Homeಅಂಕಣಆರೋಗ್ಯಧಾರಾ - ಪಿತ್ತ ಪ್ರಕೃತಿ ವ್ಯಕ್ತಿಗಳಿಗೆ ಕಾಡುವ ಸಮಸ್ಯೆ ಹಾಗೂ ಪರಿಹಾರ

Related Posts

ಆರೋಗ್ಯಧಾರಾ – ಪಿತ್ತ ಪ್ರಕೃತಿ ವ್ಯಕ್ತಿಗಳಿಗೆ ಕಾಡುವ ಸಮಸ್ಯೆ ಹಾಗೂ ಪರಿಹಾರ

ಪಿತ್ತ ಪ್ರಕೃತಿ ವ್ಯಕ್ತಿಗಳಿಗೆ ಪಿತ್ತಜನ್ಯ ರೋಗವು ಕಾಡುವುದು ಅಧಿಕ. ಆದ್ದರಿಂದ ಪಿತ್ತ ಶಮನ ಆಹಾರ ಕ್ರಮ ಪಾಲಿಸುವುದು ಹಿತಕರ.
ಪಿತ್ತದ ಗುಣಗಳು ಸ್ನೇಹ ತೀಕ್ಷ್ಣ ,ಉಷ್ಣ ,ಲಘು, ವಿಸ್ರ ,ಸರ, ದ್ರವ.
ಪಿತ್ತದ ಉಷ್ಣ ಗುಣದಿಂದ ಉಷ್ಣ ರೋಗಗಳು ಅಂದ್ರೆ ತ್ವಚೆ ಸುಕ್ಕುಗಟ್ಟುವುದು ,ಕೂದಲು ಉದುರುವುದು, ಬಿಳಿ ಕೂದಲು ,ಮಚ್ಚೆ ,ಹೆಪೆಟೈಟಿಸ್, ಉರಿಯೂತ ರೋಗಗಳನ್ನು ಕಾಣಬಹುದು . ಇದಕ್ಕೆ ಸುಲಭ ಉಪಾಯವೆಂದರೆ ಆಹಾರದಲ್ಲಿ ತುಪ್ಪವನ್ನು ಮಿತವಾಗಿ ಬಳಸುವುದು . ಎರಡೆರಡು ಹನಿ ತುಪ್ಪವನ್ನು ಮುಂಜಾನೆ ಎದ್ದ ತಕ್ಷಣ ಮೂಗಿನ ಹೊಳ್ಳೆಗೆ ಹಾಕುವುದರಿಂದ ಲಾಭವು ಅಧಿಕ ಹಾಗೂ ನಾಭಿ ಪ್ರದೇಶದಲ್ಲಿ ಸ್ವಲ್ಪ ತುಪ್ಪವನ್ನು ದಿನಾಲು ಸವರುವುದು.
ಪಿತ್ತದ ತೀಕ್ಷ್ಣ ಗುಣದಿಂದ ರಕ್ತಸ್ರಾವದ ಅಸ್ವಸ್ಥತೆಗಳು ಹಾಗು ಮಾನಸಿಕ ಉದ್ವೇಗ ಹೆಚ್ಚು ಇರುವುದು. ಇವರಿಗೆ ಆಮಲಕಿ ಅಂದರೆ ನೆಲ್ಲಿಕಾಯಿಯ ಸೇವನೆ ಆರೋಗ್ಯದಾಯಕ. ನೆಲ್ಲಿ ಕಾಯಿಯಿಂದ ತಯಾರಿಸಿದ ಜ್ಯೂಸ್, ಮೊರಬ್ಬ, ನೆಲ್ಲಿಕಾಯಿ ಚೂರ್ಣ ಸೇವನೆಯಿಂದ ಉತ್ತಮ ಫಲಿತಾಂಶ ದೊರಕುವುದು. ಇದರಿಂದ ತ್ವಚೆ ಹಾಗೂ ಕೂದಲಿನ ಸಮಸ್ಯೆ ಕಡಿಮೆಯಾಗುವುದು.
ಅಧಿಕ ಬೆವರುವಿಕೆ ಹಾಗು ದೇಹ ದುರ್ಗಂಧ ಸಮಸ್ಯೆ ಕಾಡುವುದು .ಇದನ್ನು ಕಡಿಮೆಗೊಳಿಸಲು ಚಂದನದ ಲೇಪನ, ಕರ್ಪೂರದ ಲೇಪನ ಅಥವಾ ಯಾವುದೇ ಸುಗಂಧ ದ್ರವ್ಯಗಳ ಸುಗಂಧಭರಿತ ಪುಷ್ಪಗಳ ಲೇಪನ ಮಾಡುವುದು ಹಿತಕರ. 4 ಬಿಲ್ವದ ಎಲೆಗಳನ್ನು ಸೇವಿಸುವುದು ಕೂಡ ಲಾಭದಾಯಕ.
ಪಿತ್ತ ಪ್ರಕೃತಿಯ ವ್ಯಕ್ತಿಗಳಿಗೆ ಮಧುರ ರಸ , ಕಟು ರಸ ಹಾಗೂ ಕಷಾಯ ರಸಯುಕ್ತ ಹಾಗೂ ಗುರು ಆಹಾರ ಸೇವನೆ ಆರೋಗ್ಯದಾಯಕ . ಗುರು ಆಹಾರ ಎಂದರೆ ಪಚನಕ್ಕೆ ಅಧಿಕ ಸಮಯ ಹಿಡಿಯುವ ಆಹಾರ. ಸಿಹಿ ತಿನಿಸುಗಳು ,ಹಾಗಲಕಾಯಿ ,ಬೇವು, ಪಡವಳಕಾಯಿ ಸೇವನೆ ಇವರಿಗೆ ಆರೋಗ್ಯಕರ.
ಜಿಡ್ಡಿನ ಪದಾರ್ಥ, ಮಸಾಲೆಯುಕ್ತ ಆಹಾರ, ಲವಣಾಂಶ ಅಧಿಕ ಇರುವ ಆಹಾರ ಸೇವನೆಯಿಂದ ಆದಷ್ಟು ದೂರವಿರುವುದು ಹಿತಕರ.
ಹಾಲಿನ ಸೇವನೆ ಉತ್ತಮ . ಶುದ್ಧ ಹಾಲಿನ ತುಪ್ಪವು ಪಿತ್ತ ಪ್ರಕೃತಿಯ ವ್ಯಕ್ತಿಗಳಿಗೆ ಅತ್ಯುತ್ತಮ .ಚಂದ್ರನ ಬೆಳಕು ಪಿತ್ತ ಪ್ರಕೃತಿಯ ವ್ಯಕ್ತಿಗಳ ದೇಹವನ್ನು ತಂಪು ಮಾಡುತ್ತದೆ . ಮನಸ್ಸಿನ ಉದ್ವೇಗ ಕಡಿಮೆಗೊಳಿಸಲು ಧ್ಯಾನ ಪ್ರಾಣಾಯಾಮ ಮಾಡುವುದು ಹಿತ. ಪ್ರಾಣಾಯಾಮದಲ್ಲಿ ಶೀತಲೀ ಪ್ರಾಣಾಯಾಮ ಶೀತ್ಕಾರೀ ಪ್ರಾಣಾಯಾಮಗಳು ಪಿತ್ತವನ್ನು ಶಮನಗೊಳಿಸುತ್ತದೆ. ಇಂಪಾದ ಸಂಗೀತ ಕೇಳುವುದು ಹಸಿರು ವಾತಾವರಣದಲ್ಲಿ ಹಾಗೂ ಶೀತಲ ಪ್ರದೇಶದಲ್ಲಿ ವಾಸಿಸುವುದು ಒಳ್ಳೆಯದು.
ಪಂಚಕರ್ಮದಲ್ಲಿ ರಕ್ತಮೋಕ್ಷಣ ಹಾಗೂ ಶರದ್ ಋುತುವಿನಲ್ಲಿ ವಿರೇಚನ ಮಾಡುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುವುದು . ಆಯುರ್ವೇದ ವೈದ್ಯರನ್ನು ವಿಚಾರಿಸಿರಿ ತಿಳಿದುಕೊಳ್ಳಿ.
ಡಾ. ಹರ್ಷಾ ಕಾಮತ್‌
ಖ್ಯಾತ ಆಯುರ್ವೇದ ತಜ್ಞರು

LEAVE A REPLY

Please enter your comment!
Please enter your name here

Latest Posts

error: Content is protected !!