ಕಾರ್ಕಳ : ಕಾರ್ಕಳ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯನ್ನು ವಿಜೇತ ಅಭ್ಯರ್ಥಿಯ ಜಾತಿ ಪ್ರಮಾಣ ಪತ್ರದ ಸಮಸ್ಯೆ ಇತ್ಯರ್ಥವಾಗುವ ಮುಂಚೆ ನಡೆಸಿರುವುದು ಸಂವಿಧಾನದತ್ತ ಮೀಸಲಾತಿ ಹಕ್ಕಿನ ಉಲ್ಲಂಘನೆಯೆಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ನಕ್ರೆ ಬಿಪಿನ್ ಚಂದ್ರ ಪಾಲ್ ಆಪಾದಿಸಿದ್ದಾರೆ. ವಿಜೇತ ಅಭ್ಯರ್ಥಿಯೋರ್ವರ ಜಾತಿ ಪ್ರಮಾಣ ಪತ್ರದ ಸಮಸ್ಯೆ ಇತ್ಯರ್ಥವಾಗುವವರೆಗೆ ಪುರಸಭಾ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮುಂದೂಡಬೇಕೆಂದು ಪುರಸಭೆಯ 12 ಮಂದಿ ಸದಸ್ಯರೂ ಮನವಿ ಮಾಡಿಕೊಂಡ ಹೊರತಾಗಿಯೂ ಉಡುಪಿ ಜಿಲ್ಲಾಧಿಕಾರಿಯವರು ಅ. 27ರಂದು ಚುನಾವಣೆ ನಡೆಸಿರುತ್ತಾರೆ. ಇದು ಸ್ಥಳೀಯ ಸಂಸ್ಥೆಗಳ ಆಡಳಿತ ವ್ಯವಸ್ಥೆಗಳಡಿಯಲ್ಲಿ ಪರಿಶಿಷ್ಟ ಜಾತಿಗಳಿಗಿರುವ ಸಂವಿಧಾನದತ್ತ ಮೀಸಲಾತಿಯ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನಕ್ರೆ ಬಿಪಿನಚಂದ್ರ ಪಾಲ್ ಆಪಾದಿಸಿದ್ದಾರೆ.
2018ರ ಕಾರ್ಕಳ ಪುರಸಭೆಗೆ ನಡೆದ ಚುನಾವಣೆಯಲ್ಲಿ ವಾರ್ಡ್ ನಂ. 13 ರಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯಡಿಯಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಪ್ರದೀಪ್ ಎನ್ನುವವರು ಸ್ಪರ್ಧಿಸಿ ಗೆದ್ದಿದ್ದರು. ಈ ಕುರಿತು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮಹೇಶ್ ಪ್ರಭು ಎಂಬವರು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ–ಮಂಗಳೂರು ಇವರಿಗೆ ನೀಡಿದ ದೂರಿನನ್ವಯ 10-7-2019 ರಂದು ಉಡುಪಿ ಜಿಲ್ಲಾಧಿಕಾರಿಯವರಿಗೆ ವಿಚಾರಣೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿತ್ತು.
ಆದರೆ, ಉಡುಪಿ ಜಿಲ್ಲಾಧಿಕಾರಿಯವರು ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಪರಾಜಿತ ಅಭ್ಯರ್ಥಿ ಮಹೇಶ ಪ್ರಭುರವರು ಉಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಲಯವು ವಿಚಾರಣೆ ನಡೆಸಿ, 4 ತಿಂಗಳೊಳಗೆ ಪ್ರದೀಪ್ರವರ ಜಾತಿ ಪ್ರಮಾಣಪತ್ರದ ಬಗ್ಗೆ ಜಾತಿ ಪರಿಶೀಲನಾ ಸಮಿತಿಯಡಿಯಲ್ಲಿ ವಿಚಾರಣೆ ನಡೆಸಿ ಇತ್ಯರ್ಥಗೊಳಿಸಬೇಕೆಂದು 7-9-2020 ರಂದು ಆದೇಶ ಹೊರಡಿಸಿತ್ತು.
ಇಷ್ಟೆಲ್ಲ ಬೆಳವಣಿಗೆಯಾದರೂ ಜಿಲ್ಲಾಧಿಕಾರಿಯವರು ಕೋರ್ಟ್ ಆದೇಶದ ಕುರಿತು ಮೌನವಹಿಸಿ, ಜಾತಿ ಪ್ರಮಾಣಪತ್ರದ ಬಗ್ಗೆ ಕ್ರಮಕೈಗೊಳ್ಳುವ ಮೊದಲೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಗೆ ಅವಕಾಶ ಮಾಡಿಕೊಟ್ಟಿರುವುದು ವಿಷಾದನೀಯ. ಈ ಬಗ್ಗೆ ಪರಾಜಿತ ಅಭ್ಯರ್ಥಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಮತ್ತೆ ಕೋರ್ಟ್ ಮೆಟ್ಟಿಲೇರುವುದು ಅನಿವಾರ್ಯವೆಂದು ಬಿಪಿನ್ ಚಂದ್ರ ಪಾಲ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
