ಮಂಗಳೂರು, ಜು. 31: ಕೊರೊನಾ ಪರಿಕರಗಳ ಖರೀದಿಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುನರುಚ್ಚರಿಸಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು ಕೊರೊನಾ ಹೋರಾಟದಲ್ಲಿ ಸರಕಾರದ ಜೊತೆಗೆ ಕೈ ಜೋಡಿಸಿದ್ದೇವೆ. ಆದರೆ ಸರಕಾರದ ಭ್ರಷ್ಟಾಚಾರವನ್ನು ವಿರೋಧಿಸುತ್ತೇವೆ. 4 ಲಕ್ಷದ ವೆಂಟಿಲೇಟರನ್ನು 18 ಲಕ್ಷಕ್ಕೆ ಖರೀದಿಸಲಾಗಿದೆ. ಥರ್ಮಲ್ ಸ್ಕ್ಯಾನಿಂಗ್ ವ್ಯವಹಾರವೂ ಸರಿಯಾಗಿಲ್ಲ ಎಂದು ಡಿಕೆಶಿ ಆರೋಪಿಸಿದ್ದಾರೆ.
ಭ್ರಷ್ಟಾಚಾರಕ್ಕೆ ಸಂಬಂಧಿಸಿ ನಾನು ಸುಳ್ಳು ಹೇಳುವುದಾದರೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಡಿಕೆಶಿ ಸವಾಲು ಹಾಕಿದರು.
ಭ್ರಾಷ್ಟಾಚಾರದ ಆರೋಪದ ಕುರಿತು ಪಬ್ಲಿಕ್ ಅಕೌಂಟ್ಸ್ ಕಮಿಟಿಯಿಂದ ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದರು.