ಜೈಪುರ:ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಶಾಸಕರ ಕುದುರೆ ತಡೆಯುವ ಸಲುವಾಗಿ ಖಾಸಗಿ ಹೊಟೆಲ್ ನಲ್ಲಿ ವಾಸ್ತವ್ಯವಿದ್ದ ಕಾಂಗ್ರೆಸ್ ಶಾಸಕರನ್ನು ಜೈಸಲ್ಮೇರ್ ಗೆ ಸ್ಥಳಾಂತರಿಸಲು ಕಾಂಗ್ರೆಸ್ ಮುಂದಾಗಿದೆ.
ವಿಧಾನಸಭೆ ಅಧಿವೇಶನ ನಡೆಸಲು ರಾಜಸ್ಥಾನ ರಾಜ್ಯಪಾಲ ಕಲ್‌ರಾಜ್ ಮಿಶ್ರಾ ಅನುಮತಿ ನೀಡಿರುವ ಬೆನ್ನಲ್ಲೇ ರಾಜಸ್ಥಾನದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತೆ ಚುರುಕುಗೊಂಡಿವೆ. ಅಂತೆಯೇ ಶಾಸಕರ ಕುದುರೆ ವ್ಯಾಪಾರ ಕೂಡ ಜೋರಾಗಿ ನಡೆದಿದ್ದು, ಈ ಬಗ್ಗೆ ಸ್ವತಃ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೂಟ್, ಅಧಿವೇಶನಕ್ಕೆ ಅನುಮತಿ ದೊರೆತ ಬೆನ್ನಲ್ಲೇ ಶಾಸಕರ ಬೆಲೆ ಗಗನಕ್ಕೇರಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಇದೇ ಕಾರಣಕ್ಕೆ ಗೆಹ್ಲೋಟ್ ಅವರ ನಿಷ್ಠ ಶಾಸಕರನ್ನು ಜೈಪುರ ಹೋಟೆಲ್‌ನಿಂದ ಜೈಸಲ್ಮೇರ್‌ನಲ್ಲಿರುವ ಹೋಟೆಲ್‌ಗೆ ಸ್ಥಳಾಂತರಿಸಲು ಮುಖಂಡರು ಮುಂದಾಗಿದ್ದಾರೆ. ಆದರೆ, ಶಾಸಕರನ್ನು ಸ್ಥಳಾಂತರಿಸಲು ಕಾರಣ ಏನು ಎಂಬುದನ್ನು ಮೂಲಗಳು ಸ್ಪಷ್ಟಪಡಿಸಿಲ್ಲ. ಶಾಸಕರನ್ನು ಸದ್ಯ ಜೈಪುರ–ದೆಹಲಿ ರಾಷ್ಟ್ರೀಯ ಹೆದ್ದಾರಿ ಬಳಿಯ ಐಷಾರಾಮಿ ಹೋಟೆಲ್‌ನಲ್ಲಿ ಇರಿಸಲಾಗಿದೆ. ಅಲ್ಲಿಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಗೆಹ್ಲೋಟ್ ಅವರು ಶಾಸಕರನ್ನು ಉದ್ದೇಶಿಸಿ ಮಾತನಾಡುತ್ತಾರೆ ಎನ್ನಲಾಗಿದೆ. ನಂತರ ಎಲ್ಲ ಶಾಸಕರನ್ನೂ ಜೈಸಲ್ಮೇರ್‌ನ ಹೋಟೆಲ್‌ಗೆ ಸ್ಥಳಾಂತರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಚಿನ್ ಪೈಲಟ್ ಹಾಗೂ 18 ಜನ ಶಾಸಕರು ಬಂಡಾಯದ ಬಾವುಟ ಹಾರಿಸಿದ ನಂತರ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಯಿತು. ಹೀಗಾಗಿ ಜುಲೈ 13ರಿಂದ ಶಾಸಕರು ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.