ವಿಯೆನ್ನಾ, ನ.3 : ಮುಂಬಯಿ ಉಗ್ರರ ದಾಳಿಯನ್ನು ನೆನಪಿಸುವಂತಹ ಘಟನೆ ಆಸ್ಟ್ರಿಯಾ ರಾಜಧಾನಿ ವಿಯೆನ್ನಾದಲ್ಲಿ ನಡೆದಿದೆ. ವಿಯೆನ್ನಾದ 6 ಕಡೆಗಳಲ್ಲಿ ಏಕಕಾಲದಲ್ಲಿ ಉಗ್ರರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ 7 ಮಂದಿ ಮೃತಪಟ್ಟು 14 ಮಂದಿ ಗಾಯಗೊಂಡಿದ್ದಾರೆ.
ವಿಯೆನ್ನಾದ ಪ್ರಾರ್ಥನಾ ಮಂದಿರದಲ್ಲಿ ಉಗ್ರವಾದಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ಪೈಕಿ ಒಬ್ಬನನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿವೆ.
ನಗರ ಪಬ್ ಮತ್ತು ಬಾರ್ ಗಳಲ್ಲಿ ಸೇರಿದ್ದ ಜನರ ಮೇಲೆ ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದು ಸುಮಾರು 100 ಸುತ್ತು ಗುಂಡು ಹಾರಿಸಿರಬಹುದು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಉಗ್ರನೊಬ್ಬ ಕಿರುಚುತ್ತಾ ಗುಂಡಿನ ದಾಳಿ ನಡೆಸುತ್ತಾ ಓಡಾಡುತ್ತಿದ್ದ ಎಂದವರು ಘಟನೆಯನ್ನು ವಿವರಿಸಿದ್ದಾರೆ.
ಇನ್ನು ಪ್ರವಾಸಿಗರನ್ನು ಉಗ್ರರು ವಿಯೆನ್ನಾದ ಹೊಟೇಲ್ ನಲ್ಲಿ ಬಂಧಿಯಾಗಿಸಿದ್ದಾರೆ ಎನ್ನಲಾಗಿದೆ. ವಿಯೆನ್ನಾ ನಗರದ ಪ್ರವಾಸಿ ತಾಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಆಸ್ಟ್ರಿಯಾ ಸೇನೆ ಉಗ್ರರ ದಮನಕ್ಕೆ ಕಣಕ್ಕಿಳಿದಿದೆ.
ನಗರದಲ್ಲಿ ಶಾಲೆಗೆ ರಜೆ ನೀಡಿಲಾಗಿದ್ದು, ಜನ ಮನೆ ಬಿಟ್ಟು ಹೊರ ಬರದಂತೆ ಆದೇಶಿಸಿಲಾಗಿದೆ. ಒಬ್ಬ ಉಗ್ರ ಕೂಗಾಡುತ್ತಾ ಕಿರುಚುತ್ತಾ ಗುಂಡಿನ ದಾಳಿ ನಡೆಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿಯೆನ್ನಾದಲ್ಲಿ ನಡೆದಿರುವ ಉಗ್ರರ ದಾಳಿಯನ್ನು ಖಂಡಿಸಿದ್ದು, ಆಸ್ಟ್ರಿಯಾ ಜೊತೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ.
