Sunday, September 26, 2021
spot_img
Homeಅಂಕಣಕಗ್ಗದ ಸಂದೇಶ - ಇಹವೇ ಪರಕೆ ಹೆಬ್ಬಾಗಿಲಯ್ಯ…

ಕಗ್ಗದ ಸಂದೇಶ – ಇಹವೇ ಪರಕೆ ಹೆಬ್ಬಾಗಿಲಯ್ಯ…

ನೆಲದ ಬೇಸಾಯ ಒಳಿತಾಗಿರಲು ನಿನಗೆ|
ಫಲವದಂತಹುದೆಂಬ ಶಂಕೆಗೆಡೆಯುಂಟೆ?||
ಒಳಿತರೊಳೆ ನೀಂ ಬಾಳು
ಪರವದೆಂತಿರ್ದೊಡೇಂ|
ಇಳೆಯೆ ಬಾಗಿಲು ಪರಕೆ-ಮಂಕುತಿಮ್ಮ

ಕ್ರಮವತ್ತಾಗಿ ಬೇಸಾಯ ಮಾಡಿದ ರೈತ ಫಲದ ಬಗ್ಗೆ ಸಂಶಯ ಪಡುವ ಅಗತ್ಯವಿಲ್ಲ.ಫಸಲು ಚೆನ್ನಾಗಿ ಬರುತ್ತದೆ.ಇಹಲೋಕದಲ್ಲಿ ಒಳ್ಳೆಯತನದಲ್ಲಿ ಬಾಳಿದ ವ್ಯಕ್ತಿ ಪರಲೋಕ ಹೇಗಿರುತ್ತದೋ ಎಂದು ಚಿಂತಿಸುವ ಅಗತ್ಯವಿಲ್ಲ. ಈ ಭೂಮಿಯೆ ಪರಲೋಕದ ಬಾಗಿಲು ಎಂದು ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
” ಕಾಯಕದ ನೆಲೆಯಲ್ಲಿ
ಕಾಮನೆಯ ಅಳಿವಿರಲು,
ಇದೆ ಆಗ ಅದಕೊಂದು
ಸುಖದ ಪರಿಭಾಷೆ
ಮಾಡಿ ಮರೆಯುವ
ಕಲೆಗೆ ಮುದ್ದಾದ ಚೆಲುವ
ಸೋಂಕಿರಲು,ದುಡಿಮೆ
ದೇವನ ಪೂಜೆ ಮುದ್ದುರಾಮ

ಎನ್ನುವ ಕವಿ ಕೆ. ಶಿವಪ್ಪನವರ ಮಾತು ನಿಷ್ಠೆ ಮತ್ತು ನಿಸ್ವಾರ್ಥ ಮನಸ್ಸಿನಿಂದ ಮಾಡಿದ ಕೆಲಸ ಉತ್ತಮ ಫಲವನ್ನು ಕೊಡುತ್ತದೆ ಎನ್ನುತ್ತದೆ. ನಮ್ಮ ವೃತ್ತಿ ಯಾವುದೇ ಇರಲಿ ಅದನ್ನು ಭಕ್ತಿಯಿಂದ ಮಾಡಬೇಕು. ನಾವು ಮಾಡುವ ಕೆಲಸ ದೇವರ ಕೆಲಸ ಎಂದು ಭಾವಿಸಬೇಕು. ಜೀವನವೆನ್ನುವುದು ನಾಟಕವಲ್ಲ ನಮಗಾಗಿ ಬಾಳುವ ರೀತಿ. ನಾಟಕ ಮಾಡಿ ಯಾರನ್ನು ಬೇಕಾದರೂ ಮೆಚ್ಚಿಸಬಹುದು, ವಂಚಿಸಬಹುದು. ಆದರೆ, ಮೇಲೊಬ್ಬ ಕುಳಿತು ನಮ್ಮನ್ನು ಗಮನಿಸುತ್ತಿದ್ದಾನೆ. ನಾವು ಮಾಡುವ ಪ್ರತಿ ಕೆಲಸವನ್ನು ನೋಡುತ್ತಿರುವ ಅವನಿಗೆ ಮೋಸ ಮಾಡಲು ಯಾರಿಂದಲೂ ಸಾಧ್ಯವಾಗದು. ಅವನ ಲೆಕ್ಕ ಮತ್ತು ತೀರ್ಪು ಎಂದೂ ತಪ್ಪಾಗದು.
“ಮರ್ತ್ಯಲೋಕವೆನ್ನುವುದು ಕರ್ತಾರನ ಕಮ್ಮಟವಯ್ಯ ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು” ಎಂಬ ಬಸವಣ್ಣನವರ ವಚನದಂತೆ ಸ್ವರ್ಗದ ಕೀಲಿ ಕೈ ಇರುವುದು ಈ ಭುವಿಯಲ್ಲಿ. ಇಲ್ಲಿ ಸೈಯೆನಿಸಿಕೊಂಡವರು ಅಲ್ಲಿಯೂ ಸೈಯೆನಿಸಿಕೊಳ್ಳುತ್ತಾರೆ. ನಮ್ಮ ಒಳ್ಳೆಯತನ ಮತ್ತು ನಾವು ಮಾಡುವ ಒಳ್ಳೆಯ ಕೆಲಸಗಳು ನಮಗೆ ಒಳ್ಳೆಯ ಫಲವನ್ನೆ ನೀಡುತ್ತವೆ. “ಕರ್ಮಣ್ಯೇವ ಅಧಿಕಾರಸ್ಥೆ ಮಾಫಲೇಸು ಕದಾಚನ”ಎಂಬಂತೆ ಫಲದ ಬಗ್ಗೆ ಯೋಚಿಸದೇ ನಮ್ಮ ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದಾಗ ಜೀವನ ಸಾರ್ಥಕವಾಗುವುದು.

ಕೊಂಡಳ್ಳಿ ಪ್ರಭಾಕರ ಶೆಟ್ಟಿ
ಅಧ್ಯಕ್ಷರು, ತಾಲೂಕು ಸಾಹಿತ್ಯ ಪರಿಷತ್‌ ಕಾರ್ಕಳ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!