ಮುಂಬಯಿ, ಆ. 6 : ಮುಂಬಯಿಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ಬುಧವಾರದಿಂದ 12 ತಾಸುಗಳಲ್ಲಿ 293.8 ಮಿ.ಮೀ. ಮಳೆಯಾಗಿದ್ದು, ಇದು 46 ವರ್ಷಗಳ ಬಳಿಕ ಸುರಿದ ದಾಖಲೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚೆಂಬೂರ್, ಪರೇಲ್, ಬೈಕುಲಾ, ಹಿಂದ್ ಮಾತಾ, ದಾದರ್, ಕಿಂಗ್ಸ್ ಸರ್ಕಲ್, ಸಯನ್, ಅಂಧೇರಿ, ಸಾಂತಾಕ್ರೂಜ್, ಬೊರಿವಲಿ, ನಲಸೋಪರಾ ಮತ್ತು ಇನ್ನಿತರ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಬಸ್ ಮತ್ತು ಲೋಕಲ್ ರೈಲು ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ಹಳಿಯಲ್ಲಿ ನೀರು ತುಂಬಿದ ಪರಿಣಾಮ ಮಸ್ಜಿದ್ ಬಂದರ್ ಮತ್ತು ಬೈಕುಲಾ ನಿಲ್ದಾಣಗಳ ನಡುವೆ ಸಿಕ್ಕಿಬಿದ್ದಿದ್ದ ಎರಡು ಲೋಕಲ್ ರೈಲುಗಳಲ್ಲಿದ್ದ 300 ಪ್ರಯಾಣಿಕರನ್ನು ಎನ್‌ಡಿಆರ್‌ಎಫ್ ಮತ್ತು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆ ಮಾತನಾಡಿ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ರೆಡ್ ಅಲರ್ಟ್
ಮುಂಬಯಿಯಲ್ಲಿ ಮುಂದಿನ 24 ಗಂಟೆಗಳಲ್ಲಿ ಧಾರಾಕಾರ ಮಳೆಯಾಗುವ ಕುರಿತು ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಅಲ್ಲದೆ ಥಾಣೆ, ಪಾಲ್ಘರ್, ರಾಯಗಢ್ ಮತ್ತು ರತ್ನಾಗಿರಿ ಜಿಲ್ಲೆಗಳಿಗೂ ರೆಡ್ ಅಲರ್ಟ್ ಘೋಷಿಸಲಾಗಿದೆ.