ಬೆಂಗಳೂರು:ರಾಮಾಯಣ ಮಹಾಕಾವ್ಯದಲ್ಲಿ ಸೀತೆಯನ್ನು ಅಪಹರಿಸುವ, ಎಡೆಗೆ ರಾಮನಿಂದ ಹತನಾಗುವ ರಾವಣನನ್ನುನಾವು ವಿಲನ್ ರೀತಿ ನೋಡುತ್ತಿರಬಹುದು.ಆದರೆ ರಾವಣನ ಊರಾ ಶ್ರೀಲಂಕಾದಲ್ಲಿ ಆತ ಹೀರೊ. ಲಂಕಾಸುರನೆಂದು ಭಾರತೀಯರು ಕರೆಯುವ ರಾವಣನ ಬಗ್ಗೆ ಶ್ರೀಲಂಕಾದಲ್ಲಿ ಈಚೆಗೆ ಅಪರಿಮಿತ ಆಸಕ್ತಿ ಮೂಡಿದೆ. ಅಲ್ಲಿನ ಸರ್ಕಾರವು ರಾವಣನ ಬಗ್ಗೆ ಸರ್ವ ರೀತಿಯಲ್ಲಿ ಅಧ್ಯಯನ ನಡೆಸಲು ಮುಂದಾಗಿದೆ. ರಾವಣನ ಬಗ್ಗೆ ಯಾರ ಬಳಿಯಾದರೂ ಯಾವುದೇ ರೀತಿಯ ದಾಖಲೆಗಳು ಇದ್ದರೆ ಸರ್ಕಾರಕ್ಕೆ ನೀಡಿ ಎಂದು ಅಲ್ಲಿ ಜಾಹೀರಾತುಗಳನ್ನ ನೀಡಲಾಗಿದೆ. ಶ್ರೀಲಂಕಾದ ಪುರಾತನ ವೈಮಾನಿಕ ತಂತ್ರಜ್ಞಾನದ ಬಗ್ಗೆ ಹೆಚ್ಚು ಬೆಳಕು ಚೆಲ್ಲಲು ಹಾಗೂ ಲಂಕಾದ ಪಾರಂಪರಿಕ ಶ್ರೇಷ್ಠತೆಯನ್ನು ವಿಶ್ವಕ್ಕೆ ಜಗಜ್ಜಾಹೀರು ಮಾಡಲು ಲಂಕಾ ಸರ್ಕಾರ ಈ ಮಹಾ ಯೋಜನೆ ಪ್ರಾರಂಭಿಸಿದೆ.ಶ್ರೀಲಂಕಾ ಹೇಳುಇವ ಪ್ರಕಾರ ರಾವಣನೇ ಜಗತ್ತಿನ ಮೊದಿ ಪೈಲಟ್. ಪುಷ್ಪಕ ವಿಮಾನ ಇದ್ದದ್ದು ರಾವಣನ ಬಳಿ ಮಾತ್ರ. ಅವನೇ ಅದನ್ನು ಚಲಾಯಿಸಿಕೊಂಡು ಹೋಗುತ್ತಿದ್ದ.
ರಾವಣನನ್ನು ಭಾರತದಲ್ಲಿ ರಾಕ್ಷಸ ಅಥವಾ ಅಸುರ ಎಂದು ಪರಿಗಣಿಸಲಾಗುತ್ತದೆಯಾದರೂ ಶ್ರೀಲಂಕಾದಲ್ಲಿ ಆತನನ್ನು ಆರಾಧಿಸಲಾಗುತ್ತದೆ. ರಾವಣ ಈ ವಿಶ್ವದ ಮೊದಲ ವಿಮಾನ ಹಾರಾಟಗಾರ (ಸಿವಿಲ್ ಏವಿಯೇಟರ್) ಎಂದು ಲಂಕನ್ನರು ನಂಬಿದ್ದಾರೆ. 5,000 ವರ್ಷಗಳ ಹಿಂದೆ ರಾವಣ ವಿಮಾನ ಹಾರಾಟ ನಡೆಸಿದ್ದರೆಂದು ಲಂಕಾ ಸರ್ಕಾರವೂ ಬಲವಾಗಿ ನಂಬಿದೆ. ಪುರಾತನ ಕಾಲದಲ್ಲಿ ವಿಮಾನ ಹಾರಾಟ ಮಾಡಲು ರಾವಣ ಬಳಸಿದ ತಂತ್ರಜ್ಞಾನ ಮತ್ತು ವಿಧಾನಗಳೇನು ಎಂಬುದನ್ನು ಅರಿತುಕೊಳ್ಳಲು ಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಸಂಕಲ್ಪ ತೊಟ್ಟಿದೆ. ಆ ನಿಟ್ಟಿನಲ್ಲಿ ಪ್ರಯತ್ನ ಪ್ರಾರಂಭಿಸಿದೆ.
ಶ್ರೀಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಶಶಿ ದನತುಂಗೆ ಹೇಳುವಂತೆ ವಿಶ್ವದಲ್ಲಿ ವಿಮಾನ ಯಾನ ಮಾಡಿದ ಮೊದಲ ವ್ಯಕ್ತಿ ರಾವಣ ಎಂಬ ಸತ್ಯವನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು.
“ರಾಜ ರಾವಣ ಬಹಳ ಬುದ್ಧಿವಂತ. ಆಕಾಶದಲ್ಲಿ ಹಾರಾಟ ಮಾಡಿದ ಮೊದಲ ವ್ಯಕ್ತಿ. ಅವರು ವಿಮಾನ ಹಾರಾಟಗಾರರಾಗಿದ್ದರು. ಇದು ಪುರಾಣದ ಕಥೆಯಲ್ಲ, ವಸ್ತುಸ್ಥಿತಿ. ಈ ಬಗ್ಗೆ ವಿಸ್ತೃತ ಸಂಶೋಧನೆಯ ಅಗತ್ಯ ಇದೆ. ಮುಂದಿನ 5 ವರ್ಷಗಳಲ್ಲಿ ನಾವು ಇದನ್ನು ಸಾಬೀತು ಮಾಡುತ್ತೇವೆ” ಎಂದು ಶಶಿ ದನತುಂಗೆ ಹೇಳಿದ್ದಾರೆ.
ಶ್ರೀಲಂಕಾದ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂಡಾರನಾಯಿಕೆ ಏರ್ಪೋರ್ಟ್ ಇರುವ ಕಾಟುನಾಯಕೆ ನಗರದಲ್ಲಿ ಕಳೆದ ವರ್ಷ ಸಿವಿಲ್ ಏವಿಯೇಶನ್ ತಜ್ಞರು, ಇತಿಹಾಸತಜ್ಞರು, ಪುರಾತತ್ವ ಶಾಸ್ತ್ರಜ್ಞರು, ವಿಜ್ಞಾನಿಗಳು ಮತ್ತು ಭೂವಿಜ್ಞಾನಿಗಳ ಸಮ್ಮೇಳನ ನಡೆದಿತ್ತು. ರಾವಣ 5 ಸಾವಿರ ವರ್ಷಗಳ ಹಿಂದೆ ಭಾರತಕ್ಕೆ ವಿಮಾನದಲ್ಲಿ ಹೋಗಿ ವಾಪಸ್ ಬಂದ್ದದ್ದು ವಾಸ್ತವ ಎಂಬ ವಿಚಾರವನ್ನು ಆ ಸಮಾವೇಶದಲ್ಲಿ ಸ್ವೀಕರಿಸಲಾಗಿತ್ತು.
ಹಾಗೆಯೇ, ರಾವಣ ಸೀತಾಪಹರಣ ಮಾಡಿದ್ದರೆಂಬುದು ಸುಳ್ಳು. ಅದು ಭಾರತದ ಪುರಾಣ ಕಥೆಗಳಲ್ಲಿ ಮಾತ್ರ ಇರುವ ಆರೋಪ. ವಾಸ್ತವದಲ್ಲಿ ರಾವಣ ಸನ್ನಡತೆಯ ಒಬ್ಬ ರಾಜನಾಗಿದ್ದರು ಎಂಬುದು ಲಂಕನ್ನರ ಭಾವನೆ. ಭಾರತದಲ್ಲೂ ಕೂಡ ರಾವಣನನ್ನು ಒಬ್ಬ ಮಹಾಬ್ರಾಹ್ಮಣ ಹಾಗೂ ಶ್ರೇಷ್ಠ ವಿದ್ವಾಂಸ ಎಂದು ಪರಿಗಣಿಸಲಾಗಿದೆ. ರಾಮಾಯಣದಲ್ಲೂ ಇದು ಉಲ್ಲೇಖವಾಗಿದೆ.
ಇತ್ತೀಚಿನ ದಿನಗಳಲ್ಲಿ ರಾವಣನ ಬಗ್ಗೆ ಶ್ರೀಲಂಕಾದಲ್ಲಿ ಕುತೂಹಲ ಹೆಚ್ಚುತ್ತಿದೆ. ಲಂಕಾದ ಮೊದಲ ಗಗನಯಾನ ಯೋಜನೆಯಾಗಿ ಆಗಸಕ್ಕೆ ಕಳುಹಿಸಲಾಗಿದ್ದ ಉಪಗ್ರಹಕ್ಕೆ ರಾವಣ ಎಂದೇ ಹೆಸರಿಡಲಾಗಿದೆ.