Wednesday, October 27, 2021
spot_img
Homeವಿದೇಶಜೋ ಬೈಡೆನ್‌ : ಬಾಲ್ಯದಲ್ಲಿ ಕಂಡ ಕನಸು ಈಗ ನನಸಾಯಿತು

ಜೋ ಬೈಡೆನ್‌ : ಬಾಲ್ಯದಲ್ಲಿ ಕಂಡ ಕನಸು ಈಗ ನನಸಾಯಿತು

ವಾಷಿಂಗ್ಟನ್, ನ.8 : ಅಭೂತಪೋರ್ವ ಗೆಲುವಿನೊಂದಿಗೆ 46ನೇ ಅಧ್ಯಕ್ಷರಾಗಿ ಅಮೆರಿಕದ ಅಧಿಕಾರ ಚುಕ್ಕಾಣಿಯನ್ನು ಹಿಡಿಯಲು ಹೊರಟಿರುವ 77 ವರ್ಷದ ಹಿರಿಯ ರಾಜಕಾರಣಿ ಜೋ ಬೈಡನ್ ಅವರು ರಾಜಕೀಯದಲ್ಲಿ ಸಾಗಿ ಬಂದ ಹಾದಿ ಬಲು ರೋಚಕವೋ ಸ್ಫೂರ್ತಿದಾಯಕವೂ ಆಗಿದೆ. ಅವರು ಈಗಿನ ಕೆಲವು ರಾಜಕಾರಣಿಗಳಂತೆ ಪ್ಯಾರಾಶೋಟ್‌ ನಲ್ಲಿ ನೇರವಾಗಿ ರಾಜಕೀಯ ರಂಗಕ್ಕೆ ಧುಮುಕಿದವರಲ್ಲ. ಹಂತ ಹಂತವಾಗಿ ಮೇಲೇರುತ್ತಾ ಬಂದು ಈಗ ಪರಮೋಚ್ಛ ಅಧಿಕಾರ ಪೀಠವಾದ ಅಧ್ಯಕ್ಷ ಹುದ್ದೆಗೇರಿದ್ದಾರೆ. ಅನುಭವ, ಛಲ, ಮುತ್ಸದ್ದಿತನ, ವ್ಯವಹಾರ ಕೌಶಲ …ಹೀಗೆ ಓರ್ವ ಯಶಸ್ವಿ ರಾಜಕೀಯ ನಾಯಕನಿರಬೇಕಾದ ಎಲ್ಲ ಅರ್ಹತೆಗಳು ಬೈಡೆನ್‌ಗೆ ಇದೆ.
ಪಳಗಿದ ರಾಜಕಾರಣಿ
ಸರಿಸುಮಾರು 5 ದಶಕಗಳಿಂದ ಅಮೆರಿಕ ರಾಜಕೀಯದಲ್ಲಿ ಮಿಂದೆದ್ದು ಪಳಗಿದವರು. ಯುವ ಸೆನೆಟರ್ ನಿಂದ ಹಿಡಿದು ಅತ್ಯಂತ ಹಿರಿಯ ವಯಸ್ಸಿನ ಅಧ್ಯಕ್ಷರಾಗುವವರೆಗೆ ಅವರ ಪಯಣ ರೋಚಕ.
1988 ಮತ್ತು 2008ರಲ್ಲಿ ಎರಡು ಬಾರಿ ಅಧ್ಯಕ್ಷ ಪದವಿಗೆ ಸ್ಪರ್ಧಿಸಲು ಹೊರಟು ಯಶಸ್ಸು ಕಾಣದೆ ಡೆಮಾಕ್ರಟಿಕ್ ಪಕ್ಷದಿಂದ ಆರು ಬಾರಿ ಸೆನೆಟರ್ ಆಗಿ ನಂತರ ಬರಾಕ್ ಒಬಾಮಾ ಆಡಳಿತಾವಧಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಬಾಲ್ಯದ ಕನಸು
ಅಮೆರಿಕದ ಡೆಲವರೆ ರಾಜ್ಯದ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಜೋ ಬೈಡನ್ ಗೆ ಬಾಲಕನಿದ್ದಾಗಲೇ ಅಧ್ಯಕ್ಷ ಪದವಿ ಮೇಲೆ ಕನಸು ಕಂಡಿದ್ದರಂತೆ. ಮೂರನೇ ಬಾರಿ ಸೌತ್ ಕ್ಯಾರೊಲಿನಾ ಕ್ಷೇತ್ರದಿಂದ ಗೆದ್ದು ಸೆನೆಟರ್ ಆದ ಬಳಿಕ ಅಧ್ಯಕ್ಷ ಪದವಿಯ ಮೇಲಿನ ಭರವಸೆ ಹೆಚ್ಚುತ್ತಾ ಹೋಯಿತು. ವಾಷಿಂಗ್ಟನ್ ರಾಜ್ಯದಲ್ಲಿರುವವರಿಗೆ ಜೋ ಬೈಡನ್ ಚಿರಪರಿಚಿತ ಮುಖ. ಹಿಂದೆ ಬರಾಕ್ ಒಬಾಮಾ ಸರ್ಕಾರದಲ್ಲಿ ಎರಡು ಬಾರಿ ಕೂಡ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಈ ಬಾರಿಯ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಉತ್ತಮ ಬದಲಿ ಆಯ್ಕೆ ಎಂದು ಅಮೆರಿಕನ್ನರು ಭಾವಿಸಿದಂತಿದೆ.
ಅಮೆರಿಕದ ಆತ್ಮವನ್ನು ಮತ್ತೆ ಸ್ಥಾಪಿಸುತ್ತೇನೆ, ಅಮೆರಿಕನ್ನರ ಬಾಳಿಗೆ ಬೆಳಕಾಗುತ್ತೇನೆ ಎಂದೇ ಕಳೆದ ವರ್ಷ ಆಗಸ್ಟ್ ನಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಣೆಯಾದಾಗ ಹೇಳಿಕೊಂಡಿದ್ದರು.
ಈಗಿನ ಅಧ್ಯಕ್ಷರು ಅಮೆರಿಕವನ್ನು ಕತ್ತಲೆಯಲ್ಲಿ ಮುಚ್ಚಿಹಾಕಿದ್ದಾರೆ. ತುಂಬಾ ಕೋಪ. ತುಂಬಾ ಭಯ. ತುಂಬಾ ವಿಭಜನೆಯನ್ನು ಅಮೆರಿಕ ಕಾಣುತ್ತಿದೆ. ನೀವು ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಒಪ್ಪಿಸಿದರೆ, ಉತ್ತಮವಾದದ್ದನ್ನು ನೀಡುತ್ತೇನೆ, ಉತ್ತಮವಾದದ್ದನ್ನು ಸೆಳೆಯುತ್ತೇನೆ, ಕೆಟ್ಟದ್ದಲ್ಲ. ನಾನು ಬೆಳಕಿನ ಮಿತ್ರನಾಗುತ್ತೇನೆ ಹೊರತು ಕತ್ತಲೆಗಲ್ಲ ಎಂದು ಜೋ ಬೈಡನ್ ಹೇಳಿಕೊಂಡು ಬಂದಿದ್ದರು.

ಒಬಾಮ ಜೊತೆ

ಭಾರತದ ಮಿತ್ರ
ಡೆಲವರೆ ರಾಜ್ಯದಿಂದ ಮೂರು ದಶಕಗಳಿಗೂ ಹೆಚ್ಚು ಕಾಲ ಸೆನೆಟರ್ ಆಗಿದ್ದಾಗ ಮತ್ತು 8 ವರ್ಷಗಳ ಕಾಲ ಉಪಾಧ್ಯಕ್ಷರಾಗಿದ್ದ ಸಮಯದಲ್ಲಿ ಭಾರತ-ಅಮೆರಿಕ ಸಂಬಂಧ ಬಲವರ್ಧನೆಗೆ ಪ್ರೋತ್ಸಾಹಿಸಿದ್ದರು. ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಹಾಗೂ 500 ಬಿಲಿಯನ್ ಡಾಲರ್ ಗುರಿಯ ದ್ವಿಪಕ್ಷೀಯ ವ್ಯಾಪಾರದ ಗುರಿಯನ್ನು ಸ್ಥಾಪಿಸಲು ಭಾರತ ಸರ್ಕಾರದೊಂದಿಗೆ ಬೈಡನ್ ಬಲವಾದ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಇದು ಭಾರತೀಯ ಅಮೆರಿಕನ್ನರಿಗೆ ಬೈಡನ್ ಮೇಲೆ ವಿಶ್ವಾಸ ಮೂಡಲು ಸಹ ನೆರವಾಯಿತು ಎನ್ನಬಹುದು.
ಕಳೆದ ಜುಲೈಯಲ್ಲಿ ಧನಸಂಗ್ರಹ ಕಾರ್ಯಕ್ರಮವೊಂದರಲ್ಲಿ ಬೈಡನ್, ಭಾರತ ಮತ್ತು ಅಮೆರಿಕ ಸಹಜ ಸಹಭಾಗಿಗಳು ಎಂದು ಹೇಳಿದ್ದರು. ಈ ಕಾರ್ಯತಂತ್ರ ಸಹಭಾಗಿತ್ವ ನಮ್ಮ ಭದ್ರತೆಗೆ ಅತ್ಯಂತ ಮುಖ್ಯವಾಗಿದೆ ಎಂದು ಸಹ ಬೈಡನ್ ಹೇಳಿದ್ದರು. ತಾವು ಉಪಾಧ್ಯಕ್ಷರಾಗಿದ್ದಾಗ ಮಾಡಿಕೊಂಡ ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಅತ್ಯಂತ ದೊಡ್ಡ ಒಪ್ಪಂದವಾಗಿತ್ತು. ನಮ್ಮ ಸಂಬಂಧದಲ್ಲಿ ಹೆಚ್ಚಿನ ಪ್ರಗತಿಗೆ ಬಾಗಿಲು ತೆರೆಯಲು ಸಹಾಯ ಮಾಡುವುದು ಮತ್ತು ಭಾರತದೊಂದಿಗಿನ ನಮ್ಮ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುವುದು ಒಬಾಮಾ-ಬೈಡೆನ್ ಆಡಳಿತದಲ್ಲಿ ಹೆಚ್ಚಿನ ಆದ್ಯತೆಯಾಗಿತ್ತು ಮತ್ತು ನಾನು ಅಧ್ಯಕ್ಷರಾಗಿ ಆಯ್ಕೆಯಾದರೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಪ್ರಚಾರದ ವೇಳೆ ಹೇಳಿದ್ದರು.
ಕಿರಿಯ ವಯಸ್ಸಿನಲ್ಲಿ ಸೆನೆಟರ್‌

ಜೋ ಬೈಡನ್ ಹುಟ್ಟಿದ್ದು 1942ರಲ್ಲಿ ಪೆನ್ಸಿಲ್ವೇನಿಯಾದ ಕ್ಯಾಥೊಲಿಕ್ ಕುಟುಂಬದಲ್ಲಿ ಜೋಸೆಫ್ ಆರ್. ಬಿಡೆನ್ ಸೀನಿಯರ್ ಮತ್ತು ಕ್ಯಾಥರೀನ್ ಯುಜೆನಿಯಾ ಫಿನ್ನೆಗನ್ ದಂಪತಿಗೆ. ಡೆಲವರೆ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ 1968ರಲ್ಲಿ ಸಿರಕುಸೆ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಗಳಿಸಿದರು. ಡೆಲವರೆ ರಾಜ್ಯದಿಂದ 1972ರಲ್ಲಿ ಮೊದಲ ಬಾರಿಗೆ ಸೆನೆಟರ್ ಆಗಿ ಆಯ್ಕೆಯಾಗಿ ನಂತರ 6 ಬಾರಿ ಇದೇ ರಾಜ್ಯದಿಂದ ಗೆದ್ದು ಸೆನೆಟರ್ ಆಗಿ ಸೇವೆ ಸಲ್ಲಿಸಿದರು.29ನೇ ವಯಸ್ಸಿನಲ್ಲಿ ಅಮೆರಿಕ ಸೆನೆಟ್ ಗೆ ಆಯ್ಕೆಯಾದ ಅತ್ಯಂತ ಯುವ ರಾಜಕಾರಣಿ ಎಂಬ ಹೆಗ್ಗಳಿಕೆ ಕೂಡ ಇವರದ್ದೆ.
ಈ ಹಿಂದೆ 1988 ಮತ್ತು 2008ರಲ್ಲಿ ಅಮೆರಿಕ ಅಧ್ಯಕ್ಷೀಯ ಪದವಿ ಹುದ್ದೆಗೆ ಸ್ಪರ್ಧಿಸಲು ಅವರು ಬಯಸಿದ್ದರೂ ಪ್ರೋತ್ಸಾಹ, ಬೆಂಬಲ ಸಿಕ್ಕಿರಲಿಲ್ಲ. ಈ ಬಾರಿ ಸಿಕ್ಕಿತು, ಅದರಲ್ಲೂ ಕಪ್ಪು ಜನಾಂಗದವರ ಬೆಂಬಲ ಸಾಕಷ್ಟು ಸಿಕ್ಕಿತು.

ಹೆಂಡತಿ ಜೊತೆ

ನೋವು ನುಂಗಿ ನಕ್ಕವರು
ತಮ್ಮ ಕುಟುಂಬದ ವಿಷಯ, ಕುಟುಂಬಕ್ಕೆ ಎದುರಾದ ಆಘಾತವನ್ನು ಬೈಡನ್ ಮುಕ್ತವಾಗಿ ಮಾತನಾಡುತ್ತಾರೆ. 1972ರಲ್ಲಿ ನಡೆದ ಕಾರು ಅಪಘಾತದಲ್ಲಿ ಬೈಡನ್ ಅವರ ಮೊದಲ ಪತ್ನಿ ನೈಲಿಯಾ ಮತ್ತು 13 ತಿಂಗಳ ಮಗಳು ನಯೊಮಿ ಮೃತಪಟ್ಟರೆ, ಪುತ್ರರಾದ ಬ್ಯೂ ಮತ್ತು ಹಂಟರ್ ತೀವ್ರವಾಗಿ ಗಾಯಗೊಂಡಿದ್ದರು.
ನಂತರ ಒಬ್ಬಂಟಿಯಾದ ಬೈಡನ್ ಎರಡನೇ ಪತ್ನಿ ಜಿಲ್ಲ್ ಜಾಕೊಬ್ಸ್ ರನ್ನು ಭೇಟಿ ಮಾಡಿದ್ದು 1975ರಲ್ಲಿ, ನಂತರ 1977ರ ಜೂನ್ ನಲ್ಲಿ ಇಬ್ಬರೂ ವಿವಾಹವಾದರು. ಅವರಿಗೆ ಒಬ್ಬ ಮಗಳು ಅಶ್ಲೆ 1981ರಲ್ಲಿ ಜನಿಸಿದಳು.
2015ರಲ್ಲಿ ಮಗ ಬ್ಯೂ, ಮೆದುಳಿನ ಸಮಸ್ಯೆಯಿಂದ 46ನೇ ವರ್ಷದಲ್ಲಿ ತೀರಿಕೊಂಡರು, ಮತ್ತೊಬ್ಬ ಮಗ ಹಂಟರ್ ಡ್ರಗ್ ದಾಸನಾದ. ಸ್ವತಃ ಬೈಡನ್ ಅವರಿಗೆ 1988ರಲ್ಲಿ ಎರಡು ಬಾರಿ ಆರೋಗ್ಯ ಸಮಸ್ಯೆ ಮೆದುಳಿನ ತೊಂದರೆ ಕಾಣಿಸಿಕೊಂಡಿತು. ಇದನ್ನು ಕೂಡ ತಮ್ಮ ಪ್ರಚಾರದ ವೇಳೆ ಪ್ರಸ್ತಾಪಿಸಿ ಆರೋಗ್ಯ ನನ್ನ ವೈಯಕ್ತಿಕ ಕಾಳಜಿ ಎಂದಿದ್ದರು.
ಕಳೆದ ಏಪ್ರಿಲ್ ನಲ್ಲಿ ತಮ್ಮ ಕೊನೆಯ ಪ್ರತಿಸ್ಪರ್ದಿ ಸೆನೆಟರ್ ಬರ್ನಿ ಸ್ಯಾಂಡರ್ಸ್ ಅವರನ್ನು ಕೈಬಿಟ್ಟ ನಂತರ ಅಧ್ಯಕ್ಷೀಯ ಸ್ಪರ್ಧೆಗೆ ಅವರಿಗೆ ಅವಕಾಶ ಸಿಕ್ಕಿತು. 90ರ ದಶಕದಲ್ಲಿ ಸೆನೆಟ್ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಸೆನೆಟರ್ ಆಗಿದ್ದ ಬೈಡನ್ ಅವರು ಅನುಚಿತವಾಗಿ ವರ್ತಿಸಿದ್ದರು ಎಂದು ಮಾಜಿ ಉದ್ಯೋಗಿ ತಾರಾ ರೀಡ್ 2019ರಲ್ಲಿ ಆರೋಪಿಸಿದ್ದರು.1993ರಲ್ಲಿ ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದರು ಎಂದು ಸಹ ಕಳೆದ ಮಾರ್ಚ್ ನಲ್ಲಿ ರೀಡ್ ಆರೋಪಿಸಿದ್ದರು.
ಆದರೆ ಬೈಡನ್ ಮತ್ತು ಅವರ ಪ್ರಚಾರ ತಂಡ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿತ್ತು. ಸಮಾನ ಲಿಂಗ ವಿವಾಹ(ಎಲ್ ಜಿಬಿಟಿ)ಹಕ್ಕುಗಳ ಪರವಾಗಿ ಬೈಡನ್ ಮಾತನಾಡಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!