ಮಿತ್ರ ಪ್ರಭಾ ಹೆಗ್ಡೆ ಅವರಿಗೆ ಸನ್ಮಾನ

0

ಕಾರ್ಕಳ : ಉತ್ತಮ ಶಿಕ್ಷಕರು ಸಮಾಜದ ಆಸ್ತಿ. ಅಂತಹ ಶಿಕ್ಷಕರಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವೆಂದು ಹಿರಿಯ ಪತ್ರಕರ್ತ ಮನೋಹರ್‌ ಪ್ರಸಾದ್‌ ಹೇಳಿದರು.

ಅವರು ನ. 8ರಂದು ಹೊಟೇಲ್‌ ಪ್ರಕಾಶ್‌ ಉತ್ಸವ ಸಭಾಂಗಣದಲ್ಲಿ ಎಸ್.ವಿ.ಟಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಅವರಿಗೆ ಪೂರ್ವ ವಿದ್ಯಾರ್ಥಿಗಳು, ವಿದ್ಯಾರ್ಥಿ ವೃಂದ ಮತ್ತು ಅಭಿಮಾನಿಗಳಿಂದ ಆಯೋಜಿಸಲಾದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ಲಾಘನೀಯ ಕಾರ್ಯ

ಮಿತ್ರ ಪ್ರಭಾ ಹೆಗ್ಡೆ ಅವರು ಅತ್ಯುತ್ತಮ ಉಪನ್ಯಾಸಕಿಯಾಗಿ, ಪ್ರಾಂಶುಪಾಲರಾಗಿ ಸಂಸ್ಥೆಯೊಂದನ್ನು ಮುನ್ನಡೆಸಿದ್ದಾರೆ. ಅವರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಮಾತ್ರವಲ್ಲದೇ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದ ರೀತಿ ಮಾದರಿಯಾದುದು. ಅವರ ವಿದ್ಯಾರ್ಥಿಗಳಿಂದು ಗುರುವಂದನಾ ಕಾರ್ಯಕ್ರಮದ ಮೂಲಕ ಗುರುಕಾಣಿಕೆ ಅರ್ಪಿಸಿರುವುದು ನಿಜಕ್ಕೂ ಶ್ಲಾಘನೀಯವೆಂದು ಮನೋಹರ್‌ ಪ್ರಸಾದ್‌ ಅವರು ಅಭಿಪ್ರಾಯಪಟ್ಟರು.

ಹೃದಯ ಶ್ರೀಮಂತಿಕೆ

ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಮಿತ್ರಪ್ರಭಾ ಹೆಗ್ಡೆ ಅವರನ್ನು ಅಭಿನಂದಿಸಿ, ‘ಸರಸ್ವತಿ ಪ್ರಭಾ’ ಎಂಬ ಬಿರುದು ನೀಡಿ ಸನ್ಮಾನಿಸಿದರು. ಬಳಿಕ ಮಾತನಾಡಿ, ಮಿತ್ರ ಪ್ರಭಾ ಮಾತೃ ಹೃದಯದ ಶಿಕ್ಷಕಿ ಆದ ಕಾರಣ ಅವರಿಗೆ ವಿದ್ಯಾರ್ಥಿಗಳ ಪ್ರೀತಿ ದೊರೆಯಿತು. ದುಡ್ಡು ಇದ್ದವರು ಮಾತ್ರ ಶ್ರೀಮಂತರಲ್ಲ. ಹೃದಯ ಶ್ರೀಮಂತಿಕೆ ಇರುವ ಶಿಕ್ಷಕರೂ ಶ್ರೀಮಂತರೇ ಆಗಿದ್ದಾರೆ ಎಂದರು.

ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಕೋಟ್ಯಾನ್ ಮಾತನಾಡಿ, ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಿತ್ರಪ್ರಭಾ ಅವರ ಕೊಡುಗೆ ಅಪಾರವಾಗಿದೆ. ಸಾಹಿತ್ಯದ ಸಾಂಗತ್ಯ ಹೊಂದಿದ್ದ ಮಿತ್ರಪ್ರಭಾ ಅವರು ಎಲ್ಲರೊಂದಿಗೂ ಮಿತ್ರರಾಗಿಯೇ ಬೆರೆತು ಪ್ರಾಂಶುಪಾಲ ಹುದ್ದೆಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಿದ್ದರು ಎಂದರು. ಮುನಿಯಾಲ್ ಕಾಲೇಜಿನ ಪ್ರಾಂಶುಪಾಲೆ ಬೇಬಿ ಆಳ್ವಾ ಅವರು ಗುರುವಂದನೆಗೈದರು.

ಸನ್ಮಾನಕ್ಕೆ ಉತ್ತರಿಸಿದ ಮಿತ್ರಪ್ರಭಾ ಹೆಗ್ಡೆ ಅವರು ತನ್ನನ್ನು ಬೆಳೆಸಿದ ಎಸ್. ವಿ. ಟಿ. ಕಾಲೇಜಿನ ಆಡಳಿತ ಮಂಡಳಿ, ಸಹೋದ್ಯೋಗಿ ಬಂಧುಗಳು, ವಿದ್ಯಾರ್ಥಿ ಸಮೂಹ ಮತ್ತು ಕಾರ್ಕಳದ ಸಂಘ ಸಂಸ್ಥೆಗಳು ನನ್ನ ಭಾವ ಕೋಶದಲ್ಲಿ ಶಾಶ್ವತ ಸ್ಥಾನವನ್ನು ಪಡೆಯುತ್ತವೆ. ಅವರಿಗೆ ನಾನು ಋಣಿಯೆಂದರು. ಇತ್ತೀಚೆಗೆ ಪಾರ್ತಿ ಸುಬ್ಬ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಸಾಹಿತಿ ಶ್ರೀ ಅಂಬಾತನಯ ಮುದ್ರಾಡಿ ಅವರನ್ನು ಕಾರ್ಕಳ ಸಾಹಿತ್ಯ ಸಂಘ ಮತ್ತು ಅಖಿಲ ಭಾರತ ಸಾಹಿತ್ಯ ಪರಿಷತ್ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಸಂಯೋಜಕ ಕಾರ್ಕಳ ಪುರಸಭಾ ಸದಸ್ಯ ಶುಭದ್ ರಾವ್ ಸ್ವಾಗತಿಸಿದರು. ದಿವ್ಯಾ ಶುಭದ ರಾವ್ ಅವರು ಸನ್ಮಾನ ಪತ್ರ ಓದಿದರು. ಎಸ್. ನಿತ್ಯಾನಂದ ಪೈ ಮತ್ತು ಅರ್ಚನ ಶೆಟ್ಟಿ ಅವರನ್ನು ಗೌರವಿಸಲಾಯಿುತು. ಶಿಕ್ಷಕ ರಾಜೇಂದ್ರ ಭಟ್ ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Previous article13 ವರ್ಷದಿಂದ ಪ್ರೀತಿಸಿದ್ದ ವರ ಮದುವೆ ದಿನವೇ ನಾಪತ್ತೆ: ಪೊಲೀಸ್‌ ಠಾಣೆ ಮೆಟ್ಟಿಲೇರಿದ ಯುವತಿ
Next articleಕೆಎಂಇಎಸ್‌ನಲ್ಲಿ ಶಿಕ್ಷಕರ ಯೋಗಕ್ಷೇಮ ಮತ್ತು ಒತ್ತಡ ನಿವಾರಣೆ ಕಾರ್ಯಾಗಾರ

LEAVE A REPLY

Please enter your comment!
Please enter your name here