ಬ್ಯಾಂಕುಗಳಿಗೆ ಕೋಟಿಗಟ್ಟಲೆ ವಂಚಿಸಿ ವಿದೇಶಕ್ಕೆ ಪಿಅಯನ ಮಾಡಿರುವ ಉದ್ಯಮಿ ವಿಜಯ್ ಮಲ್ಯಗೆ ಭಾರತಕ್ಕೆ ಗಡೀಪಾರು ಆಗುವುದರಿಂದ ತಪ್ಪಿಸಿಕೊಳದಳುವುದು ಅಸಾಧ್ಯ ಎಂದು ಖಾತರಿಯಾಗಿದೆ. ಇದೀಗ ಮಲ್ಯ ವಕೀಲರು ಸುಪ್ರೀಂ ಕೋರ್ಟ್ ಮುಂದೆ ಗುರುವಾರ ಪ್ರಸ್ತಾವವೊಂದನ್ನು ಇಟ್ಟಿದ್ದಾರೆ. ಭಾರತದಲ್ಲಿನ ಬ್ಯಾಂಕ್ ಗಳ ಒಕ್ಕೂಟಕ್ಕೆ ಬಾಕಿ ಉಳಿಸಿಕೊಂಡಿರುವ ಸಾಲವನ್ನು ಸಂಪೂರ್ಣವಾಗಿ ಚುಕ್ತಾ ಮಾಡುವುದಾಗಿ ಹೇಳಿದ್ದಾರೆ. ಒಂದು ವೇಳೆ ಈ ಪ್ರಸ್ತಾವವನ್ನು ಒಪ್ಪಿಕೊಂಡಿದ್ದೇ ಆದಲ್ಲಿ ಮಲ್ಯ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ದಾಖಲಿಸಿರುವ ಎಲ್ಲ ಪ್ರಕರಣಗಳು ಬಗೆಹರಿಯಲಿವೆ. ಎಷ್ಟು ಮೊತ್ತವನ್ನು ನೀಡಲಾಗುತ್ತದೆ ಎಂದು ಮಲ್ಯ ಪರ ಕಾನೂನು ಸಲಹೆಗಾರರು ತಿಳಿಸಿಲ್ಲ. ಕಳೆದ ತಿಂಗಳು ಮಲ್ಯ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿಕೊಂಡಿದ್ದರು 13,960 ಕೋಟಿ ರುಪಾಯಿಯನ್ನು ಅಂತಿಮ ಹಾಗೂ ಪೂರ್ತಿ ಸಾಲದ ಮೊತ್ತ ಎಂದು ಪಾವತಿಸುವುದಾಗಿ ಹೇಳಿದ್ದಾರೆ.
ಇದೀಗ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ಪೀಠದ ಎದುರು ಮಲ್ಯ ಪರ ವಕೀಲರು ಸಾಲ ತೀರಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಅಂದ ಹಾಗೆ ವಿಜಯ್ ಮಲ್ಯ ತೆಗೆದುಕೊಂಡ ಸಾಲದ ಅಸಲು ಮೊತ್ತವೇ 9000 ಕೋಟಿ ರುಪಾಯಿಗೂ ಹೆಚ್ಚಿದೆ. ಈಗ ಮಲ್ಯ ನೀಡುವುದಾಗಿ ಹೇಳುತ್ತಿರುವ ಮೊತ್ತವು ಈ ಹಿಂದೆ ಕೊಡುವುದಾಗಿ ಹೇಳಿದ್ದ ಮೊತ್ತಗಳಿಗಿಂತ ಹೆಚ್ಚಿನದಾಗಿದೆ. ಆದರೆ, ತಮ್ಮ ವಿರುದ್ಧ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಜಾರಿ ನಿರ್ದೇಶನಾಲಯ ರದ್ದು ಮಾಡಬೇಕು ಎಂಬುದು ಮಲ್ಯ ಮನವಿಯಾಗಿದೆ. ಆದರೆ ಈ ಪ್ರಸ್ತಾವಕ್ಕೆ ಆಕ್ಷೇಪ ಎತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಿಜಯ್ ಮಲ್ಯ ಆಗಾಗ ಈ ರೀತಿಯ ಆಫರ್ ಗಳನ್ನು ಮುಂದಿಡುತ್ತಾರೆ. ಭಾರತಕ್ಕೆ ಬರುವ ಮುನ್ನ ಅವರು ಹಣವನ್ನು ಠೇವಣಿ ಇಡಲಿ ಎಂದಿದ್ದಾರೆ. ಆ ಮೂಲಕ ಮಲ್ಯರನ್ನು ಯಾವುದೇ ಸಮಯದಲ್ಲಿ ಭಾರತಕ್ಕೆ ಕರೆತರಬಹುದು ಎಂಬ ಸುಳಿವು ನೀಡಿದ್ದಾರೆ. ಯು.ಕೆ. ಕೋರ್ಟ್ ಗಳಲ್ಲಿ ಭಾರತಕ್ಕೆ ಹಸ್ತಾಂತರ ಆಗದಿರಲು ಸಲ್ಲಿಸಿದ್ದ ಮಲ್ಯ ಅರ್ಜಿಗಳು ತಿರಸ್ಕೃತ ಆಗಿವೆ. ಈಗ ಅಲ್ಲಿನ ಆಶ್ರಯ ಕೋರಿ ಅರ್ಜಿ ಸಲ್ಲಿಸಿದ್ದಾರೆ.