ಬೆಂಗಳೂರು,ಜು.29 :ನಿಗಮ –ಮಂಡಳಿಗಳ ಹುದ್ದೆಗಳನ್ನು ತಿರಸ್ಕರಿಸುವ ಮೂಲಕ ಒತ್ತಡ ಹೇರಲು ಯತ್ನಿಸಿದ ಶಾಸಕರ ತಂತ್ರಕ್ಕೆ ಯಡಿಯೂರಪ್ಪ ಸೊಪ್ಪು ಹಾಕಿಲ್ಲ. ಮಾತ್ರವಲ್ಲದೆ ಈ ಶಾಸಕರಿಗೆ ಪಕ್ಷದಿಂದಲೂ ಪೂರಕ ಬೆಂಬಲ ಸಿಕ್ಕಿಲ್ಲ. ಹೀಗಾಗಿ ಹೆಚ್ಚಿನವರು ಅನಿವಾರ್ಯವಾಗಿ ಸಿಕ್ಕಿದಷ್ಟಕ್ಕೆ ತೃಪ್ತಿಪಟ್ಟುಜೊಳ್ಳಲು ತೀರ್ಮಾನಿಸಿದ್ದಾರೆ. ವಿವಿಧ ನಿಗಮ-ಮಂಡಳಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ 20 ಶಾಸಕರನ್ನು ನೇಮಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಭಿನ್ನಮತ ಸ್ಫೋಟಗೊಂಡಿತ್ತು. ಸಚಿವ ಸ್ಥಾನಕ್ಕೆ ಅರ್ಹರಾದ ನಮಗೆ ನಿಗಮ-ಮಂಡಳಿ ಅಧ್ಯಕ್ಷ ಹುದ್ದೆ ನೀಡಿದ್ದಾರೆ ಎಂದು ಕೆಲವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತ ಪಡಿಸಿದ್ದರು. . ಕೆಲವರು ನಿಗಮ-ಮಂಡಳಿ ಅಧ್ಯಕ್ಷ ಹುದ್ದೆಯನ್ನು ತಿರಸ್ಕರಿಸಿದ್ದರು.
ಆದರೆ ಶಾಸಕರ ಹುದ್ದೆ ತಿರಸ್ಕರಿಸುವ ಈ ತಂತ್ರಕ್ಕೆ ಸಿಎಂ ಯಡಿಯೂರಪ್ಪ ಡೋಂಟ್ ಕೇರ್ ಎಂದಿದ್ದಾರೆ. ಬೇಕಿದ್ದre ಇಟ್ಟುಕೊಳ್ಳಿ ಅಥವಾ ಬಿಟ್ಟುಬಿಡಿ ಎನ್ನುವ ಮೂಲಕ ಶಾಕ್ ನೀಡಿದ್ದಾರೆ. ಹೀಗಾಗಿ ಕೆಲವು ಶಾಸಕರು ಬೇರೆ ದಾರಿಯಿಲ್ಲದೆ ಸ್ವಯಂ ಪ್ರೇರಿತರಾಗಿ ಅಧಿಕಾರ ವಹಿಸಿಕೊಳ್ಳಲು ಮುಂದಾಗಿದ್ದರು.
ಸಿಎಂ ಯಡಿಯೂರಪ್ಪ ನಮಗೆ ಕರೆ ಮಾಡಿ ಸಮಾಧಾನ ಮಾಡುತ್ತಾರೆ ಎಂದು ಕೆಲವರು ಭಾವಿಸಿದ್ದರು. ಆದರೆ ಸದ್ಯ ಅದ್ಯಾವುದು ಆಗಿಲ್ಲ. ಇನ್ನು ಕೆಲವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಅಸಮಾಧಾನ ಹೊರ ಹಾಕಿದ್ದರು ಎನ್ನಲಾಗಿದೆ. ಆದರೆ ಕಟೀಲ್ ಕೂಡ ಸೊಪ್ಪು ಹಾಕದ ಕಾರಣ ಶಾಸಕರು ಸದ್ದಿಲ್ಲದೆ ಹುದ್ದೆ ಸ್ವೀಕರಿಸುತ್ತಿದ್ದಾರೆ.
ಅರಗ ಜ್ಞಾನೇಂದ್ರ,ಲಿಂಗಾಯತ ಸಮುದಾಯದ ಕಳಕಪ್ಪ ಬಂಡಿ ಸೇರಿ ಕೆಲವು ಹಿರಿಯರೇ ಸಿಕ್ಕಿದ ಹುದ್ದೆ ಸಾಕು. ಪರಿಸ್ಥಿತಿ ಈಗ ಅನುಕೂಲಕರವಲ್ಲದ ಕಾರಣ ಮುಖ್ಯಮಂತ್ರಿಯವರು ಈ ತೀರ್ಮಾನ ತೆಗೆದುಕೊಂಡಿರಬಹುದು ಎಂದು ತಮ್ಮನ್ನು ತಾವೇ ಸಮಾಧಾನಿಸಿಕೊಂಡಿದ್ದಾರೆ.