ಆ ವೃದ್ಧರ ಶವ ಎತ್ತಲೂ ಯಾರೂ ಬರಲಿಲ್ಲ

0

ಕೋಲ್ಕೊತ್ತಾದ ಬೆಹಲ ಬಡಾವಣೆಯ 70 ವರ್ಷ ಪ್ರಾಯವಾಗಿದ್ದ ಸನಾತನ್‌ ಪ್ರಧಾನ್‌  ಜು.19ರಂದು ಅಸ್ವಸ್ಥರಾದರು. ಮರುದಿನ ಮನೆಯವರು ಕೊರೊನಾ ಪರೀಕ್ಷೆಗಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಜು.23ರಂದು ಮನೆಯವರಿಗೆ  ಫೋನ್‌ ಬಂತು. ಸನಾತನ್‌ ವರದಿ ಪೊಸಿಟಿವ್‌ ಬಂದಿದೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್‌ ಬರುತ್ತದೆ ತಯಾರಾಗಿರಿ ಎಂದರು.

ಆದರೆ ಎಷ್ಟು ಹೊತ್ತಾದರೂ ಆಂಬುಲೆನ್ಸ್‌ ಬರಲಿಲ್ಲ. ಪದೇಪದೆ ಫೋನ್‌    ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ. 20  ತಾಸು ಕಳೆದರೂ ಆಂಬುಲೆನ್ಸ್‌ ಬರಲಿಲ್ಲ. ಅಂಬುಲೆನ್ಸ್‌ಗೆ ಕಾಯುತ್ತಲೇ ಸನಾತನ್‌ ಪ್ರಾಣ ಬಿಟ್ಟರು.ಪ್ರಾಣ ಹೋದ ಸ್ವಲ್ಪ ಹೊತ್ತಿನ ಮೇಲೆ ಆಂಬುಲೆನ್ಸ್‌ ಬಂತು. ಆದರೆ ಆಂಬುಲೆನ್ಸ್‌ ಸಿಬಂದಿ ಮೃತದೇಹ ಒಯ್ಯಲು ಒಪ್ಪಲಿಲ್ಲ. ಅದು ಪೊಲೀಸರ ಕೆಲಸ, ಅವರು ಬರುವ ತನಕ ಕಾಯಿರಿ ಎಂದು ಹೇಳಿ ವಾಪಾಸು ಹೋದರು. ಮತ್ತೆ ನಾಲ್ಕು ತಾಸು ಕಳೆದ ಬಳಿಕ ಕೆಲವು ಅಧಿಕಾರಿಗಳು ಬಂದರು. ಅವರು ಮನೆಯ ಕಂಪೌಂಡ್‌ ಒಳಗೂ ಬರಲಿಲ್ಲ. ದೂರದಿಂದಲೇ ಎರಡು ಪಿಪಿಇ ಕಿಟ್‌ಗಳನ್ನು ಎಸೆದು ಅಂತ್ಯ ಕ್ರಿಯೆಯನ್ನು ನೀವೇ  ಮಾಡಿ ಎಂದು ಸನಾತನ್‌ ಅವರ ಇಬ್ಬರು ಪುತ್ರರಿಗೆ ಹೇಳಿದರು.

ಇಷ್ಟೆಲ್ಲ ಆಗುವಾಗ ಸನಾತನ್‌ ಮೃತಪಟ್ಟು 12 ತಾಸಾಗಿತ್ತು. ಎಲ್ಲಿಂದಲೂ ಸಹಾಯ ಸಿಗುವುದಿಲ್ಲ ಎಂದು ಖಾತರಿಯಾದ ಬಳಿಕ ಮನೆಯವರೇ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಿ ಮೃತದೇಹವನ್ನು ಊರಿನ ಶ್ಮಶಾನಕ್ಕೆ ಕೊಂಡೊಯ್ದರು. ಆದರೆ ಊರ ಜನರು ಶ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲು ದಮ್ಮಯ್ಯ ಹಾಕಿದರೂ ಬಿಡಲಿಲ್ಲ. ಬೇರೆ ದಾರಿ ಕಾಣದೆ ಮೃತದೇಹವನ್ನು ಮರಳಿ ಮನೆಗೆ ತಂದರು. ಮನೆಯ ಅವರಣದಲ್ಲೇ ಇಬ್ಬರು ಪುತ್ರರು ಕಷ್ಟಪಟ್ಟು  ಗುಂಡಿ ತೋಡಿ ದೇಹವನ್ನು ಅದರೊಳಕ್ಕೆ ಇಳಿಸಿದರು. ಇಷ್ಟೆಲ್ಲ ಅಗುವಾಗ ನಸುಕು ಹರಿದಿತ್ತು.

*

ಇದು ಇಂಥದ್ದೇ ಇನ್ನೊಂದು ಕತೆ.ಇದೇ ಬೆಹಲ ಬಡಾವಣೆಯಲ್ಲಿ ಭಾನುವಾರ ಕೊರೊನಾದಿಂದ ತೀರಿಕೊಂಡ  55 ವರ್ಷ ಪ್ರಾಯದ ವ್ಯಕ್ತಿಯಪಬ್ಬರ ಮರತದೇಹವನ್ನು ಮನೆಯವರು 18 ತಾಸು ಮನೆಯಲ್ಲಿಟ್ಟು ಕಾದು ಕುಳಿತರು. ಭಾನುವಾರ ರಾತ್ರಿ 10.30ಕ್ಕೆ ಈ ವ್ಯಕ್ತಿ ತೀವ್ರ ಉಸಿರಾಟದ ತೊಂದರೆಯಿಂದ ತೀರಿಕೊಂಡರು. ಒಂದು ದಿ ಮೊದಲಷ್ಟೇ ಅವರ ವರದಿ ಪೊಸಿಟಿವ್‌ ಬಂದಿತ್ತು.ಮನೆಯವರು ಸರಕಾರದ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ಮಾಡುವ ಸಲುವಾಗಿ ನಗರಪಾಲಿಕೆ, ಸ್ಥಳೀಯ ಕೌನ್ಸಿಲರ್‌, ಪೊಲೀಸರು ಸೇರಿದಂತೆ ಸಂಬಂಧಪಟ್ಟ ಎಲ್ಲರನ್ನು ಸಂಪರ್ಕಿಸಿದರೂ  ಯಾವ ಉಪಯೋಗವೂ ಆಗಲಿಲ್ಲ. ಸೋಮವಾರ ಮಧ್ಯಾಹ್ನದ ಗನಕ ಸಂಬಂಧಪಟ್ಟವರಿಂದ ಪ್ರತಿಸ್ಪಂದನ ಸಿಗದೆ ಕೊನೆಗೆ ಮನೆಯವರೇ ಅಂತ್ಯಕ್ರಿಯೆ ಮಾಡಿ ಮುಗಿಸಿದರು. ಈಗ ಈ ಮನೆಯ ಆರು  ಮಂದಿಗೆ ಕೊರೊನಾ ವೈರಸ್‌ ಅಂಟಿಕೊಂಡಿದೆ.

*

ಇನ್ನೊಂದು ಘಟನೆ ನಡೆದಿರುವುದು ಪಶ್ಚಿಮ ಬಂಗಾಳದ 24 ಪರಗಣ  ಜಿಲ್ಲೆಯಲ್ಲಿ. ವೃದ್ಧ ಮಾಧವ ದತ್ತ ಕೊರೊನಾದಿಂದ ತೀರಾ ಅಸ್ವಸ್ಥರಾದಾಗ ಅವರ ಪತ್ನಿ ಹೇಗೋ ಮಾಡಿ ಬೊಂಗಾಂವ್ನ ಉಪ ವಿಭಾಗೀಯ ಆಸ್ಪತ್ರೆಗೆ ಕರೆತಂದರು.

ಆಸ್ಪತ್ರೆಯಲ್ಲಿ ವಾರ್ಡಿನೊಳಗೆ ದತ್ತರನ್ನು ಕರೆದೊಯ್ಯಲು ಅವರಿಗೆ ಯಾರದ್ದಾದರೂ ಸಹಾಯ ಬೇಕಿತ್ತು. ಆದರೆ ಯಾರೊಬ್ಬರೂ ದತ್ತರನ್ನು ಎತ್ತಿಕೊಂಡು ಹೋಗಲು ಮುಂದೆ ಬರಲಿಲ್ಲ.ಬೇರೆ ದಾರಿ ಇಲ್ಲದೆ ಪತ್ನಿ ಅವರನ್ನು ಎಳೆದುಕೊಂಡೇ  ಹೋದರು.ಆದರೆ ವಾರ್ಡ್‌ ತಲುಪುವಷ್ಟರಲ್ಲಿ ಅವರ ಪ್ರಾಣವೇ ಹೋಗಿತ್ತು.  

Previous articleದ.ಕ.ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್‌ ದಿಢೀರ್‌ ವರ್ಗಾವಣೆ
Next articleದೇಶದಲ್ಲಿ 15 ಲಕ್ಷದ ಗಡಿ ದಾಟಿದ ಕೊರೊನಾ

LEAVE A REPLY

Please enter your comment!
Please enter your name here