Sunday, September 26, 2021
spot_img
Homeರಾಜ್ಯಶಾಲಾ ಮಕ್ಕಳಿಗೆ ಬಿಸಿಯೂಟಕ್ಕೆ ಬದಲಾಗಿ ಸಿಗಲಿದೆ ಆಹಾರ ಧಾನ್ಯ

ಶಾಲಾ ಮಕ್ಕಳಿಗೆ ಬಿಸಿಯೂಟಕ್ಕೆ ಬದಲಾಗಿ ಸಿಗಲಿದೆ ಆಹಾರ ಧಾನ್ಯ

ಬೆಂಗಳೂರು,ನ.7 :ಕೊರೊನಾ ಕಾರಣ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕಳೆದ ಐದು ತಿಂಗಳಿಂದ ಮಧ್ಯಾಹ್ನದ ಬಿಸಿಯೂಟ ಪೂರೈಸಲಾಗಿಲ್ಲ. ಇದೀಗ ಬಿಸಿಯೂಟದ ಬದಲಾಗಿ ನಿಗದಿತ ಪ್ರಮಾಣದ ಅಕ್ಕಿ, ಗೋಧಿ ಮತ್ತು ತೊಗರಿ ಬೇಳೆಯನ್ನು ವಿತರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
1 ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಜೂನ್‌ನಿಂದ ನೀಡಬೇಕಿದ್ದ ಬಿಸಿಯೂಟಕ್ಕೆ ಬದಲಾಗಿ ರಜಾ ದಿನಗಳನ್ನು ಹೊರತುಪಡಿಸಿ 108 ದಿನಗಳಿಗೆ ಅನ್ವಯಿಸುವಂತೆ ಆಹಾರ ಧಾನ್ಯಗಳನ್ನು ನೀಡಲು ಸೂಚಿಸಲಾಗಿದೆ. ದಾಸ್ತಾನು ಸಮಸ್ಯೆ ಎದುರಾಗದಂತೆ ಎರಡು ಹಂತದಲ್ಲಿ ಧಾನ್ಯಗಳನ್ನು ವಿತರಿಸುವಂತೆ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮೊದಲ ಹಂತದಲ್ಲಿ ಜೂನ್‌ ಮತ್ತು ಜುಲೈ ತಿಂಗಳ 53 ದಿನಗಳಿಗೆ ಅನ್ವಯಿಸುವಂತೆ ಆಹಾರ ಧಾನ್ಯ ಪೂರೈಸಬೇಕು. ಈಗಾಗಲೇ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ (ಕೆಎಫ್‌ಸಿಎಸ್‌ಸಿ) ಮೊದಲ ಹಂತದ ಆಹಾರ ಧಾನ್ಯಗಳ ಖರೀದಿ ಪ್ರಕ್ರಿಯೆ ಮುಗಿದಿದ್ದು, ಪ್ರತಿ ಜಿಲ್ಲೆ, ತಾಲೂಕುಗಳಿಗೆ ಸರಬರಾಜು ಆರಂಭಿಸಲಾಗಿದೆ.
ಯಾವ ತರಗತಿ ಮಕ್ಕಳಿಗೆ ಎಷ್ಟು?
1 ರಿಂದ 5ನೇ ತರಗತಿ ವರೆಗಿನ ಮಕ್ಕಳಿಗೆ ಪ್ರತಿ ದಿನ ತಲಾ 100 ಗ್ರಾಂ. ಅಕ್ಕಿ ಅಥವಾ ಗೋಧಿ ಮತ್ತು 4.97 ರು. ಅಡುಗೆ ತಯಾರಿಕಾ ವೆಚ್ಚಕ್ಕೆ ಸಮನಾಗಿ 58 ಗ್ರಾಂ. ತೊಗರಿ ಬೇಳೆ ನೀಡಲು ನಿರ್ಧರಿಸಲಾಗಿದೆ. ಅದೇ ರೀತಿ 6ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಪ್ರತಿ ನಿತ್ಯ 150 ಗ್ರಾಂ ಅಕ್ಕಿ/ಗೋಧಿ ಮತ್ತು 7.45 ರೂ. ಮೊತ್ತಕ್ಕೆ ಸಮನಾಗಿ 87 ಗ್ರಾಂ ತೊಗರಿ ಬೇಳೆ ನೀಡಲು ತೀರ್ಮಾನಿಸಲಾಗಿದೆ. ಈ ಪೈಕಿ 1ರಿಂದ 8ನೇ ತರಗತಿ ಮಕ್ಕಳಿಗೆ ಮೊದಲ ಹಂತದ 53 ದಿನಗಳಲ್ಲಿ 45 ದಿನಗಳಿಗೆ ಅಕ್ಕಿ ಮತ್ತು ಬಾಕಿ 8 ದಿನಗಳಿಗೆ ಗೋಧಿ ಲೆಕ್ಕ ನೀಡಲು ನಿರ್ಧರಿಸಲಾಗಿದೆ. 9 ಮತ್ತು 10ನೇ ತರಗತಿ ಮಕ್ಕಳಿಗೆ ಪೂರ್ತಿ 53 ದಿನಗಳಿಗೂ ಅಕ್ಕಿಯನ್ನೇ ನೀಡಲು ಸೂಚಿಸಿದೆ.
1ರಿಂದ 5ನೇ ತರಗತಿಯ ಪ್ರತಿ ಮಕ್ಕಳಿಗೆ ಮೊದಲ ಹಂತದ 53 ದಿನಗಳ ಲೆಕ್ಕದಲ್ಲಿ ತಲಾ 4.50 ಕೆ.ಜಿ. ಅಕ್ಕಿ, 800 ಗ್ರಾಂ ಗೋಧಿ ಮತ್ತು 3.74 ಕೆ.ಜಿ. ತೊಗರಿ, 6ರಿಂದ 8ನೇ ತರಗತಿ ಮಕ್ಕಳಿಗೆ 6.75 ಕೆ.ಜಿ. ಅಕ್ಕಿ, 1.20 ಕೆ.ಜಿ ಗೋಧಿ, 4.61 ಕೆ.ಜಿ ಬೇಳೆ, 9 ಮತ್ತು 10ನೇ ತರಗತಿ ಮಕ್ಕಳಿಗೆ 7.95 ಕೆ.ಜಿ ಅಕ್ಕಿ, 4.61 ಬೇಳೆ ವಿತರಣೆಗೆ ಆದೇಶಿಸಲಾಗಿದೆ.
ತಮ್ಮ ಜಿಲ್ಲೆ, ತಾಲೂಕು ವ್ಯಾಪ್ತಿಯ ಶಾಲಾ ಮಕ್ಕಳಿಗೆ ಪೂರೈಸಬೇಕಾದ ಧಾನ್ಯ ಬಂದ ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರು ವಿತರಣೆ ಪ್ರಕ್ರಿಯೆ ಆರಂಭಿಸಬೇಕು. ಆಗಸ್ಟ್‌ನಿಂದ ಅಕ್ಟೋಬರ್‌ವರೆಗಿನ ಬಾಕಿ 55 ದಿನಗಳ ಆಹಾರ ಧಾನ್ಯ ಪೂರೈಕೆಗೆ ಪ್ರತ್ಯೇಕ ಸುತ್ತೋಲೆ ಹೊರಡಿಸಲಾಗುವುದು ಎಂದು ಇಲಾಖೆ ಆಯುಕ್ತ ವಿ.ಅನ್ಬುಕುಮಾರ್‌ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!