
ನ್ಯೂಸ್ ಕಾರ್ಕಳ ವಿಶೇಷ ವರದಿ
ಕಾರ್ಕಳ : ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಅಂಚೆ ಕಚೇರಿಗಳಿಗೆ ದ.ಕ. ಜಿಲ್ಲೆಯ ಪುತ್ತೂರಿನಲ್ಲಿರುವ ಅಂಚೆ ಕಚೇರಿಯೇ ಡಿವಿಜನಲ್ (ವಿಭಾಗೀಯ) ಕೇಂದ್ರ.
ಹೌದು. ದ.ಕ.ದಿಂದ ಉಡುಪಿ ಜಿಲ್ಲೆಯನ್ನು ಪ್ರತ್ಯೇಕಿಸಿ 23 ವರ್ಷ ಕಳೆದರೂ ಕಾರ್ಕಳ ಅಂಚೆ ಕಚೇರಿಗಳು ಮಾತ್ರ ಇನ್ನೂ ಪುತ್ತೂರು ವಿಭಾಗ ಕೇಂದ್ರವನ್ನೇ ಅವಲಂಬಿಸಿದೆ. 1997ರಲ್ಲಿ ದ.ಕ. ಜಿಲ್ಲೆಯಿಂದ ಉಡುಪಿಯನ್ನು ಬೇರ್ಪಡಿಸಿ, ಉಡುಪಿ ಜಿಲ್ಲೆ ಅನುಷ್ಠಾನಗೊಂಡರೂ ಕಾರ್ಕಳ ಅಂಚೆ ಕಚೇರಿಗಳು ಪುತ್ತೂರಿನಿಂದ ಮಾತ್ರ ಕಳಚಿಕೊಂಡಿಲ್ಲ.
ಇದರಿಂದಾಗಿ ಅಂಚೆ ಇಲಾಖೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ತಲೆದೋರಿದರೂ ಕಾರ್ಕಳ ಭಾಗದ ಜನತೆ ದೂರದ ಪುತ್ತೂರನ್ನೇ ಅವಲಂಬಿಸಬೇಕಾಗಿದೆ. ಪ್ರಮುಖವಾಗಿ ಕಾರ್ಕಳ ಉಪವಿಭಾಗೀಯ ಅಂಚೆ ಕಚೇರಿ ಸಿಬ್ಬಂದಿ ಮತ್ತು ತಾಲೂಕಿನಲ್ಲಿರುವ 54 ಗ್ರಾಮೀಣ ಅಂಚೆ ಕಚೇರಿ ಸಿಬ್ಬಂದಿ ತರಬೇತಿ ಸೇರಿದಂತೆ ಇನ್ನಿತರ ಕಾರ್ಯಗಳಿಗಾಗಿ ಪುತ್ತೂರು ಡಿವಿಜನಲ್ ಕೇಂದ್ರವನ್ನೇ ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆಯಿದೆ.
ಹೆಬ್ರಿ, ಬೈಲೂರು, ಹಿರಿಯಡ್ಕ ಮೊದಲಾದ ಉಡುಪಿಗೆ ಸಮೀಪದಲ್ಲಿರುವ ಅಂಚೆ ಕಚೇರಿಗಳ ಸಿಬ್ಬಂದಿ ಪುತ್ತೂರಿಗೆ ಬರುವುದು ತುಸು ತ್ರಾಸದಾಯಕ. ಆ ಭಾಗದ ಸಿಬ್ಬಂದಿ ಅಥವಾ ಜನತೆ ಪುತ್ತೂರು ಸಂಪರ್ಕಿಸಲು ಸುಮಾರು 120 ಕಿ.ಮೀ. ಕ್ರಮಿಸಬೇಕಾಗಿದೆ. ಅದಲ್ಲದೇ ಮೂರು ಬಸ್ ಹಿಡಿದು ಪ್ರಯಾಣಿಸಬೇಕಾದ ದುಸ್ಥಿತಿಯಿದೆ.
ಜಿಲ್ಲೆ ಬದಲಾದರೂ ಬದಲಾಗದ ಡಿವಿಜನಲ್
ಉಡುಪಿ ವಿಭಾಗೀಯ ಕಚೇರಿ ಹತ್ತಿರದಲ್ಲಿರುವಾಗ ದೂರದ ಪುತ್ತೂರಿನಲ್ಲಿರುವ ವಿಭಾಗೀಯ ಅಂಚೆ ಕಚೇರಿ ಅವಲಂಬನೆ ಯಾಕೆ ? ಎನ್ನುವುದು ಇಲ್ಲಿನ ಪ್ರಜ್ಞಾವಂತ ನಾಗರೀಕರ ಪ್ರಶ್ನೆ. ಅಂಚೆ ಕಚೇರಿಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಸಿಬ್ಬಂದಿ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿರುವುದು ಸಾಮಾನ್ಯ. ಪುತ್ತೂರು ವಿಭಾಗೀಯ ವ್ಯಾಪ್ತಿಯು ಸುಳ್ಯದ ಸಂಪಾಜೆಯಿಂದ ಹೆಬ್ರಿವರೆಗೆ ಹರಡಿಕೊಂಡಿರುವುದರಿಂದ ವರ್ಗಾವಣೆ ಸಂದರ್ಭ ಎಲ್ಲಿ ದೂರದೂರಿಗೆ ವರ್ಗಾವಣೆಯಾಗುವುದೋ ಎಂಬ ಆತಂಕ ನೌಕರರದ್ದು. ಇದೀಗ ಪುತ್ತೂರು ಡಿವಿಜನಲ್ನಿಂದ ಕಾರ್ಕಳವನ್ನು ಬೇರ್ಪಡಿಸಿ, ಉಡುಪಿಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂಬ ವಿಚಾರ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಎಸ್ಎಸ್ಪಿ ಹುದ್ದೆ ತಪ್ಪುವ ಭೀತಿ
ಪುತ್ತೂರು ವಿಭಾಗೀಯ ಕೇಂದ್ರವು ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಕಾರ್ಕಳ ತಾಲೂಕುಗಳನ್ನು ಹೊಂದಿರುವ ಕಾರಣ ಎಸ್ಎಸ್ಪಿ (ಸೀನಿಯರ್ ಸೂಪರಿಂಟೆಂಡೆಂಟ್ ಪೋಸ್ಟ್ ಆಫೀಸ್) ದರ್ಜೆ ಹುದ್ದೆ ಹೊಂದಿದೆ. ಕಾರ್ಕಳ ಕಳಚಿಕೊಂಡಲ್ಲಿ ಎಸ್ಪಿ ಹುದ್ದೆ ಮಾತ್ರ ಅಲ್ಲಿ ಉಳಿದುಕೊಳ್ಳಲಿದೆ. ಕಾರ್ಕಳ ಬೇರ್ಪಡಿಸುವಲ್ಲಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಕಾರ್ಕಳ ಉಡುಪಿ ವಿಭಾಗೀಯಕ್ಕೆ ಸೇರ್ಪಡೆಯಾದಲ್ಲಿ ಉಡುಪಿಯ ಎಸ್ಪಿ ಹುದ್ದೆ ಎಸ್ಎಸ್ಪಿ ಆಗಿ ಭಡ್ತಿಗೊಳ್ಳಲಿದೆ ಎನ್ನಲಾಗುತ್ತಿದೆ.
ಪ್ರಧಾನಿಗೂ ಪತ್ರ
ಕಾರ್ಕಳ ಅಂಚೆ ಕಚೇರಿಯನ್ನು ಪುತ್ತೂರು ಡಿವಿಜನಲ್ನಿಂದ ಬೇರ್ಪಡಿಸಿ ಉಡುಪಿಗೆ ಸೇರಿಸಬೇಕೆಂದು ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕೊನೆಗೆ ಪ್ರಧಾನಿ ಕಾರ್ಯಾಲಯಕ್ಕೂ ಈ ಸಂಬಂಧ ಪತ್ರ ಬರೆಯಲಾಗಿದೆ. ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ತಿಳಿಸಿದೆ. ಆದರೆ, ನಾಲ್ಕು ವರುಷ ಸಂದರೂ ಉದ್ದೇಶ ಕಾರ್ಯಗತಗೊಂಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರೋರ್ವರು ತಿಳಿಸಿದರು.
ಪ್ರಸ್ತಾವನೆ ಕಳುಹಿಸಲಾಗಿದೆ.
ಉಪವಿಭಾಗೀಯ ಕಚೇರಿಗಳು ಆಯಾಯ ಜಿಲ್ಲೆಯ ಪರಿಮಿತಿಯಲ್ಲೇ ಇರಬೇಕು. ಇದರಿಂದ ಆಡಳಿತಾತ್ಮಕವಾಗಿಯೂ ಸಹಕಾರಿಯಾಗುವುದು. ಕಾರ್ಕಳವನ್ನು ಉಡುಪಿ ವಿಭಾಗೀಯ ಕಚೇರಿಗೆ ಸೇರಿಸುವ ನಿಟ್ಟಿನಲ್ಲಿ ದೆಹಲಿಯ ಪ್ರಧಾನ ಅಂಚೆ ಕಚೇರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿರುತ್ತಾರೆ.