
ಮುಂಬಯಿ, ಅ.31: ಕರ್ನಾಟಕದಲ್ಲಿ ಭಾನುವಾರ ರಾಜ್ಯೋತ್ಸವ ಸಂಭ್ರಮವಾದರೆ ನೆರೆ ರಾಜ್ಯವಾದ ಮಹಾರಾಷ್ಟ್ರ ಬೆಳಗಾವಿ ಗಡಿ ವಿವಾದದ ಹಿನ್ನೆಲೆಯಲ್ಲಿ ನ.1ನ್ನು ಕರಾಳ ದಿನವನ್ನಾಗಿ ಆಚರಿಸಲು ತೀರ್ಮಾನಿಸಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರ ತನ್ನ ಎಲ್ಲಾ ಸಚಿವರುಗಳಿಗೆ ನ.1ರಂದು ಕೈಗಳಿಗೆ ಕಪ್ಪು ರಿಬ್ಬನ್ ಕಟ್ಟಿ ಕಪ್ಪು ದಿನವಾಗಿ ಆಚರಿಸುವಂತೆ ಕರೆ ನೀಡಿದೆ. ಈ ಮೂಲಕ ಬೆಳಗಾವಿಯಲ್ಲಿರುವ ಮಹಾರಾಷ್ಟ್ರ ಪರ ಗುಂಪುಗಳಿಗೆ ಬೆಂಬಲ ಸೂಚಿಸಿದೆ.
ಮಹಾರಾಷ್ಟ್ರದ ಲೋಕೋಪಯೋಗಿ ಸಚಿವ ಏಕನಾಥ್ ಶಿಂಧೆ ಸಚಿವರು ನ.1ರಂದು ಕೈಗೆ ಕಪ್ಪು ಬ್ಯಾಂಡ್ ಕಟ್ಟಿ ಬೆಳಗಾವಿಯಲ್ಲಿ ಮರಾಠಿಗರ ಹೋರಾಟವನ್ನು ಬೆಂಬಲಿಸಬೇಕೆಂಬ ಪ್ರಸ್ತಾವ ಇಟ್ಟಿದ್ದು, ಸಚಿವ ಛಗನ್ ಭುಜಬಲ್ ಇದನ್ನು ಬೆಂಬಲಿಸಿದ್ದಾರೆ. ಶಿವಸೇನೆ-ಎನ್ ಸಿಪಿ-ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಎಲ್ಲ ಸಚಿವರು ರಾಜ್ಯೋತ್ಸವ ದಿನ ಕಪ್ಪು ಪಟ್ಟಿ ಧರಿಸಲಿದ್ದಾರೆ.