Wednesday, October 27, 2021
spot_img
Homeಸಾಹಿತ್ಯ/ಸಂಸ್ಕೃತಿಆರ್ಥಿಕ ಸ್ವಾತಂತ್ರ್ಯವೊಂದರಿಂದಲೇ ಮಹಿಳಾ ಸಬಲೀಕರಣ ಸಾಧ್ಯವೇ?

ಆರ್ಥಿಕ ಸ್ವಾತಂತ್ರ್ಯವೊಂದರಿಂದಲೇ ಮಹಿಳಾ ಸಬಲೀಕರಣ ಸಾಧ್ಯವೇ?

“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ:” ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಇದು ಮನುಸ್ಮೃತಿಯಲ್ಲಿ ಹೇಳಲ್ಪಟ್ಟಿದೆ. ಆದರೆ ಇದು ಈ ರೀತಿಯಾಗಿ ಉಲ್ಲೇಖಿಸಲ್ಪಟ್ಟಿದೆಯೇ ವಿನಹ ಅದರಂತೆ ನಡೆದುಕೊಳ್ಳುವವರು ಬಹಳ ವಿರಳ.
ಹೆಣ್ಣು ಸಮಾಜದ ಕಣ್ಣು ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ,ಅಕ್ಕನಾಗಿ, ತಂಗಿಯಾಗಿ ತನ್ನ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿಕೊಂಡು ಸಮಾಜವನ್ನು ಮುನ್ನಡೆಸುತ್ತಾಳೆ ಎಂಬುದು ನಿರ್ವಿವಾದ. ಆದರೆ ಅವರಿಗೆ ಪೂರಕವಾದ ವಾತಾವರಣ ಇದ್ದರೆ ಮಾತ್ರ ಅದು ಪರಿಣಾಮಕಾರಿಯಾಗಬಲ್ಲದು. ಭಾರತೀಯ ಇತಿಹಾಸದ ಪುಟಗಳನ್ನು ತಿರುವಿದಾಗ ಕಂಡು ಬರುವ ಅಂಶಗಳೆಂದರೆ ಸ್ತ್ರೀಯರು ಗೌರವವನ್ನು ಕೆಲವು ಕಡೆ ಮಾತ್ರ ಹೊಂದುತ್ತಿದ್ದರು. ಎಲ್ಲಾ ಕಡೆಯಲ್ಲೂ ಸಮಾನತೆ ಇರಲಿಲ್ಲ “ನ ಸ್ತ್ರೀ ಸ್ವಾತಂತ್ರ್ಯಮರ್ಹತಿ” ಎಂದು ಕೂಡ ಹೇಳಲಾಗುತ್ತಿತ್ತು. ಸ್ತ್ರೀಗೆ ಸ್ವಾತಂತ್ರ್ಯದ ಅಗತ್ಯವಿಲ್ಲ. ಅವಳು ಪುರುಷರ ಅಧೀನಳು ಎಂದು ಈ ಮೇಲಿನ ಮಾತು ಸಾರುತ್ತಿದೆ.
ವೈದಿಕ ಯುಗದಲ್ಲಿ ಗ್ರಂಥಗಳ ಆಧಾರದಲ್ಲಿ ಹೇಳುವುದಾದರೆ ಕೆಲವು ಪ್ರದೇಶಗಳಿಗೆ ಸೀಮಿತವಾಗಿ ಒಂದು ಮಿತಿಯಲ್ಲಿತ್ತು ಎನ್ನಬಹುದು. ಋಷಿಗಳು 1,000 ರಚನೆಗಳನ್ನು ಮಾಡಿದ್ದರೆ ಋಷಿ ಸದೃಶ್ಯವಾದ ಸ್ತ್ರೀಯರು 30 ರಚನೆಗಳನ್ನು ರಚಿಸುತ್ತಿದ್ದರು. ಗಾರ್ಗಿ, ಮೈತ್ರೇಯಿ ಮೊದಲಾದವರನ್ನು ನಾವು ಸ್ಮರಿಸಬಹುದು. ವೇದಗಳಲ್ಲಿ ದೇವತೆಗಳು ಅಗ್ನಿ, ಇಂದ್ರ, ವರುಣರ ಸ್ತುತಿ ಧಾರಾಳವಾಗಿತ್ತು. ದೇವಿಯರ ಸ್ತುತಿ ವಿರಳವಾಗಿತ್ತು. ಸ್ತ್ರೀಯರ ಮಹತ್ವ ಹೇಗಿತ್ತು?
ಪ್ರಾಚೀನ ಭಾರತದಲ್ಲಿ ಗಂಡು ಮಕ್ಕಳಿಗೆ ಸಂಸಾರದಲ್ಲಿ ಪ್ರಾಧಾನ್ಯತೆಯಿತ್ತು. ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯವಿರಲಿಲ್ಲ. ಗುಜರಾತಿನಲ್ಲಿ ಹೆಣ್ಣು ಮಗು ಹುಟ್ಟಿದರೆ ಒಂದು ದಿನ ಎಲ್ಲರನ್ನೂ ಕರೆದು ಮಗುವನ್ನು ತೋರಿಸಿ ಹಾಲಿನ ದೊಡ್ಡ ಕಡಾಯಿಯಲ್ಲಿ ಆ ಮಗುವನ್ನು ಮುಳುಗಿಸಿ ಸಾಯಿಸಿ ಬಿಡುತ್ತಿದ್ದರು. ಆದಿವಾಸಿ ಬುಡಕಟ್ಟು ಜನಾಂಗದವರು ಹೆಣ್ಣುಮಗುವಿನ ಬಾಯೊಳಗೆ ಭತ್ತವನ್ನು ತುಂಬಿಸಿ ಉಸಿರುಕಟ್ಟಿಸಿ ಸಾಯಿಸುತ್ತಿದ್ದರು. ಅವರು ಕೊಡುವ ಕಾರಣವೆಂದರೆ ‘ಮುಂದೆ ಬರುವ ಸಂಕಷ್ಟಗಳನ್ನು ಆ ಮಗು ಎದುರಿಸುವುದು ಬೇಡ ಮೊದಲೇ ಹೋಗಲಿ ಎಂಬುದಾಗಿತ್ತು. ಈ ಸಂಗತಿಗಳನ್ನು ನಾವು ಗಮನಿಸಿದಾಗ ಹೆಣ್ಣಿನ ಜೀವನ ಎಷ್ಟು ಕಷ್ಟಕರವಾಗಿತ್ತು ಎಂದು ಊಹಿಸಬಹುದು.
ಈ ಸಂದರ್ಭದಲ್ಲಿ ಇನ್ನೊಂದು ಹೇಳಲೇಬೇಕಾದ ಪ್ರಸಂಗವಿದೆ. ಒಬ್ಬ ಮಹಿಳೆ ಮೂರು ಮಕ್ಕಳನ್ನು ಹಡೆದಳು ಎರಡು ಹೆಣ್ಣು ಮೂರನೇದು ಹೆಣ್ಣಾದರೆ ಮನೆಗೆ ತರಬೇಡ; ನಿನಗೂ ಮನೆಯಲ್ಲಿ ಸ್ಥಾನವಿಲ್ಲ ಎಂದು ಹೇಳಿದಾಗ ಏನು ಮಾಡುವುದೆಂದು ತೋಚದೆ ಆ ಮಹಿಳೆ ವಿಲವಿಲ ಒದ್ದಾಡಿದಳು. ಮಾನಸಿಕವಾಗಿ ಕುಗ್ಗಿದಳು. ಪೊಲೀಸರ ಕೈಗೆ ಸಿಕ್ಕಿ ಬೀಳದಂತೆ ಮಗುವನ್ನು ಮುಗಿಸಲು ನಿರ್ಧರಿಸಿದಳು.
ಹುಟ್ಟಿ ಮೂರೇ ದಿನವಾದ ಮಗುವನ್ನು ಮೈಯಲ್ಲಿ ಒಂದು ಚೂರು ಬಟ್ಟೆ ಹಾಕದೆ ಚಳಿಯ ಸಮಯದಲ್ಲಿ ಹೊರಗಿಟ್ಟಳು. ಇಡೀ ರಾತ್ರಿ ಥಂಡಿಯಲ್ಲಿ ಮಗು ಖಂಡಿತ ಉಳಿಯಲಾರದು ಎಂದು ನಂಬಿದಳು. ಮಗು ಅಳುತ್ತಿಲ್ಲ ಏಕೆ ಹತ್ತಿರ ಹೋಗಿ ನೋಡಿದಾಗ ಮಗು ಚಳಿಗೆ ನೀಲಿಗಟ್ಟಿದೆ. ಆದರೆ ಜೀವ ಮಿಸುಕಾಡುತ್ತಿದೆ! ಇದನ್ನು ಕಂಡ ತಾಯಿ ತನ್ನ ಜೀವ ಉಳಿಸಿಕೊಳ್ಳಲು ಹೋರಾಡಿದ ಮಗುವನ್ನು ಕಂಡು ಮನಪರಿವರ್ತನೆ ಮಾಡಿಕೊಂಡಳು. ಈ ಮಗುವಿಗೋಸ್ಕರ ಎಷ್ಟೇ ಕಷ್ಟವಾದರೂ ತಾನು ಗಂಡನೊಡನೆ ಹೋರಾಡುತ್ತೇನೆ ಎಂದು ಶಪಥ ಮಾಡಿ ಮಗುವನ್ನು ಸಾಕಿದಳು. ಕೊಲೆಗಡುಕಿ ತಾಯಿ ಕೊಲೆ ಮಾಡುವುದರಲ್ಲಿ ವಿಫಲಳಾದಳು ಎಂದು ಎಲ್ಲರೊಡನೆ ಹೇಳಿಕೊಂಡು ಬರುತ್ತಿದ್ದಳು.
ನಮ್ಮ ಸಂಸ್ಕೃತಿಯಲ್ಲಿ ದನಗಳಿಗೆ, ನಾಯಿಗಳಿಗೆ, ಪಕ್ಷಿಗಳಿಗೆ ಕೊಡುವ ಆಹಾರ ಜೀವಂತ ಇರುವ ಶಿಶುವಿಗೆ ನಾವು ಯಾಕೆ ಕೊಡಬಾರದು? ಎಲ್ಲ ಸಂಬಂಧಗಳ ಸುಖ ಬೇಕು ಹಾಗಾದರೆ ಮಗಳು ಯಾಕೆ ಬೇಡ? ಈ ಪ್ರಕೃತಿಯಲ್ಲಿ ನಾರೀಹತ್ಯ ಆಗಬಾರದು. ನಾರಿ ಶಕ್ತಿಯ ಸಂಘಟನೆಯಾಗಿ ತನ್ನ ಅಂತರಂಗದ ಒಳಗಿನ ಶಕ್ತಿಯನ್ನು ಜಾಗೃತಗೊಳಿಸಿಕೊಂಡು ಪ್ರತಿಯೊಂದು ಸನ್ನಿವೇಶದಲ್ಲಿ ಸ್ನೇಹ ಮತ್ತು ಶಕ್ತಿಯಿಂದ ತಮ್ಮ ಕಲ್ಯಾಣವನ್ನು ಸಾಧಿಸಬೇಕು. ಆರ್ಥಿಕ ಸ್ವಾತಂತ್ರ್ಯದಿಂದ ಸಬಲೀಕರಣ ಸಾಧ್ಯ ಎಂದು ಎಲ್ಲಾ ಕಡೆ ಹೇಳಲಾಗದು. ಸ್ತ್ರೀಯರು ಮುಳ್ಳಿನ ದಾರಿಯಲ್ಲಿ ನಡೆದು, ಮುಳ್ಳುಗಳ ಗೆಳೆತನ ಮಾಡಿ ಅವುಗಳನ್ನು ನಿವಾರಿಸಿ ಮುಂದುವರಿಯಬೇಕಾಗುತ್ತದೆ.
ಅನುಪಮಾ ಚಿಪ್ಳೂಣ್ಕರ್‌

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!