ್ಬ ಶುದ್ಧ ಹಸ್ತರಾದ ಅಧಿಕಾರಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರ ವೇಗ ಮತ್ತು ಕಾರ್ಯಕ್ಷಮತೆ ಅಸಾಧಾರಣ ಆಗಿದೆ. ಈ ಉತ್ಸಾಹ ಮತ್ತು ಚೈತನ್ಯಕ್ಕೆ ಕಾರಣ ಏನು ಎಂದು ಹುಡುಕುತ್ತಾ ಹೋದರೆ ನಮಗೆ ಹಲವು ಅಚ್ಚರಿಯ ಸಂಗತಿಗಳು ಗಮನಕ್ಕೆ ಬರುತ್ತವೆ.
ಶಶಿಧರ್ ಅವರು ಸಿನೆಮಾ ನಟ ಶಂಕರ್‌ ನಾಗ್‌ ಅವರ ಅಪ್ಪಟ ಅಭಿಮಾನಿ. ಅವರ ಸಿನೆಮಾ ಮತ್ತು ಬದುಕಿನಿಂದ ಭಾರೀ ಪ್ರಭಾವಕ್ಕೆ ತಮಗೆ ಅರಿವಿಲ್ಲದಂತೆ ಒಳಗಾದವರು. “ನೀನು ಸತ್ತ ನಂತರ ಸಮಾಧಿಯಲ್ಲಿ ಮಲಗುವುದು ಇದ್ದೇ ಇದೆ! ಬದುಕಿರುವಾಗ ಏನು ಮಾಡಲು ಸಾಧ್ಯವೋ ಅದನ್ನು ಮಾಡು!” ಎನ್ನುತ್ತಿದ್ದರು ಶಂಕರನಾಗ್. ದಿನಕ್ಕೆ 18-20 ಘಂಟೆ ಕೆಲಸ ಮಾಡುತ್ತಿದ್ದ ಶಂಕರನಾಗ್ ಮಲಗಿದ್ದೆ ಕಡಿಮೆ. ಅವರ ದೂರಗಾಮಿ ಯೋಚನೆಗಳು, ಕಾರ್ಯಕ್ಷಮತೆ, ಅಸಾಧಾರಣ ವೇಗ, ಸಾಮಾಜಿಕ ಕಾಳಜಿ, ಪ್ರಾಮಾಣಿಕತೆ ಮೊದಲಾದವುಗಳು ಅವರನ್ನು ಲೆಜೆಂಡ್ ಮಾಡಿದ್ದವು. ಆ ಕಾಲದಲ್ಲಿ ಬೆಂಗಳೂರು ಮೆಟ್ರೋ ಕನಸು ಕಂಡದ್ದು, ಮೆಟ್ರೋ ಮತ್ತು ಅಂಡರ್‌ ಗ್ರೌಂಡ್‌ ರೈಲು ಬಗ್ಗೆ ಅಧ್ಯಯನ ಮಾಡಲು ಸ್ವಂತ ಖರ್ಚಿನಲ್ಲಿ ವಿದೇಶಕ್ಕೆ ಹೋಗಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದ ಸಿನೆಮಾ ನಿರ್ದೇಶನ ಮಾಡಿದ್ದು, ಸಿನೆಮಾಗಳ ಮೂಲಕ ಸಾಮಾಜಿಕ ಸಂದೇಶ ಕೊಟ್ಟಿದ್ದು, ತನ್ನ ಜೊತೆ ಕೆಲಸ ಮಾಡುತ್ತಿದ್ದವರ ಬಗ್ಗೆ ಅತಿಯಾದ ಕಾಳಜಿ, ಅತಿಯಾದ ಕೆಲಸಗಳಿಂದ ವರ್ಕ್ ಹಾಲಿಕ್ ಆದದ್ದು, ರಿಸ್ಕ್ ತೆಗೆದುಕೊಂಡು ಹೊಸ ಪ್ರಯೋಗಗಳನ್ನು ಮಾಡಲು ಮುಂದಾಗಿದ್ದು, ಕೈಗೆ ತೆಗೆದುಕೊಂಡ ಯಾವುದೇ ಕೆಲಸವನ್ನು ಪೂರ್ತಿ ಮಾಡಿಯೇ ವಿಶ್ರಾಂತಿಗೆ ಹೋಗುವುದು, ಸರಳವಾಗಿ ಬದುಕುವುದು, ಕಾಯಕ ಸಂಸ್ಕೃತಿಯನ್ನು ಗೌರವಿಸುವುದು, ಕನ್ನಡ ಮತ್ತು ಸಂಸ್ಕೃತಿಯ ಬಗ್ಗೆ ಅತೀ ಎನ್ನಿಸುವ ಭಾವುಕತೆ ಇವೆಲ್ಲವೂ ಶಂಕರನಾಗ್ ಅವರಲ್ಲಿ ಎದ್ದು ಕಾಣುವ ಗುಣಗಳು. ಅಷ್ಟು ಸಣ್ಣ ವಯಸ್ಸಿನಲ್ಲಿ ಪ್ರಾಣ ಕಳೆದುಕೊಳ್ಳಲು ಅವರ ವೇಗ ಮತ್ತು ವಿಶ್ರಾಂತಿ ಇಲ್ಲದ ದುಡಿಮೆಯೇ ಕಾರಣ ಎಂದು ನಮಗೆಲ್ಲರಿಗೂ ಗೊತ್ತಿದೆ. ಶಂಕರನಾಗ್ ಇಂದು ಬದುಕಿದ್ದರೆ ಕನ್ನಡ ಸಿನೆಮಾ ಇಂಡಸ್ಟ್ರಿಯು ಎಲ್ಲಿಗೆ ತಲುಪುತ್ತಿತ್ತು ಎನ್ನುವುದನ್ನು ಊಹೆ ಮಾಡುವುದು ಕೂಡ ಕಷ್ಟ.
ಶಂಕರನಾಗ್ ಬಗ್ಗೆ ಶಶಿಧರ್ ಸರ್ ಅವರಿಗೆ ಅತೀ ಎನ್ನಿಸುವ ಪ್ರಭಾವ ಆಗಿದೆ. ಪ್ರಭಾವ ಅನ್ನುವುದಕ್ಕಿಂತ ಅದು ಒಂದು ಮೌನ ಆರಾಧನೆ! ಪಾಸಿಟಿವ್ ಹೀರೋ ವರ್ಶಿಪ್! ಅವರು ಶಂಕರನಾಗ್ ಅವರನ್ನು ತಮ್ಮೊಳಗೆ ಆವಾಹನೆ ಮಾಡಿಕೊಂಡ ಹಾಗೆ ಕೆಲಸ ಮಾಡುತ್ತಾರೆ! ಶಂಕರನಾಗ್ ಇನ್ನೂ ತನ್ನೊಳಗೆ ಜೀವಂತವಾಗಿ ಇದ್ದಾರೆ ಎಂದು ಬಲವಾಗಿ ನಂಬಿದ್ದಾರೆ. ಅವರ ಧ್ವನಿ, ನಡಿಗೆ, ಹಾವಭಾವ ಎಲ್ಲವನ್ನೂ ಅನುಕರಣೆ ಮಾಡುತ್ತಾರೆ. ಶಂಕರ್ ಬಗ್ಗೆ 24 ಘಂಟೆ ಮಾತನಾಡಿದರೂ ಅವರು ದಣಿಯುವುದೇ ಇಲ್ಲ! ಸ್ಟಾರ್ ನಟನ ಬಗ್ಗೆ ಈವರೆಗೆ ಎಲ್ಲಿ ಕೂಡ ಪ್ರಕಾಶಿತವಾಗದ ನೂರಾರು ಮಾಹಿತಿಗಳು ಅವರ ದಟ್ಟ ಸ್ಮರಣೆಯಲ್ಲಿವೆ. ಒಂದು ಚೀಟಿ, ರೆಫರೆನ್ಸ್ ಕೂಡ ಇಲ್ಲದೇ ಅವರು ಘಂಟೆಗಟ್ಟಲೆ ಶಂಕರ್ ಬಗ್ಗೆ ಮಾತನಾಡುತ್ತಾರೆ. ಶಂಕರ್ ನಡೆಯುವಾಗ ತನ್ನ ಎಡಗೈಯನ್ನು ಸ್ವಿಂಗ್ ಮಾಡುವ ರೀತಿಯನ್ನು ಅನುಕರಣೆ ಮಾಡಿ ತೋರಿಸುತ್ತಾರೆ. ಹಲ್ಲು ಕಚ್ಚಿ ಶಂಕರ್ ಮಾತಾಡಿದ ಹಾಗೆ ಮಿಮಿಕ್ ಮಾತಾಡುತ್ತಾರೆ. ಇಡೀ ವರ್ಷ ಶಂಕರನಾಗ್ ಅವರ ವಾಟ್ಸಪ್ ಡಿಪಿಯಲ್ಲಿ ಜೀವಂತವಾಗಿ ಇರುತ್ತಾರೆ! ಶಂಕರ್ ಬಗ್ಗೆ ಮಾತನಾಡುವಾಗ, ಕೇಳುವಾಗ ಅವರ ಗಮನಕ್ಕೆ ಬಾರದ ಹಾಗೆ ಕಣ್ಣೀರು ಹಾಕುತ್ತಾರೆ. ಶಂಕರ್ ಬಗ್ಗೆ ಫೇಸ್ ಬುಕ್‌, ಸಾಮಾಜಿಕ ಜಾಲತಾಣದಲ್ಲಿ ವಿಸ್ತಾರವಾದ, ಕುತೂಹಲ ಸಂಗತಿಗಳ ಕುರಿತಾಗಿ ಲೇಖನ ಬರೆಯುತ್ತಾರೆ. ತಮ್ಮ ಎಲ್ಲಾ ಭಾಷಣ, ತರಬೇತಿ ಮತ್ತು ಮೀಟಿಂಗ್‌ಗಳಲ್ಲಿ ಶಂಕರ್ ಬಗ್ಗೆ ಉಲ್ಲೇಖ ಮಾಡದೆ ಮಾತು ಮುಗಿಸುವುದಿಲ್ಲ. ದಣಿವು ಇಲ್ಲದೇ ದುಡಿಯಲು, ಕನ್ನಡವನ್ನು ಬಹಳ ಪ್ರೀತಿಸಲು ಶಂಕರನಾಗ್ ತನಗೆ ಪ್ರೇರಣೆ ಎಂದು ಅವರು ಹೇಳುತ್ತಾರೆ.
ಒಬ್ಬ ಸರಕಾರಿ ಗೆಜೆಟೆಡ್ ಅಧಿಕಾರಿ ಶಂಕರನಾಗ್ ಬದುಕಿನಿಂದ ಪ್ರೇರಣೆಯನ್ನು ಪಡೆದಿರುವುದು, ಅವರನ್ನು ಮತ್ತು ಅವರ ತತ್ವಗಳನ್ನು ನೂರಕ್ಕೆ ನೂರರಷ್ಟು ಅನುಕರಣೆ ಮಾಡುವುದು ಇದೆಲ್ಲವೂ ನಮಗೆ ಅಚ್ಚರಿ ಮೂಡಿಸುತ್ತದೆ.
ಅಂದ ಹಾಗೆ ಇಂದು ಮಹಾ ನಟ ಶಂಕರನಾಗ್ ಹುಟ್ಟಿದ ಹಬ್ಬ. ಲೆಜೆಂಡ್ ಬದುಕಿದ್ದರೆ ಇಂದು ಅವರಿಗೆ 66 ವರ್ಷ ಆಗಿರುತ್ತಿತ್ತು. ಆ ಮಹಾನಟನಿಗೆ ನಮ್ಮ ಭಾವಪೂರ್ಣ ಪ್ರಣಾಮಗಳು.

ಶಶಿಧರ್‌ ಜಿ.ಎಸ್‌. ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಕಳ


---
Previous articleಡ್ರಗ್‌ ಕೇಸ್‌ : ಖ್ಯಾತ ನಿರ್ಮಾಪಕ ನಾಡಿಯಡ್‌ವಾಲಾ ಮನೆ ಮೇಲೆ ಎನ್‌ಸಿಬಿ ದಾಳಿ
Next articleಸಂಗೀತ ನಿರ್ದೇಶಕ ಕಾರ್ಕಳದ ಸುನಾದ್ ಗೌತಮ್ ಅವರಿಗೆ ಅವಳಿ ಪ್ರಶಸ್ತಿ

4 COMMENTS

  1. ಸರ್ ಅದ್ಬುತ ಕನಸುಗಾರ ಶಂಕರಣ್ಣ ಯಾವಯಾವ ರೀತಿ ಕ್ರಿಯಾಶೀಲ ವ್ಯಕ್ತಿತ್ವ ನಿರ್ಮಾಣಕ್ಕೆ ಪರೋಕ್ಷ ಸಹಕಾರಿ ಎಂಬುದಕ್ಕೆ ನೀವೊಂದು ಜೀವಂತ ಸಾಕ್ಷಿ.. ಅವರತರಾನೆ ನೀವು ವರ್ಕೋಹಾಲಿಕ್. ಪ್ರತಿಯೊಬ್ಬರ ಜೀವನ ಸ್ಪೂರ್ತಿಯ ಪತಾಕೆಯಾಗಿರುತ್ತೆ. .ನಿಮ್ಮಂತಹ ಅಧಿಕಾರಿಯನ್ನು ಪಡೆದಿರುವುದು ನಮ್ಮ ಭಾಗ್ಯ.
    ನನಗೂ ಕುವೆಂಪು ತೇಜಸ್ವಿ ಸ್ಪೂರ್ತಿ.
    ಶುಭ ಮುಂಜಾನೆ, ಶುಭವಾಗಲಿ ತಮಗೆ ಸರ್

  2. ಶಶಿಧರ ಸರ್ ಶಿರಡೀ ಸಾಯಿಬಾಬರ ಪರಮ ಭಕ್ತ. ಅವರೊಂದಿಗೆ ಶಂಕರನಾಗ್ ಇವರಿಗೆ ಜೀವನ ಸ್ಪೂರ್ತಿ ಕೊಟ್ಟ ದೇವರು. ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ರೂಪಿಸಿ ಸಂಘಟಿಸುವಲ್ಲಿ ಇವರ ಸಾಧನೆ ಶ್ಲಾಘನೀಯ. ಮಾಡುವ ಕೆಲಸಗಳನ್ನೇ ವಿಭಿನ್ನವಾಗಿ ಮಾಡುವ ಇವರು ಶಿಕ್ಷಕ ವರ್ಗಕ್ಕೇ ಸ್ಪೂರ್ತಿ. ಇಂತಹ ಅಧಿಕಾರಿಗಳೊಂದಿಗೆ ಕೆಲಸ ಮಾಡುವ ಸೌಭಾಗ್ಯ ದೊರೆತಿರುವುದು ನಮ್ಮ ಪುಣ್ಯ. ಅಭಿನಂದನೆಗಳು ಸರ್.

  3. ಶಶಿಧರ್ ಸರ್ ಶಿರಡಿ ಸಾಯಿಬಾಬಾರ ಪರಮ ಭಕ್ತ. ಅವರೊಂದಿಗೆ ಶಂಕರನಾಗ್ ಇವರಿಗೆ ಜೀವನ ಸ್ಪೂರ್ತಿ ಕೊಟ್ಟ ದೇವರು. ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ರೂಪಿಸಿ ಸಂಘಟಿಸುವಲ್ಲಿ ಇವರ ಸಾಧನೆ ಶ್ಲಾಘನೀಯ. ಮಾಡುವ ಕೆಲಸಗಳನ್ನೇ ವಿಭಿನ್ನವಾಗಿ ಮಾಡುವ ಇವರು ಶಿಕ್ಷಕ ವರ್ಗಕ್ಕೇ ಸ್ಪೂರ್ತಿ. ಇಂತಹ ಅಧಿಕಾರಿಗಳೊಂದಿಗೆ ಕೆಲಸ ಮಾಡುವ ಸೌಭಾಗ್ಯ ದೊರೆತಿರುವುದು ನಮ್ಮ ಪುಣ್ಯ. ಅಭಿನಂದನೆಗಳು ಸರ್.

  4. ಶಶಿಧರ್ ಸರ್ ಶಿರಡಿ ಸಾಯಿಬಾಬಾರ ಪರಮ ಭಕ್ತ. ಅವರೊಂದಿಗೆ ಶಂಕರನಾಗ್ ಇವರಿಗೆ ಜೀವನ ಸ್ಪೂರ್ತಿ ಕೊಟ್ಟ ದೇವರು. ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ರೂಪಿಸಿ ಸಂಘಟಿಸುವಲ್ಲಿ ಇವರ ಸಾಧನೆ ಶ್ಲಾಘನೀಯ. ಮಾಡುವ ಕೆಲಸಗಳನ್ನೇ ವಿಭಿನ್ನವಾಗಿ ಮಾಡುವ ಇವರು ಶಿಕ್ಷಕ ವರ್ಗಕ್ಕೇ ಸ್ಪೂರ್ತಿ. ಇಂತಹ ಅಧಿಕಾರಿಗಳೊಂದಿಗೆ ಕೆಲಸ ಮಾಡುವ ಸೌಭಾಗ್ಯ ದೊರೆತಿರುವುದು ನಮ್ಮ ಪುಣ್ಯ. ಅಭಿನಂದನೆಗಳು ಶಶಿಧರ್ ಸರ್

LEAVE A REPLY

Please enter your comment!
Please enter your name here