ಇದೇನಾ ಇತಿಹಾಸ…! -ಭಾರತಕ್ಕೆ ಮುಸ್ಲಿಂ ದಾಳಿ ಮತಾಂತರ ಪ್ರೇರಿತವೆ?

0

ಅಗಾಧ ಭಾರತವು ಮೊದಲಾಗಿ ದಾಳಿಗೆ ಒಳಗಾದದ್ದು ಕ್ರಿ. ಪೂ. 326 ರಲ್ಲಿ. ಮೆಸಿಡೋನಿಯದ ದೊರೆ ಅಲೆಕ್ಸಾಂಡರ್ ಈ ದಾಳಿಯನ್ನು ಮಾಡಿದ್ದ. ಮುಸಲ್ಮಾನರು ಪ್ರಪ್ರಥಮ ಬಾರಿಗೆ ದಾಳಿ ಮಾಡಿರುವುದು ಕ್ರಿ. ಶ. 712 ರಲ್ಲಿ. ಮೊದಲ ಬಾರಿಗೆ ಭಾರತದ ಸಿಂಧೂ ಪ್ರಾಂತ್ಯಕ್ಕೆ ಅರಬರು ದಾಳಿ ನಡೆಸುತ್ತಾರೆ. ಈ ದಾಳಿಯ ನಂತರ ಹಲವಾರು ಮುಸ್ಲಿಂ ದಾಳಿಗಳು ಭಾರತದ ಮೇಲೆ ನಡೆಯುತ್ತದೆ. ಇದರಲ್ಲಿ ಗಝನಿ ಮೊಹಮ್ಮದ್, ಘೋರಿ ಮಹಮ್ಮದ್, ಮೊಘಲರು, ಅಫ್‍ಘಾನರು ಇತ್ಯಾದಿ. 17 ಬಾರಿ ಭಾರತಕ್ಕೆ ದಾಳಿ ಮಾಡಿದ ಘಜನಿ ಮೊಹಮದ್ ಹಲವಾರು ದೇವಾಲಯಗಳನ್ನು ಧ್ವಂಸಗೊಳಿಸಿ ಅಲ್ಲಿರುವ ಸಂಪತ್ತನ್ನು ದೋಚುತ್ತಾನೆ. ಮುಖ್ಯವಾಗಿ ಗುಜರಾತ್‍ನ ಸೋಮನಾಥ ದೇವಾಲಯ. ಈ ಸ್ವರೂಪದ ಮುಸ್ಲಿಂ ದಾಳಿಗಳೆಲ್ಲ ಮರುಕಳಿಸುತ್ತಲೇ ಇದ್ದವು.
ಇಲ್ಲಿ ಬಹಳ ಮುಖ್ಯ ಪ್ರಶ್ನೆ ಮುಸ್ಲಿಮರ ದಾಳಿ ಧರ್ಮಾಂಧತೆಯಿಂದ ಕೂಡಿತ್ತೇ? ಧರ್ಮ ಪ್ರಚಾರ ಮೂಲ ಉದ್ದೇಶವೇ? ಹಿಂದೂ ದೇವಾಲಯಗಳನ್ನು ದ್ವಂಸಗೊಳಿಸಿ ಹಿಂದುಗಳನ್ನು ಮತಾಂತರಗೊಳಿಸುವುದೇ ಆಗಿತ್ತೇ? ಈ ಎಲ್ಲಾ ಪ್ರಶ್ನೆಗಳು ಬಹಳ ಸೂಕ್ಷ್ಮವಾದದ್ದು ಮತ್ತು ಗಂಭೀರವಾದದ್ದು.
ಇತಿಹಾಸದುದ್ದಕ್ಕೂ ಮುಸ್ಲಿಂ ದಾಳಿಯನ್ನು ಬೇರೆ ಬೇರೆ ಆಯಾಮಗಳಲ್ಲಿ ಬಿಂಬಿಸಲಾಗಿದೆ ಮತ್ತು ವ್ಯಾಖ್ಯಾನಿಸಲಾಗಿದೆ. ಬಹುತೇಕವಾಗಿ ಮುಸ್ಲಿಂ ದಾಳಿ ಮತಾಂತರ ಪ್ರೇರಿತವಾಗಿತ್ತು ಅಂತಲೆ
ವಿಜೃಂಭಿಸಲಾಗಿದೆ.ಆದರೆ ಬಹಳ ಮುಖ್ಯವಾಗಿ ಯಾವುದೇ ಮುಸ್ಲಿಮ್ ದಾಳಿಯ ಮೂಲ ಮತ್ತು ಪ್ರಮುಖ ಉದ್ದೇಶ ಧರ್ಮವಾಗಿರಲಿಲ್ಲ. ಬ್ರಿಟಿಷ್ ಮತ್ತು ಪೋರ್ಚುಗೀಸರ ದಾಳಿಯೂ ಕೂಡ. ಅವರ ಉದ್ದೇಶ ದಂಡಯಾತ್ರೆ, ಸಮ್ರಾಜ್ಯಶಾಹಿ, ರಾಜಕೀಯ ಮತ್ತು ಆರ್ಥಿಕ ಅಂಶಗಳೇ ಆಗಿತ್ತು. ಧರ್ಮ ಕೊನೆಯ ಆದ್ಯತೆಯಾಗಿತ್ತು. ಎಲ್ಲಾ ಪರಕೀಯ ದಾಳಿಗಳು ಈ ಹಿನ್ನಲೆಯಿಂದಲೇ ಆಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಅವರ ದಾಳಿ ಧರ್ಮ ಪ್ರೇರಿತವಲ್ಲವಾದರೆ ಅವರು ದೇವಾಲಯಗಳನ್ನು ದ್ವಂಸಗೊಳಿಸಿರುವುದೇಕೆ ಮತಾಂತರ ಮಾಡಿರುವುದೇಕೆ ಎಂಬೆಲ್ಲ ಪ್ರಶ್ನೆಗಳು ಸಾಮಾನ್ಯವಾಗಿಯೇ ಹುಟ್ಟಿಕೊಳ್ಳುತ್ತವೆ. ಈ ಬಗ್ಗೆ ಕೆಲವು ಸ್ವಷ್ಟನೆಗಳಿವೆ. ಪರಕೀಯರು ಮೂಲಭೂತವಾಗಿ ಭಾರತದ ಮೇಲೆ ದಾಳಿ ಮಾಡಿರುವುದು ರಾಜಕೀಯ ಮತ್ತು ಆರ್ಥಿಕ ಕಾರಣಗಳಿಗಾಗಿಯೇ. ರಾಜಕೀಯವಾಗಿ ಭಾರತದಲ್ಲಿ ಒಂದು ಸಾಮ್ರಾಜ್ಯವನ್ನು ಸ್ಥಾಪಿಸಬೇಕು, ರಾಜ್ಯ ಸ್ಥಾಪಿಸಲು ಆರ್ಥಿಕ ಬಲ ಬೇಕು. ನಮ್ಮಲ್ಲಿ ಆರ್ಥಿಕ ಬಲ ಇರುವುದು ದೇವಾಲಯಗಳಲ್ಲಿ. ಭಾರತವನ್ನು ಬಿಟ್ಟರೆ ಜಗತ್ತಿನ ಯಾವುದೇ ಭಾಗದಲ್ಲಿ ಧಾರ್ಮಿಕ ಕೇಂದ್ರಗಳು, ದೇವಾಲಯಗಳು ಆರ್ಥಿಕ ಶಕ್ತಿಗಳಲ್ಲ. ನಮ್ಮ ದೇವಾಲಯಗಳಲ್ಲಿ ಹಣ ಮತ್ತು ಸಂಪತ್ತು ಕ್ರೋಢೀಕರಣಗೊಂಡಿರುತ್ತದೆ. ಆದುದರಿಂದಲೆ ಚರ್ಚ್ ಮತ್ತು ಮಸೀದಿಗಳಿಗಿಂತ ದೇವಾಲಯಗಳಲ್ಲೆ ಹೆಚ್ಚು ಕಳ್ಳತನಗಳಾಗುತ್ತವೆ. ಅದರಲ್ಲೂ ಪ್ರಾಚೀನ ಭಾರತದಲ್ಲಿ ದೇವಾಲಯಗಳೇ ಆರ್ಥಿಕ ಕೇಂದ್ರಗಳು. ಈ ಹಿನ್ನಲೆಯಲ್ಲಿ ಭಾರತಕ್ಕೆ ದಾಳಿ ಮಾಡಿದ ಮುಸಲ್ಮಾನರು ಈ ಸತ್ಯವನ್ನು ತಿಳಿದುಕೊಂಡು ತಮ್ಮ ಆರ್ಥಿಕ ಕ್ರೋಢೀಕರಣಕ್ಕೆ ದೇವಾಲಯಗಳನ್ನು ಕೊಳ್ಳೆಹೊಡೆದು ಸಂಪತ್ತನ್ನು ಸಂಪಾದಿಸಿದರು. ಅಲ್ಲಿಂದ ಬಂದು ಇಲ್ಲಿ ಇರಬೇಕಾದರೆ ಅವರೆಲ್ಲರಿಗೂ ಆರಾಧನ ಕೇಂದ್ರದ ಅವಶ್ಯಕತೆ ಇತ್ತು. ತಕ್ಷಣಕ್ಕೆ ಪ್ರಾರ್ಥನಾ ಕೇಂದ್ರಗಳು ಬೇಕೆಂದಾಗ ಹಿಂದೂ ದೇವಾಲಯಗಳನ್ನು ಮಸೀದಿಗಳಾಗಿ ಬದಲಾಯಿಸಿದರು. ಕಾಗೆ ಗೂಡಿನಲ್ಲಿ ಕೋಗಿಲೆ ಮೊಟ್ಟೆ ಇಟ್ಟಂತೆ. ಇದಕ್ಕೆ ಬಾಬರಿ ಮಸೀದಿಯೇ ಒಂದು ಉದಾಹರಣೆ.
ಬಹಳ ಮುಖ್ಯವಾಗಿ 712 ರಲ್ಲಿ ಅರಬರು ಭಾರತಕ್ಕೆ ದಾಳಿ ಮಾಡಿದಾಗ ಸಾವಿರಗಟ್ಟಲೆ ಬ್ರಾಹ್ಮಣರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಿಸಿದರು ಎಂದು ಹೇಳಲಾಗುತ್ತದೆ. ಇದಕ್ಕೆ ಕೂಡ ಧರ್ಮ ಮಾತ್ರ ಕಾರಣವಲ್ಲ. ಹಿಂದೂ ಪ್ರಾಂತ್ಯಕ್ಕೆ ದಾಳಿ ಮಾಡಿದಾಗ ಸಹಜವಾಗಿಯೇ ಅವರಿಗೆ ಯಾರ ಬೆಂಬಲವೂ ಇರುವುದಿಲ್ಲ. ಆ ಕಾರಣಕ್ಕೆ ಸ್ವತಹ ಮತಾಂತರದ ಮೂಲಕ ಬೆಂಬಲಿಗರನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆಯೇ ಹೊರತು ಧಾರ್ಮಿಕ ಹಿನ್ನಲೆಯಿಂದ ಅಲ್ಲ.
ಭಾರತಕ್ಕೆ ದಾಳಿ ಮಾಡಿದ ಬಹುತೇಕ ಮುಸಲ್ಮಾನರು ಭಾರತವನ್ನು ಆರ್ಥಿಕವಾಗಿಯೇ ದೋಚುವ ಪ್ರಯತ್ನ ಮಾಡಿದರೇ ಹೊರತು ಧಾರ್ಮಿಕ ಮತ್ತು ಮತಾಂತರ ಎನ್ನುವುದು ಇದಕ್ಕೆ ಪೂರಕವಾಗಿ ನಡೆದು ಹೋಗಿರುವುದು. ಆದರೆ ಆಧುನಿಕ ಭಾರತದಲ್ಲಿ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದರಿಂದ ಎರಡು ಸಮೂಹಗಳ ನಡುವೆ ವಿಷಮತೆ ಭೀಕರವಾಗಿ ಪರಿಣಮಿಸಿತು.
ಕಾಶ್ಮೀರದಲ್ಲಿ ಹರ್ಷ ಎನ್ನುವ ಹಿಂದೂ ರಾಜನಿದ್ದ. ಅವನ ಭಂಡಾರ ಖಾಲಿಯಾದಾಗ ದೇವಾಲಯಗಳನ್ನು ಲೂಟಿ ಹೊಡೆದು ಸಂಪತ್ತನ್ನು ಸಂಗ್ರಹಿಸಲು ಒಬ್ಬನನ್ನು ನೇಮಕ ಮಾಡುತ್ತಿದ್ದ. ಅವನನ್ನು“ದೇವೊತ್ಪಟ ನಾಯಕ” ಎಂದು ಕರೆಯಲಾಗುತ್ತಿತ್ತು. ಇದನ್ನು ಗಮನಿಸಿದರೆ ಒಂದು ಸತ್ಯ ಗೋಚರಿಸುತ್ತದೆ, ಏನೆಂದರೆ ಒಬ್ಬ ರಾಜನಿಗೆ ಧಾರ್ಮಿಕತೆಗಿಂತ ರಾಜಕೀಯ ಮತ್ತು ಆರ್ಥಿಕ ಅಂಶಗಳೇ ಪ್ರಮುಖವಾಗಿತ್ತು. ಈ ಹಿನ್ನಲೆಯಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಇಂತಹ ಸತ್ಯಗಳ ಬಗ್ಗೆ ಹುಡುಕಬೇಕಾಗಿದೆ.
ಡಾ.ನಾರಾಯಣ ಶೇಡಿಕಜೆ
(ಪ್ರಾಂಶುಪಾಲರು, ಕ್ರೈಸ್ಟ್‌ ಕಿಂಗ್‌ ಕಾಲೇಜು, ಕಾರ್ಕಳ)

Previous articleಪೆರ್ಡೂರಿನಲ್ಲಿ ಲವ್ ಜೆಹಾದ್‌ ? -ಕಾಲೇಜು ವಿದ್ಯಾರ್ಥಿನಿ ನಾಪತ್ತೆ; ಅಪಹರಣ ಆರೋಪ
Next articleಗೋಮಟೇಶ್ವರ ಬೆಟ್ಟ, ಹಿರಿಯಂಗಡಿ ಮಾನಸ್ತಂಭ ಬಸದಿಗೆ ಬೇಕಿದೆ ಭದ್ರತೆ

LEAVE A REPLY

Please enter your comment!
Please enter your name here