ಬೀಜಿಂಗ್, ಜು. 29 :ಲಡಾಖ್ನ ಗಡಿ ಗಕರಾರಿಗೆ ಸಂಬಂಧಿಸಿ ತೀರಾ ಮೆತ್ತಗಾಗಿರುವ ಚೀನ ಇದೀಗ ಡದಿಯಿಂದ ತನ್ನ ಸೇನೆ ಹಿಂದೆ ಸರಿದಿರುವುದನ್ನ ಒಪ್ಪಿಕೊಂಡಿದೆ. ಲಡಾಖ್ ಗಡಿಯ ಬಹುತೇಕ ನೆಲೆಗಳಿಂದ ಭಾರತ ಮತ್ತು ಚೀನ ಎರಡೂ ದೇಶಗಳ ಸೇನಾಪಡೆಗಳು ಸಂಪೂರ್ಣ ಹಿಂದೆ ಸರಿದಿವೆ ಎಂದು ಚೀನಾದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಲ್ಲದೆ ಗಡಿಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಹೇಳಿದ್ದಾರೆ.
ಗಾಲ್ವಾನ್, ಗೊಗ್ರಾ ಮತ್ತು ಹಾಟ್ ಸ್ಪ್ರಿಂಗ್ ನಿಂದ ಸೇನೆ ಹಿಂಪಡೆಯಲಾಗಿದೆಯೇ ಎಂಬ ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಚೀನ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ಉಭಯ ದೇಶಗಳ ಮುಂಚೂಣಿ ಗಡಿ ಪಡೆಗಳು ಈಗಾಗಲೇ ಬಹುತೇಕ ಸೇನಾ ನೆಲೆಗಳಲ್ಲಿ ನಿಷ್ಕ್ರಿಯತೆಯನ್ನು ಪೂರ್ಣಗೊಳಿಸಿವೆ ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ಭಾರತೀಯ ಸೇನೆ ಜೊತೆ ನಡೆದ ಮಾತುಕತೆಯಲ್ಲಿ ನಿರ್ಣಯಿಸಿದಂತೆ ಲಡಾಖ್ ಗಡಿಯಲ್ಲಿರುವ ಮುಂಚೂಣಿ ಸೇನಾ ನೆಲೆಗಳಿಂದ ಸೈನಿಕರನ್ನು ಹಿಂಪಡೆಯಲಾಗಿದೆ. ಗಡಿಯಲ್ಲಿನ ಉದ್ವಿಗ್ನತೆ ಕಡಿಮೆ ಮಾಡಲು ಉಭಯ ಸೇನೆಗಳು ಪರಸ್ಪರ ಸಹಕರಿಸುತ್ತಿವೆ ಎಂದು ವಾಂಗ್ ಹೇಳಿದ್ದಾರೆ.
ಶಾಂತಿ ಮಾತುಕತೆಗಳ ಮೂಲಕವೇ ಸಮಸ್ಯೆ ಪರಿಹಾರ ಕಾಣಬೇಕು ಎಂಬುದು ಎರಡೂ ರಾಷ್ಟ್ರಗಳ ಬಯಕೆಯಾಗಿದ್ದು, ಅದರಂತೆಯೇ ಉಭಯ ಸೇನೆಗಳು ಮಾತುಕತೆಯಲ್ಲಿ ನಿರತವಾಗಿರುವುದು ಸಂತಸದ ವಿಷಯ ಎಂದು ವೆನ್‌ಬಿನ್ ನುಡಿದಿದ್ದಾರೆ.