ದಿಲ್ಲಿ, ನ.6 : ಪರಿಶಿಷ್ಟ ಜಾತಿ ಮತ್ತು ವರ್ಗದವರ ವಿರುದ್ಧ ಆಡುವ ಪ್ರತಿಯೊಂದು ನಿಂದನೆಯ ಮಾತು ಪರಿಶಿಷ್ಟ ಜಾತಿ ಮತ್ತು ವರ್ಗದವರ ಮೇಲಿನ ದೌರ್ಜನ್ಯವನ್ನು ತಡೆಯುವ ಕಾಯಿದೆ ಅಡಿಯಲ್ಲಿ ಅಪರಾಧವೆಂದು ಪರಿಗಣನೆಯಾಗುವುದಿಲ್ಲ. ನಿಂದನೆಯಲ್ಲಿ ಅವಮಾನಿಸುವ ಉದ್ದೇಶ ಇದ್ದರೆ ಮಾತ್ರ ಈ ಕಾಯಿದೆ ಅಡಿಯಲ್ಲಿ ಕೇಸು ದಾಖಲಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮನೆಯ ನಾಲ್ಕು ಗೋಡೆಯ ನಡುವೆ ಯಾರೂ ಇಲ್ಲದ ಸಂದರ್ಭದಲ್ಲಿ ಆಡಿದ ಮಾತುಗಳನ್ನು ಅಪರಾಧ ಎಂದು ಪರಿಗಣಿಸಲಾಗದು. ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಕೇಳಿಸುವಂತೆ ಮಾಡಿದ ನಿಂದನೆಯನ್ನು ಮಾತ್ರ ಜಾತಿ ನಿಂದನೆ ಎಂದು ಪರಿಗಣಿಸಬೇಕೆಂದು ನ್ಯಾ. ಎಲ್. ಜಾಗೇಶ್ವರ ರಾವ್, ನ್ಯಾ. ಹೇಮಂತ್ ಗುಪ್ತ ಮತ್ತು ನ್ಯಾ. ಅಜಯ್ ರಸ್ತೋಗಿ ಅವರನ್ನೊಳಗೊಂಡ ಪೀಠ ಉತ್ತರಖಂಡ ರಾಜ್ಯದಲ್ಲಿ ದಾಖಲಾದ ಜಾತಿ ನಿಂದನೆ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಹೇಳಿದೆ.
ನಿಂದನೆಗೊಳಗಾದ ವ್ಯಕ್ತಿ ಪರಿಶಿಷ್ಟ ಜಾತಿ ಅಥವಾ ವರ್ಗಕ್ಕೆ ಸೇರಿದ್ದಾನೆ ಎಂಬ ಒಂದೇ ಕಾರಣಕ್ಕೆ ಎಲ್ಲ ನಿಂದನೆಗಳು ಜಾತಿ ನಿಂದನೆಯಾಗುವುದಿಲ್ಲ. ನಿಜವಾಗಿ ಅವಮಾನಿಸುವ ಉದ್ದೇಶ ಇತ್ತೇ ಇಲ್ಲವೇ ಎನ್ನುವುದನ್ನು ಸಾಬೀತಾಗಬೇಕು.
ಸಮಾಜದ ಹಿಂದುಳಿದ ಮತ್ತು ದಮನಿತ ವರ್ಗದವರನ್ನು ಮೇಲ್ವರ್ಗದವರಿಂದ ನಿಂದನೆ ಮತ್ತು ಶೋಷಣೆಗೊಳಗಾಗುವುದರಿಂದ ಕಾಪಾಡಲು ತಂದಿರುವ ಕಾನೂನಿನ ಉದ್ದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರ ಎದರು ಉದ್ದೇಶಪೂರ್ವಕವಾಗಿ ಅವಮಾನಿಸಲು ಆಡಿದ ಮಾತನ್ನು ಮಾತ್ರ ಜಾತಿ ನಿಂದನೆ ಎಂದು ಪರಿಗಣಿಸಬೇಕು ಎಂದು ನ್ಯಾಯಾಲಯ ಈ ಪ್ರಕರಣವನ್ನು ಇತ್ಯರ್ಥಪಡಿಸಿ ಹೇಳಿದೆ.
