ಗೋಮಟೇಶ್ವರ ಬೆಟ್ಟ, ಹಿರಿಯಂಗಡಿ ಮಾನಸ್ತಂಭ ಬಸದಿಗೆ ಬೇಕಿದೆ ಭದ್ರತೆ

0

ರಾಮಚಂದ್ರ ಬರೆಪ್ಪಾಡಿ
ಕಾರ್ಕಳ : ಸುಳ್ಯದ ಪವಿತ್ರ ದೇವರಗುಂಡಿಯಲ್ಲಿ ಬೆಂಗಳೂರಿನ ಮೋಡೆಲ್‌ಗಳು ಬಂದು ತುಂಡುಡುಗೆಯಲ್ಲಿ ಫೋಟೊಶೂಟ್‌ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಜನರು ಅತೀವ ಭಕ್ತಿಯಿಟ್ಟಿರುವ ಸ್ಥಳಗಳಲ್ಲಿ ಎಲ್ಲಿಂದಲೂ ಬಂದವರು ಅಲ್ಲಿನ ಪಾವಿತ್ರ್ಯ, ಧಾರ್ಮಿಕ ಮಹತ್ವ ಇತ್ಯಾದಿಗಳನ್ನು ತಿಳಿಯದೆ ಕಪಿಚೇಷ್ಟೆ ಮಾಡುವುದು, ಅಸಹ್ಯವಾಗಿ ಫೋಟೊಗಳನ್ನು ತೆಗೆದುಕೊಳ್ಳುವುದನ್ನು ನಾವು ಆಗಾಗ ಕಾಣುತ್ತೇವೆ. ಇದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗುತ್ತದೆ ಎನ್ನುವುದು ಈ ರೀತಿ ಫೋಟೊಶೂಟ್‌ ಮಾಡುವವರಿಗೆ ಗೊತ್ತಿರುವುದಿಲ್ಲ. ಕಾರ್ಕಳ ಮತ್ತು ಸುತ್ತಮುತ್ತ ಇಂಥ ಹಲವು ಪವಿತ್ರ ಸ್ಥಳಗಳಿವೆ. ಕೆಲ ದಿನಗಳ ಹಿಂದೆ ಕಾರ್ಕಳದ ಒಂದು ಜಿನಬಿಂಬದ ಮೇಲೇರಿ ಫೊಟೊ ತೆಗೆಸಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದ್ದು ಬಹಳ ವಿವಾದವಾಗಿತ್ತು. ಇಂಥ ಪವಿತ್ರ ಸ್ಥಳಗಳಲ್ಲಿ ಈ ರೀತಿಯ ಅಪಸವ್ಯವಾಗದಂತೆ ನೋಡಿಕೊಳ್ಳುವುದು ಸಂಬಂಧಪಟ್ಟವರ ಜವಾಬ್ದಾರಿ. ಕಾರ್ಕಳದ ಶ್ರೀ ಬಾಹುಬಲಿ ವಿಗ್ರಹ ಸೇರಿದಂತೆ ಕಾರ್ಕಳದ ಧಾರ್ಮಿಕ, ಐತಿಹಾಸಿಕ ತಾಣಗಳಿಗೆ ಸೂಕ್ತ ಭದ್ರತೆ ಒದಗಿಸುವ ಅವಶ್ಯಕತೆಯಿದೆ. 1432ರ ಸಂದರ್ಭ ಅರಸ ವೀರಪಾಂಡ್ಯನ ಕಾಲದಲ್ಲಿ ಕೆತ್ತಲಾದ ಭಗವಾನ್ ಶ್ರೀ ಬಾಹುಬಲಿ ಮೂರ್ತಿ (42 ಅಡಿ ಎತ್ತರದ ಏಕಶಿಲಾ ಗೋಮಟೇಶ್ವರ) ವಿಗ್ರಹ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಬಂಡೆ ಕಲ್ಲಿನಿಂದ ಆವೃತ್ತವಾಗಿರುವ ಈ ಪರಿಸರ ಪ್ರವಾಸಿಗರ ನೆಚ್ಚಿನ ತಾಣ. ಧಾರ್ಮಿಕ ಕೇಂದ್ರವಾಗಿರುವ ಈ ನೆಲ ಪ್ರೇಮಿಗಳ ಅಚ್ಚುಮೆಚ್ಚಿನ ತಾಣವೂ ಹೌದು.

ಮಾನಸ್ತಂಭ

ಜೈನ ಧರ್ಮೀಯರ ಪವಿತ್ರ ಕೇತ್ರಗಳಲ್ಲಿ ಒಂದಾಗಿರುವ ಹಿರಿಯಂಗಡಿ ಬಸದಿಯ ಮಾನಸ್ತಂಭ ಲೋಕಪ್ರಸಿದ್ಧ. ಅತಿ ಎತ್ತರದ (56 ಅಡಿ) ಏಕಶಿಲಾ ಮಾನಸ್ತಂಭ ಹೊಂದಿರುವ ಹಿರಿಮೆ ಹಿರಿಯಂಗಡಿ ಬಸದಿಯದ್ದು. 2.5 ಅಡಿ ಎತ್ತರದ 24 ತೀರ್ಥಂಕರರ ಪ್ರತಿಮೆಗಳನ್ನು ಹೊಂದಿರುವ ಹಲ್ಲರ ಬಸದಿ, ಎಡಬಸದಿ, ಬಲಬಸದಿ, ಗುರುಬಸದಿ, ಅನಂತನಾಥ ಬಸದಿ, ಚಾರಿತ್ರಿಕ ಖ್ಯಾತಿಯ ಇತರ ಬಸದಿಗಳಿದ್ದು, ಈ ಬಸದಿಗಳು ಪ್ರವಾಸಿಗರ ನೆಚ್ಚಿನ ತಾಣ. ಕಾರ್ಕಳದಲ್ಲಿನ ಅಪೂರ್ವ ಸ್ಮಾರಕಗಳ ರಕ್ಷಣೆ ನಿಟ್ಟಿನಲ್ಲಿ ಸಿಸಿಟಿವಿ ಅಳವಡಿಸುವ ಕಾರ್ಯವಾಗಬೇಕು. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ನೇಮಕವಾಗಬೇಕು. ವಿದ್ಯುತ್ ದೀಪ ಉರಿಯುವಂತಾಗಬೇಕು. ಇದರಿಂದ ಸ್ಮಾರಕಗಳ ರಕ್ಷಣೆಯೊಂದಿಗೆ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕಾರ್ಯವೂ ಆಗಬೇಕು.

ಪುರಾತತ್ವ ಇಲಾಖೆ
ಭವ್ಯ ಪರಂಪರೆಯನ್ನು ಸಂರಕ್ಷಿಸಿ ಸುರಕ್ಷಿತವಾಗಿಟ್ಟುಕೊಳ್ಳುವ ಜಬಾಬ್ದಾರಿ ಹೊತ್ತಿರುವ ಪುರಾತತ್ವ ಇಲಾಖೆ ಕಚೇರಿ ಕಾರ್ಕಳ ನಗರದಲ್ಲಿಯೇ ಇದೆ. ಕಿರಿಯ ಸಹಾಯಕ ಸಂರಕ್ಷಕರು ಸೇರಿದಂತೆ ಸ್ಮಾರಕ ರಕ್ಷಕರು ಇಲ್ಲಿದ್ದಾರೆ. ಗೊಮಟೇಶ್ವರ, ಮಾನಸ್ತಂಭ ಮಾತ್ರವಲ್ಲದೇ ಅನಂತಶಯನ, ಅನಂತಪದ್ಮನಾಭ ದೇಗುಲ, ಚತುರ್ಮುಖ ಬಸದಿ ರಕ್ಷಣೆ, ನಿರ್ವಹಣೆ ಹೊಣೆ ಹೊತ್ತಿದ್ದಾರೆ.

ನಿಯಮ
ರಾಷ್ಟ್ರೀಯ ಸ್ಮಾರಕ ಮತ್ತು ಅದರ ಸುತ್ತಲಿನ ಸಂರಕ್ಷಿತ ಪ್ರದೇಶದ ಪರಿಮಿತಿಯಿಂದ ಎಲ್ಲಾ ದಿಕ್ಕುಗಳಲ್ಲಿ 100 ಮೀ. ವರೆಗಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು, ಅದರಿಂದಾಚೆಗಿನ ಎಲ್ಲ ದಿಕ್ಕುಗಳಲ್ಲಿ 200 ಮೀ. ವರೆಗಿನ ಪ್ರದೇಶವನ್ನು ನಿಯಂತ್ರಿತ ಪ್ರದೇಶವೆಂದು ನಿಗದಿಪಡಿಸಲಾಗಿದ್ದು, ಈ ಪ್ರದೇಶಗಳಲ್ಲಿ ಸಾರ್ವಜನಿಕ ಯೋಜನೆಯ ಕಾಮಗಾರಿಯನ್ನು ಒಳಗೊಂಡಂತೆ ಯಾವುದೇ ನಿರ್ಮಾಣಕ್ಕೆ ಪುರಾತತ್ವ ಇಲಾಖೆ ಅನುಮತಿ ನೀಡುತ್ತಿಲ್ಲ. ಇದರೊಂದಿಗೆ ಮತ್ತಷ್ಟು ರಕ್ಷಣಾ ಕಾರ್ಯಗಳು ನಡೆಯಬೇಕೆಂಬುದು ಸಾರ್ವಜನಿಕರ ಅಭಿಪ್ರಾಯ.

ಕಾರ್ಕಳ

ಕಾರ್ಕಳದಲ್ಲಿನ ಪ್ರವಾಸಿ ತಾಣಗಳು ಧಾರ್ಮಿಕ ಕೇಂದ್ರಗಳಾಗಿರುವುದರಿಂದ ಇಲ್ಲಿ ನಡೆಯುವ ಅನಗತ್ಯ ಫೋಟೋ ಶೂಟ್‌ ಭಕ್ತರ ಭಾವನೆಯನ್ನು ಕೆರಳಿಸುತ್ತಿದೆ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಮತ್ತು ಆಕ್ರೋಶಕ್ಕೂ ಕಾರಣವಾಗಿದೆ.

Previous articleಇದೇನಾ ಇತಿಹಾಸ…! -ಭಾರತಕ್ಕೆ ಮುಸ್ಲಿಂ ದಾಳಿ ಮತಾಂತರ ಪ್ರೇರಿತವೆ?
Next articleನ. 1 : ವ್ಯಸನ ಮುಕ್ತ ಸಮಾಜದ ಕಡೆಗೆ ಯುವಕರ ನಡಿಗೆ

LEAVE A REPLY

Please enter your comment!
Please enter your name here