ಉಡುಪಿ, ನ. 2 : ಗಲ್ಫ್ ದೇಶದಲ್ಲಿ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾಗಿದ್ದ ಭಾರತೀಯರಿಗೆ ಮಾನವೀಯ ನೆರವು ನೀಡಿದ ಉಡುಪಿ ಮೂಲದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ಸೇವೆಯನ್ನು ಗುರುತಿಸಿ ಕತಾರ್ನ ಭಾರತೀಯ ರಾಯಭಾರ ಕಚೇರಿ ಅವರಿಗೆ ಪ್ರಶಂಸಾ ಪತ್ರವನ್ನು ನೀಡಿದೆ.
ಇಂಡಿಯನ್ ಕಮ್ಯುನಿಟಿ ಬೆನೆವಲೆಂಟ್ ಫಾರಮ್ ದೋಹಾ ಕತಾರ್ ಸಂಸ್ಥೆಯ ಜೊತೆ ಕಾರ್ಯದರ್ಶಿಯಾಗಿರುವ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಈ ಸಂಸ್ಥೆಯ ಮೂಲಕ ಕೊರೊನಾ ಸಮಯದಲ್ಲಿ ಅತಂತ್ರರಾದವರಿಗೆ ಆಹಾರ, ಆಶ್ರಯ ನೀಡಲು ಪ್ರಯತ್ನಿಸಿದ್ದರು ಹಾಗೂ ಭಾರತೀಯರನ್ನು ತವರೂರಿಗೆ ಕಳುಹಿಸುವಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ಕತಾರ್ ನಲ್ಲಿರುವ ಭಾರತೀಯ ಸಮುದಾಯಕ್ಕೆ ಕಳೆದ ಕೆಲವು ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ನಿಮಗೆ ಧನ್ಯವಾದಗಳು. ಕೊರೊನಾ ಕಾಲದಲ್ಲಿ ನಿಮ್ಮ ಆರೋಗ್ಯವನ್ನೇ ಅಪಾಯಕ್ಕೊಡ್ಡಿ ಸಂತ್ರಸ್ತರಿಗೆ ನೆರವಾಗಿರುವುದು ಅಮೋಘವಾದ ಸೇವೆ ಎಂದು ಉಡುಪಿ ಜಿಲ್ಲೆಯ ತಗ್ಗರ್ಸೆಯವರಾಗಿರುವ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರನ್ನು ರಾಯಭಾರ ಕಚೇರಿ ಪ್ರಶಂಸಿದೆ.
