ಭಾರತದ ಏಕತೆಯ ರೂವಾರಿ ಸರ್ದಾರ್‌ ಪಟೇಲ್‌

0

ಅಕ್ಟೋಬರ್‌ 31ನ್ನು ರಾಷ್ಟ್ರೀಯ ಏಕತಾ ದಿನವೆಂದು ಆಚರಿಸಲಾಗುತ್ತಿದೆ. ಅದು ಸ್ವಾತಂತ್ರ್ಯಾನಂತರ ದೇಶವನ್ನು ಒಗ್ಗೂಡಿಸಿದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಹುಟ್ಟಿದ ದಿನ. ಈ ನಿಮಿತ್ತ ಒಂದು ಪುಟ್ಟ ಲೇಖನ

‌ದೇಶದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಭಾರತದ ಏಕತೆಗಾಗಿ ಶ್ರಮಿಸಿದರು. ಸ್ವಾತಂತ್ರ್ಯ ಸಿಕ್ಕಿದ ಮೇಲೂ ಕೆಲವೊಂದು ಭೂ ಪ್ರದೇಶಗಳು ರಾಜರ ಮತ್ತು ವಿದೇಶಿಗರ ವಶದಲ್ಲಿದ್ದವು.ಇದನ್ನು ವಶಪಡಿಸಿಕೊಂಡು ಭವ್ಯ ಭಾರತ ನಿರ್ಮಾಣಕ್ಕೆ ಕಾರಣರಾದವರು ಪಟೇಲ್ ಅವರು.
ಪಟೇಲರು 1875, ಅ. 31ರಂದು ಗುಜರಾತ್ ನ ನಾಡಿಯಾಡ್ ನಲ್ಲಿ ಜನಿಸಿದರು. ಈ ರಾಷ್ಟ್ರೀಯವಾದಿಯ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.ದೇಶಕ್ಕಾಗಿ ಅವರು ನೀಡಿರುವ ಅದ್ಭುತ ಸೇವೆಗಾಗಿ ಅವರನ್ನು ಗೌರವಿಸಲಾಗುತ್ತಿದೆ.2014 ರಲ್ಲಿ ಪ್ರ ಧಾನಿ ನರೇಂದ್ರ ಮೋದಿಯವರು ಪಟೇಲ್ ಅವರ ಗೌರವ ಸೂಚಕವಾಗಿ ರಾಷ್ಟ್ರೀಯ ಏಕತಾ ದಿನವನ್ನು ಘೋಷಿಸಿದರು.
ಇವರು ಪ್ರಗತಿಪರ ಭಾರತದ ನಿರ್ಮಾಣಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ 31 ಅಕ್ಟೋಬರ್ 2018ರಂದು ಗುಜರಾತಿನ ನರ್ಮದಾ ಜಿಲ್ಲೆಯಲ್ಲಿ ಪಟೇಲರ ಪ್ರತಿಮೆಯನ್ನು ನಿರ್ಮಾಣ ಮಾಡಿದರು.ಅದು ಈಗ “ಏಕತಾ ಪ್ರತಿಮೆ”ಯಾಗಿ ಶೋಭಿಸುತ್ತಿದೆ.ಇದರ ಎತ್ತರ 182 ಮೀಟರ್.ವಿಶ್ವದ ಅತೀ ಎತ್ತರದ ಪ್ರತಿಮೆಯ ದಾಖಲೆಯನ್ನು ಹೊಂದಿದೆ. ವಿಶ್ವದ 8ನೇ ಅದ್ಭುತವಾಗಿರುವ ಅತ್ಯಂತ ಸುಂದರವಾಗಿರುವ ಪ್ರತಿಮೆ ಇದಾಗಿದೆ.
ಭಾರತದ ಪ್ರಮುಖ ರಾಜಕೀಯ ವ್ಯಕ್ತಿ ಗಳಲ್ಲೊಬ್ಬರಾದ ಇವರು ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಮಾತ್ರವಲ್ಲದೆ ,ಭಾರತದ ಗಣರಾಜ್ಯದ ಸ್ಥಾಪನೆ ಮತ್ತು ಸ್ವತಂತ್ರ ರಾಷ್ಟ್ರದೊಳಗಿನ ಏಕೀಕರಣದಲ್ಲಿ ಬಹು ಮುಖ್ಯ ಪಾತ್ರ ನಿರ್ವಹಿಸಿದರು.ಭಾರತ ಮತ್ತು ಇತರ ಕಡೆಗಳಲ್ಲಿ ಅವರನ್ನು ಸರ್ದಾರ್ ಎಂದು ಕರೆಯಲಾಗುತ್ತಿತ್ತು. ಇದರ ಅರ್ಥ ಹಿಂದಿ, ಉರ್ದು ಮತ್ತು ಪರ್ಷಿಯನ್ ಭಾಷೆಗಳಲ್ಲಿ ಮುಖ್ಯವಾದ ವ್ಯಕ್ತಿ ಎಂದು.
1947ರ ಇಂಡೋ-ಪಾಕಿಸ್ಥಾನ ಯುದ್ಧದ ಅವಧಿಯಲ್ಲಿ ಅವರು ಭಾರತೀಯ ಸೇನೆಯ ಕಮಾಂಡರ್ ಇನ್ ಚೀಫ್ ಆಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರು.ಇವರು ದೇಶಕ್ಕಾಗಿ ಕೈಗೊಂಡ ಕಟು ನಿರ್ಧಾರಗಳಿಂದ ಇವರಿಗೆ “ಉಕ್ಕಿನ ಮನುಷ್ಯ” ಅಥವಾ “ಲೋಹ ಪುರುಷ” ಎಂಬ ಬಿರುದು ಪ್ರಜಾಮಾನಸದಲ್ಲಿ ದೊರೆತಿತ್ತು.
ಆಧುನಿಕ ಅಖಿಲ ಭಾರತ ಸೇವೆಗಳ ವ್ಯವಸ್ಥೆ ಯನ್ನು ಸ್ಥಾಪಿಸಿದ್ದಕ್ಕಾಗಿ ಅವರು “ಭಾರತದ ನಾಗರಿಕ ಸೇವಕರ ಪೋಷಕ ಸಂತ” ಎಂದು ನೆನಪಿಸಿಕೊಳ್ಳುತ್ತಾರೆ.
ಭಾರತದ ವಿಭಜನೆಯ ನಂತರ ಗೃಹ ಖಾತೆಯನ್ನು ವಹಿಸಿಕೊಂಡು ತನ್ನ 72ನೇ ವಯಸ್ಸಿನಲ್ಲಿ 565 ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ,ಅಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವ,ದೇಶದ ರಕ್ಷಣೆಯ ವ್ಯವಸ್ಥೆಯನ್ನು ರೂಪಿಸುವ ಹಾಗೂ ಭಾರತವನ್ನು ಒಗ್ಗಟ್ಟಾದ ದೇಶವನ್ನಾಗಿ ಕಟ್ಟುವ ಮಹತ್ತರವಾದ ಜವಾಬ್ದಾರಿಯನ್ನು ಪಟೇಲರು ಹೊತ್ತುಕೊಂಡರು.ಅಷ್ಟೇ ಅಲ್ಲ ಅಧಿಕಾರದ ವಿಕೇಂದ್ರೀಕರಣ,ಧಾರ್ಮಿಕ ಸಮಾನತೆ,ಮತ್ತು ಸ್ವಾತಂತ್ರ್ಯ, ಆಸ್ತಿ ಹಕ್ಕು ಇತ್ಯಾದಿ ವಿಷಯಗಳನ್ನು ವಿಷದೀಕರಿಸಿ ಭಾರತದ ಸಂವಿಧಾನ ರಚನೆಯಲ್ಲಿ ಮಹತ್ವದ ಕೊಡುಗೆ ನೀಡಿದರು.
ರಾಜ-ಮಹಾರಾಜ-ಸಾಮಂತರುಗಳಿಂದ ತುಂಬಿದ್ದ ಬ್ರಿಟಿಷ್ ಇಂಡಿಯಾವನ್ನು ಇಂಡಿಯಾವನ್ನಾಗಿಸಲು “ಸಾಮ,ಭೇದ, ದಾನ,ದಂಡ“ ಇವುಗಳನ್ನು ಸಂದರ್ಭಕ್ಕೆ ಸರಿಯಾಗಿ ಬಳಸಿದ ಹಿರಿಮೆ ಪಟೇಲರದ್ದು.
ಜೂನಾಗಢ,ಜಮ್ಮು-ಕಾಶ್ಮ್ಮೀರ,ಹೈದರಾಬಾದ್ ಈ ಮೂರು ರಾಜ್ಯಗಳ ರಾಜರು ಮಾತ್ರ ಪಟೇಲರ ಚಾಕಚಕ್ಯತೆ ಮತ್ತು ಭಾರತದ ಒಗ್ಗಟ್ಟಿಗೆ ಸವಾಲು ಹಾಕಿದಾಗ,ಸೈನ್ಯವನ್ನು ಕಳುಹಿಸಿ ರಾಜ್ಯಗಳನ್ನು ಆಕ್ರಮಿಸಿ ,ಆಯಾ ರಾಜ್ಯಗಳು ಮತ್ತು ಪ್ರಜೆಗಳನ್ನು ಭಾರತದ ಭಾಗವಾಗಿಸಿದರು.ಆದುದರಿಂದ ಈ ಮಹಾತ್ಮನನ್ನು “ಭಾರತದ ಏಕೀಕರಣದ ನೇತಾರ” ಎಂದೂ ಕರೆಯಲಾಗುತ್ತದೆ.
ಸ್ವಾತಂತ್ರ್ಯದ ನಂತರ ಉಪ ಪ್ರಧಾನಿ, ಗೃಹ ಸಚಿವ ಇತ್ಯಾದಿ ಖಾತೆಗಳ ಸಚಿವರಾಗಿ ದಕ್ಷ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಜಮ್ಮು ಕಾಶ್ಮೀರದ 370ನೇ ವಿಧಿಯನ್ನು ತೆಗೆದು ಹಾಕುವುದು ಸರ್ದಾರ್ ಅವರ ಕನಸಾಗಿತ್ತು. ಅದನ್ನು ಈಗಿನ ಮೋದಿ ಸರಕಾರ ಈಡೇರಿಸಿದೆ.ಹೀಗೆ 1918ರಲ್ಲಿ ತಮ್ಮ ಚೆನ್ನಾಗಿ ನಡೆಯುತ್ತಿದ್ದ ವಕೀಲಿ ವೃತ್ತಿ, ಅದರ ಘನತೆ, ಗೌರವ, ದೊಡ್ಡ ಮನೆ,ಸಂಪತ್ತು ಎಲ್ಲವನ್ನೂತ್ಯಜಿಸಿ ಸ್ವಾತಂತ್ರ್ಯ ಹೋರಾಟದ ಸರಳ ಜೀವನ,ಕಷ್ಟ ಕಾರ್ಪಣ್ಯಗಳಿಗೆ ತಮ್ಮನ್ನು ತಾವೇ ಅರ್ಪಿಸಿಕೊಂಡರು. ಭಾರತದ ನಿರ್ಮಾಣಕ್ಕೆ ಒಗ್ಗಟ್ಟಿನಿಂದ ಬದುಕುವಂತೆ ಅವರು ಜನರಿಗೆ ಕರೆ ನೀಡಿದ್ದರು. ಕರ್ತವ್ಯ ನಿಷ್ಠೆ ,ಅಚಲ ಸಂಯಮ ಸ್ವಭಾವದ ಅಪರೂಪದ ವ್ಯಕ್ತಿತ್ವ ಪಟೇಲ್ ರದ್ದು.
ಕೊನೆಯದಾಗಿ ಅತ್ಯಂತ ಸರಳ ಸಜ್ಜನಿಕೆಯ ನೇರ ನುಡಿಯ ನಿಷ್ಕಲ್ಮಶ ಭಾವದ ,ಅಪ್ಪಟ ರಾಷ್ಟ್ರಪ್ರೇಮಿ, ಭಾರತ ರತ್ನದ ಆದರ್ಶಗಳು ನಮಗೆಲ್ಲಾ ವಿಶೇಷವಾಗಿ ದೇಶವನ್ನೇ ಕಬಳಿಸುತ್ತಿರುವ ಇಂದಿನ ರಾಜಕಾರಣಿಗಳಿಗೆ ದಾರಿದೀಪವಾಗಲಿ ಎಂಬ ಶುಭ ಭಾವದೊಂದಿಗೆ…

ಮಾಲತಿ ವಸಂತರಾಜ್

Previous articleಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ : ಕಾರ್ಕಳಕ್ಕೆ ಸಿಂಹಪಾಲು
Next articleಉಪ ಚುನಾವಣೆ ಬಳಿಕ ಸಂಪುಟ ವಿಸ್ತರಣೆ : ಮುಹೂರ್ತ ಫಿಕ್ಸ್‌ ಮಾಡಿದ ಯಡಿಯೂರಪ್ಪ

LEAVE A REPLY

Please enter your comment!
Please enter your name here