ಡಿಸೆಂಬರ್‌ ದ್ವಿತೀಯಾರ್ಧದಲ್ಲಿ ಶಾಲೆಗಳು ಪ್ರಾರಂಭ?

ಬೆಂಗಳೂರು, ಅ.31 : ರಾಜ್ಯದಲ್ಲಿ ಡಿ.15ರ ಬಳಿಕ ಶಾಲೆಗಳು ಪ್ರಾರಂಭವಾಗುವ ಸಾಧ್ಯತೆಗಳಿವೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಸದ್ದಿಲ್ಲದೆ ಕಾರ್ಯನಿರತವಾಗಿದೆ ಎಂದು ಮೂಲವೊಂದು ತಿಳಿಸಿದೆ.
ಕೊರೊನಾ ಕಾರಣದಿಂದ ಕಳೆದ ಎಂಟು ತಿಂಗಳಿಂದ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ನಿರ್ದಿಷ್ಟವಾಗಿ 10 ಮತ್ತು ದ್ವಿತೀಯ ವರ್ಷದ ಪಿಯುಸಿ ಮಕ್ಕಳು ಮತ್ತು ಅವರ ಹೆತ್ತವರು ಈ ವರ್ಷದ ಶಿಕ್ಷಣದ ಬಗ್ಗೆ ಹೆಚ್ಚು ಚಿಂತಾಕ್ರಾಂತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕನಿಷ್ಠ ಈ ಎರಡು ತರಗತಿಗಳಿಗೆ ಶಾಲೆಗಳನ್ನು ಪುನರಾರಂಭಿಸುವ ಸಿದ್ಧತೆಯಲ್ಲಿ ತೊಡಗಿದೆ.
ನ.2ರಂದು ಎಲ್ಲ ಜಿಲ್ಲೆಗಳ ಡಿಡಿಪಿಐಗಳ ಜೊತೆಗೆ ವೀಡಿಯೊ ಕಾನ್ಫರೆನ್ಸ್‌ ನಡೆಯಲಿದ್ದು, ಇದರಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಾಗುವುದು.
ರಾಜ್ಯದಲ್ಲಿ ನ.17ರಿಂದ ಕಾಲೇಜುಗಳು ಪ್ರಾರಂಭವಾಗಲಿವೆ. ಆಗ ಪರಿಸ್ಥಿತಿ ಹೇಗಿರುತ್ತದೆ ಎಂದು ನೋಡಿಕೊಂಡು ಶಾಲೆಗಳನ್ನು ಪ್ರಾರಂಭಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು. ಬಹುತೇಕ 10 ಮತ್ತು 12ನೇ ತರಗತಿ ಮಕ್ಕಳಿಗೆ ಡಿ.15ರ ಬಳಿಕ ಶಾಲೆಗಳು ಆರಂಭವಾಗುವ ಸಾಧ್ಯತೆಯಿದೆ ಎಂದು ಮೂಲವೊಂದು ತಿಳಿಸಿದೆ.
ಇತ್ತೀಚೆಗೆ ಮುಖ್ಯಮಂತ್ರಿಯವರ ಜೊತೆಗೆ ಶಾಲೆಗಳನ್ನು ಆರಂಭಿಸುವ ಕುರಿತು ಮಾತುಕತೆ ನಡೆಸಲಾಗಿದೆ. ಮುಖ್ಯಮಂತ್ರಿಯವರು ಹಂತಹಂತವಾಗಿ ಶಾಲೆಗಳನ್ನು ಪ್ರಾರಂಭಿಸಲು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆರಂಭದಲ್ಲಿ 10 ಮತ್ತು 12ನೇ ತರಗತಿಗಳಿಗೆ ಪಾಠ ಪ್ರವಚನಗಳು ಪ್ರಾರಂಭವಾಗಲಿವೆ ಎನ್ನಲಾಗಿದೆ. ಯಾವುದಕ್ಕೂ ಪದವಿ ಕಾಲೇಜುಗಳು ಪ್ರಾರಂಭವಾದ ಬಳಿಕ ಪರಿಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ನೋಡಿಕೊಂಡು ಮುಂದುವರಿಯಲು ನಿರ್ಧರಿಸಲಾಗಿದೆ.









































































































































































error: Content is protected !!
Scroll to Top