ಆರೋಗ್ಯ ಧಾರಾ – ದೇಹ ಪ್ರಕೃತಿ

0

(ಭಾಗ 4)
ವಾತ ಪ್ರಕೃತಿಯ ವ್ಯಕ್ತಿಗಳ ಸಮಸ್ಯೆಗಳು ಹಾಗೂ ಪರಿಹಾರಗಳು
ವಾತ ಪ್ರಕೃತಿಯ ಮನುಷ್ಯನಿಗೆ ವಾತಜನ್ಯ ರೋಗಗಳು ಕಾಡುವುದು ಅಧಿಕ .ಆದ್ದರಿಂದ ವಾತ ಶಮನಕಾರಕ ಆಹಾರ ವಿಹಾರವನ್ನು ಪಾಲಿಸಬೇಕು .
ವಾತದ ಗುಣಗಳು ರೂಕ್ಷ ,ಲಘು, ಶೀತ ,ಸೂಕ್ಷ್ಮ ಚಂಚಲ ,ಸರ . ವಾತದ ರೂಕ್ಷ ಗುಣದಿಂದ ತ್ವಚೆ, ಕೂದಲು ಹಾಗೂ ಉಗುರುಗಳು ಶುಷ್ಕವಿರುವುದು . ಹಲ್ಲಿನ ಸಮಸ್ಯೆ, ಸಂದುನೋವು ಕೂಡ ಕಾಣಬಹುದು . ರೂಕ್ಷತ್ವವನ್ನು ಕಡಿಮೆಗೊಳಿಸಲು ಎಣ್ಣೆಯ ಉಪಯೋಗ ಉತ್ತಮ . ಇಡೀ ದೇಹಕ್ಕೆ ಎಳ್ಳೆಣ್ಣೆಯಿಂದ ಅಭ್ಯಂಗ ಮುಖ್ಯವಾಗಿ ತಲೆಗೆ , ಪಾದ ತಳಕ್ಕೆ ಹಾಗು ಕಿವಿಯ ಹಿಂಭಾಗದಲ್ಲಿ ಅಭ್ಯಂಗ ಮಾಡುವುದರಿಂದ ವಾತ ಶಮನವಾಗುವುದು . ಮುಂಜಾನೆ ಎದ್ದ ತಕ್ಷಣ ಮೂಗಿಗೆ ಎರಡೆರಡು ಹನಿ ಎಳ್ಳೆಣ್ಣೆ ಹಾಕುವುದು ಹಾಗೂ ನಾಭಿಯ ಸುತ್ತಲು ಸವರುವುದು ಹಿತಕರ.
ವಾತವು ಲಘು ಇರುವ ಕಾರಣ ವಾತ ಪ್ರಕೃತಿಯವರು ಕಡಿಮೆ ತೂಕವುಳ್ಳವರು,ದುರ್ಬಲ ದೇಹ ,ದುರ್ಬಲ ಮೂಳೆಗಳನ್ನು ಹೊಂದಿರುತ್ತಾರೆ. ಮನಸ್ಸಿನ ಚಂಚಲತೆ ಕೂಡ ಕಾಣಬಹುದು. ಆದ್ದರಿಂದ ನಾವು ಗುರು ಆಹಾರವನ್ನು ಸೇವಿಸ ಬೇಕು ಅಂದರೆ ತಡವಾಗಿ ಪಚನವಾಗುವಂತಹ ಆಹಾರವನ್ನು ಸೇವಿಸಿದರೆ ಉತ್ತಮ .ಉದ್ದಿನ ಬೇಳೆಯಿಂದ ತಯಾರಿಸಿದ ಆಹಾರ ವಾರಕ್ಕೆ 3 ಬಾರಿ ಉಪಯೋಗಿಸ ಬೇಕು . ಸಿಹಿ ತಿನಿಸುಗಳನ್ನು ಬೆಲ್ಲದಿಂದ ತಯಾರಿಸಿದಂತಹ ಸಿಹಿ ತಿನಿಸುಗಳನ್ನು ಉಪಯೋಗಿಸಬೇಕು .
ವಾತದ ಶೀತಗುಣದಿಂದ ವಾತ ಪ್ರಕೃತಿಯ ಮನುಷ್ಯನಿಗೆ ಚಳಿಯ ಅನುಭವ ಅಧಿಕ ಹಾಗೂ ದೇಹ ಬೇನೆ , ಸಂದು ನೋವು ಕಾಣಿಸಿಕೊಳ್ಳುವುದು ಸಾಮಾನ್ಯ . ಆದ್ದರಿಂದ ಶೀತಗುಣದ ವಿಪರೀತವಾದ ಆಹಾರವನ್ನು ನಾವು ಸೇವಿಸಬೇಕು, ಅಂದರೆ ಬಿಸಿ ಆಹಾರ ಪಾನೀಯಗಳನ್ನು ಸೇವನೆ, ಗರಂ ಮಸಾಲ ಹಾಕಿರುವಂತಹ ಆಹಾರ ತುಪ್ಪದ ಜೊತೆ ಅಥವಾ ಎಣ್ಣೆಯ ಜೊತೆ ಸೇವಿಸುವುದು ಇವರಿಗೆ ಆರೋಗ್ಯದಾಯಕ . ಶೀತಲ ಪ್ರದೇಶದಲ್ಲಿ ವಾಸಿಸುವವರಿಗೆ ಬೆಚ್ಚಗಿನ ಉಡುಪು ಅಗತ್ಯವಾಗಿ ಧರಿಸಬೇಕು. ಕಿವಿಯೊಳಗೆ ಅಧಿಕ ಗಾಳಿ ಪ್ರವೇಶಿಸದಂತೆ ಜಾಗೃತರಾಗಿರಬೇಕು. ಫ್ಯಾನಿನ ಕೆಳಗೆ ಕೂತು ಕೊಳ್ಳುವುದು. ವಾಹನಗಳಲ್ಲಿ ಪ್ರಯಾಣ ಮಾಡುವಾಗ ಕಿವಿಗಳನ್ನು ಗಾಳಿ ಪ್ರವೇಶಿಸದಂತೆ ಮುನ್ನೆಚ್ಚರಿಕೆ ವಹಿಸಿ. ಮುಂಜಾನೆಯ ಸೂರ್ಯನ ಕಿರಣಗಳು ವಾತದ ಮನುಷ್ಯನಿಗೆ ಬಹಳ ಒಳ್ಳೆಯದು . ಶತಾವರಿ ,ಅಶ್ವಗಂಧ ,ಬಲಾರಿಷ್ಟ, ದ್ರಾಕ್ಷಾಸವ ,ದಶಮೂಲಾರಿಷ್ಟ ಸೇವಿಸುವುದು ಹಿತಕರ. ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ಸೇವಿಸಿರಿ.
ವಾತ ಪ್ರಕೃತಿಯ ಮನುಷ್ಯರ ಮನಸ್ಸು ಬಹಳ ಚಂಚಲವಾದ್ದರಿಂದ ಧ್ಯಾನ ,ಪ್ರಾಣಾಯಾಮ ,ಶವಾಸನ ಮಾಡುವುದು ಉತ್ತಮ.ಆಹಾರದಲ್ಲಿ ಮಧುರ ರಸ ,ಲವಣರಸ, ಕಟು ರಸ ಸೇವಿಸುವುದು ಉತ್ತಮ. ಮಳೆಗಾಲದಲ್ಲಿ ಪಂಚಕರ್ಮದಲ್ಲಿ ಒಂದಾದ ಬಸ್ತಿ ಕರ್ಮ ಮಾಡುವುದು ಒಳ್ಳೆಯದು . ಇದನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮಾಡತಕ್ಕದ್ದು .ಆಹಾರದಲ್ಲಿ ಎಣ್ಣೆಯ ಸೇವನೆ ವಾತ ಪ್ರಕೃತಿಯ ಮನುಷ್ಯರಿಗೆ ಹಿತಕರ .ವಾತ ಪ್ರಕೃತಿಯ ವ್ಯಕ್ತಿಗಳು ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಸರಿಯಾದ ನಿಯಮಗಳನ್ನು ಪಾಲಿಸಿ ಆರೋಗ್ಯದಿಂದಿರಿ.
ಡಾ. ಹರ್ಷಾ ಕಾಮತ್
ಖ್ಯಾತ ಆಯುರ್ವೇದ ತಜ್ಞರು

Previous articleಅ.31 ರಂದು ನಿಟ್ಟೆ ತಾಂತ್ರಿಕ ಮಹಾ ವಿದ್ಯಾಲಯದ ಪದವಿ ಪ್ರದಾನ
Next articleದೇವರಗುಂಡಿ ಜಲಪಾತದಲ್ಲಿ ಅಸಭ್ಯ ಫೋಟೊಶೂಟ್‌ : ಸಾರ್ವಜನಿಕರ ಆಕ್ರೋಶ

LEAVE A REPLY

Please enter your comment!
Please enter your name here