ಆರ್ಯಾ ಮತ್ತು ಆರ್ದ್ರಾ ಕೇರಳದ ಮಲಪ್ಪುರಂ ಜಿಲ್ಲೆಯ ಅನಮಂಗಾಡ್ ಎಂಬಲ್ಲಿರುವ ಅವಳಿ ಸಹೋದರಿಯರು. ದೇಶದಲ್ಲಿ ಕೊರೊನಾ ಹಾವಳಿ ಶುರುವಾದ ಬಳಿಕ ಈ ಸಹೋದರಿಯರು ಸಾಮಾಜಿಕ ಮಾಧ್ಯಮಗಳಲ್ಲಿ ಸ್ಟಾರ್‌ಗಳಾಗಿ ಮಿಂಚುತ್ತಿದ್ದಾರೆ.ಹಾಗೆಂದು ಇದಕ್ಕಾಗಿ ಈ ಸಹೋದರಿಯರು ಯಾವುದೇ ಗಿಮಿಕ್ ಮಾಡಿಲ್ಲ. ಅವರು ಮಾಡುವುದಿಷ್ಟೆ ನಿತ್ಯ ಸಂಜೆ ಕೊರೊನಾ ಪರಿಸ್ಥಿತಿಯ ಬಗ್ಗೆ ತಮ್ಮದೇ ಆದ ನ್ಯೂಸ್ ಬುಲೆಟಿನ್ ಕೊಡುವುದು.ದೇಶದಲ್ಲಿ ಮೊದಲ ಹಂತದ ಲಾಕ್ ಡೌನ್ ಜಾರಿಯಾದಾಗಲೇ ಅವರು ನ್ಯೂಸ್ ಬುಲೆಟಿನ್ ಕೊಡಲು ಶುರು ಮಾಡಿದರು.ಕೊರೊನಾ ರೋಗಿಗಳ ಸಂಖ್ಯೆ,ಸಂಪರ್ಕದಿಂದ ಸೋಂಕಿತರಾದವರು,ಜಿಲ್ಲಾವಾರು ಅಂಕಿಅಂಶ,ಸ್ಥಳಿಯವಾಗಿ ಇರುವ ಪ್ರಕರಣಗಳು ಹೀಗೆ ಜನಸಾಮಾನ್ಯರಿಗೆ ಬೇಕಾದ ಎಲ್ಲ ಮಾಹಿತಿ ಈ ಸಹೋದರಿಯರ ನ್ಯೂಸ್ ಬುಲೆಟಿನ್ ನಲ್ಲಿರುತ್ತದೆ. ಬಾಲಕಿಯರಿಗೆ ಈ ಎಲ್ಲ ಮಾಹಿತಿ ಎಲ್ಲಿ ಸಿಗುತ್ತದೆ ಎಂಬ ಪ್ರಶ್ನೆ ನಿಮ್ಮ ಮನಸಿನಲ್ಲಿ ಮೂಡಿರಬಹುದು. ಅವರು ಕೂಡ ನಮ್ಮ ಹಾಗೆ ಟಿವಿ ಚಾನೆಲ್ ಗಳನ್ನು ನೋಡಿಯೇ ಮಾಹಿತಿ ಸಂಗ್ರಹಿಸುತ್ತಾರೆ.ಸಂಜೆಯಾಗುವಾಗ ಎಲ್ಲ ಮಾಹಿತಿಯನ್ನು ಕ್ರೋಢೀಕರಿಸಿ ಒಪ್ಪ ಮಾಡಿ ತಮ್ಮದೇ ನ್ಯೂಸ್ ಬುಲೆಟಿನ್ ತಯಾರು ಮಾಡಿ ಫೇಸ್‌ಬುಕ್‌ಗೆ ಅಪ್ಲೋಡ್ ಮಾಡುತ್ತಾರೆ.ಐದು ತಿಂಗಳಿಂದ ಸಹೋದರಿಯರು ಈ ಕೆಲಸವನ್ನು ಮಾಡುತ್ತಿದ್ದು ಅವರಿಗೆ ಸಾಕಷ್ಟು ಓದುಗರು ಸೃಷ್ಟಿಯಾಗಿದ್ದಾರೆ.ಇಷ್ಟಕ್ಕೂ ನ್ಯೂಸ್ ಚಾನೆಲ್ ಗಳಲ್ಲಿ ಇಲ್ಲದ ವಿಶೇಷತೆ ಸಹೋದರಿಯರ ಸುದ್ದಿಯಲ್ಲೇನಿದೆ ಎಂದು ಕೇಳಿದ್ದೀರಾ? ಅವರ ನ್ಯೂಸ್ ಬುಲೆಟಿನ್ ನಲ್ಲಿ, ಕೊರೊನಾ ರಣಕೇಕೆ, ಕೊರೊನಾ ಮಹಾಸ್ಫೋಟ, ಕೊರೊನಾ ಮಹಾಮಾರಿ ಎಂಬಿತ್ಯಾದಿ ಬೆಚ್ಚಿಬೀಳಿಸುವ, ಹೆದರಿಸಿ ಸಾಯಿಸುವ ವಿಶೇಷಣಗಳು, ಭೀಕರ ವರ್ಣನೆಗಳು ಇರುವುದಿಲ್ಲ. ಇದ್ದುದನ್ನು ಇದ್ದ ಹಾಗೆ ತಣ್ಣಗೆ ಜನರಿಗೆ ಅರ್ಥವಾಗುವ ಹಾಗೆ ಸರಳವಾಗಿ ಹೇಳಿ ಮುಗಿಸುತ್ತಾರೆ. ಈ ಕಾರಣಕ್ಕೆ ಆರ್ಯಾ ಮತ್ತು ಆರ್ದ್ರಾರ ನ್ಯೂಸ್ ಬುಲೆಟಿನ್ ಗಳು ಜನರಿಗೆ ಇಷ್ಟವಾಗಿವೆ. ಇದು ವಿಶ್ವಾಸಾರ್ಹ ಎಂಬ ಭಾವನೆ ಜನರಲ್ಲಿ ಮೂಡಿದೆ.ಅಂದಹಾಗೆ ಈ ಅವಳಿ ಸಹೋದರಿಯರ ಚಾನೆಲ್ ನ ಹೆಸರು ಕೇರಳೀಯಂ ವೀಟು ಚಾನೆಲ್. ಮಲಪ್ಪುರಂನ ಅನಮಂಗಾಡ್ ಸರಕಾರಿ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿಯರು.ನಂಬಿಯತ್ ರಘುರಾಮನ್ ಮತ್ತು ವಿಜೇತಾ ಅವರ ಹೆತ್ತವರು.