ರಾಜಸ್ಥಾನ ರಾಜಕೀಯ ಬಿಕ್ಕಟ್ಟು – ಕೇಂದ್ರ ಸಚಿವ, ಬಂಡಾಯ ಶಾಸಕನ ವಿರುದ್ಧ ದೂರು ದಾಖಲು

ಜೈಪುರ : ರಾಜಸ್ಥಾನದಲ್ಲಿ ಸೃಷ್ಟಿಯಾಗಿರುವ ರಾಜಖಿಯ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆದುಕೊಂಡು  ಕುತೂಹಲ ಹುಟ್ಟಿಸುತ್ತಿದೆ.  ಈ ತಿಕ್ಕಾಟದಲ್ಲಿ  ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಅಶೋಕ್ ಗೆಹ್ಲೊಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದು ಬಂಡಾಯ ಶಾಸಕರನ್ನು ಹಣದ ಆಮಿಷವೊಡ್ಡಿ ಸೆಳೆದುಕೊಳ್ಳಲು ನೋಡುತ್ತಿದೆ ಎಂದು ಆಪಾದಿಸಿ ಇದಕ್ಕೆ ಪುಷ್ಠಿ ನೀಡುವಂತಹ ಸಂಭಾಷಣೆಯುಳ್ಳ ಆಡಿಯೊ ಟೇಪನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.

ಈ ಸಂಬಂಧ ಕಾಂಗ್ರೆಸ್ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಕಾಂಗ್ರೆಸ್ ಬಂಡಾಯ ಶಾಸಕ ಬನ್ವರ್ ಲಾಲ್ ಶರ್ಮ ವಿರುದ್ಧ ಎಫ್ಐಆರ್ ದಾಖಲಿಸಿದ್ದು ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿಸಲು ಅಕ್ರಮವಾಗಿ ಪಿತೂರಿ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ ಪಿತೂರಿಯಲ್ಲಿ ಭಾಗಿಯಾದ ಆರೋಪದ ಮೇಲೆ ಕಾಂಗ್ರೆಸ್ ಇಂದು ಇಬ್ಬರು ಬಂಡಾಯ ಶಾಸಕರಾದ ಬನ್ವರ್ ಲಾಲ್ ಶರ್ಮ ಮತ್ತು ವಿಶ್ವೇಂದ್ರ ಸಿಂಗ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿದೆ.

ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ, ಎರಡು ಆಡಿಯೊ ಟೇಪ್ ಗಳು ಸಿಕ್ಕಿದ್ದು ಅವುಗಳಲ್ಲಿ ಬನ್ವರ್ ಲಾಲ್ ಶರ್ಮ ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸುತ್ತಿರುವುದು ಕೇಳಿಬಂದಿದೆ. ಟೇಪ್ ನಲ್ಲಿ ಒಂದು ಸ್ವರ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ರಾಜಸ್ಥಾನದ ಬಿಜೆಪಿ ಹಿರಿಯ ನಾಯಕ ಮತ್ತು ಕಾಂಗ್ರೆಸ್ ಶಾಸಕ ಬನ್ವರ್ ಲಾಲ್ ಶರ್ಮ ಅವರದ್ದು ಎಂದು ಕಾಂಗ್ರೆಸ್‌ ಆರೋಪಿಸಿದೆ.

ಆಡಿಯೊ ಟೇಪ್ ಆಧಾರದ ಮೇಲೆ ಕಾಂಗ್ರೆಸ್ ಈ ಸಂಬಂಧ ಇಬ್ಬರು ಬಂಡಾಯ ಶಾಸಕರನ್ನು ಅಮಾನತುಗೊಳಿಸಿದೆ ಎಂದಿದ್ದಾರೆ. ಹಣದ ಆಮಿಷವೊಡ್ಡಿ ಶಾಸಕರನ್ನು ಸೆಳೆಯಲು ನೋಡಿದ ಶಾಸಕರ ವಿರುದ್ಧ ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೀಡಿದ್ದ ಅನರ್ಹತೆ ನೊಟೀಸ್ ಗೆ ಸಂಬಂಧಿಸಿದಂತೆ ಸಚಿನ್ ಪೈಲಟ್ ಮತ್ತು ಇತರ ಬಂಡಾಯ ಶಾಸಕರು ಹೈಕೋರ್ಟ್ ಮೊರೆ ಹೋಗಿ ಇಂದು ಅರ್ಜಿ ವಿಚಾರಣೆ ನಡೆಯುವುದಕ್ಕೆ ಮುನ್ನ ಕಾಂಗ್ರೆಸ್ ನಲ್ಲಿ ಈ ಬೆಳವಣಿಗೆ ನಡೆದಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರ್ಜೆವಾಲಾ, ಪಕ್ಷ ವಿರೋಧಿ ಚಟುವಟಿಕೆ, ಪಿತೂರಿ ನಡೆಸಿ ಸರ್ಕಾರ ಬೀಳಿಸುವ ಪ್ರಯತ್ನ  ಮಾಡಿದ ಆರೋಪದ ಮೇಲೆ ಶಾಸಕರಾದ ಬನ್ವರ್ ಲಾಲ್ ಶರ್ಮ ಮತ್ತು ವಿಶ್ವೇಂದ್ರ ಸಿಂಗ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಲಾಗಿದೆ. ಪಕ್ಷದಿಂದ ಅವರಿಗೆ ಶೋಕಾಸ್ ನೊಟೀಸ್ ಸಹ ನೀಡಲಾಗಿದೆ ಎಂದರು.
ಆಡಿಯೊ ಟೇಪ್ ನ ಆಧಾರದ ಮೇಲೆ ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ನಾವು ರಾಜಸ್ತಾನ ಸರ್ಕಾರ ಮತ್ತು ವಿಶೇಷ ಕಾರ್ಯಪಡೆ ಗುಂಪು(ಎಸ್ಒಜಿ)ನ್ನು ಒತ್ತಾಯಿಸುತ್ತೇವೆ ಎಂದರು.

ಕಾಂಗ್ರೆಸ್ ನ ಬಂಡಾಯ ಶಾಸಕರ ಜೊತೆ ಸೇರಿ ಪಿತೂರಿ, ಕುಮ್ಮಕ್ಕು ನೀಡಲು ಯತ್ನಿಸಿದ ಆರೋಪದ ಮೇಲೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ವಿರುದ್ಧ ಸಹ ಎಫ್ ಐಆರ್ ದಾಖಲಿಸಬೇಕು. ಆಡಿಯೊ ಟೇಪ್ ಬಗ್ಗೆ ತನಿಖೆ ನಡೆಸಬೇಕು. ಸಚಿವ ಗಜೇಂದ್ರ ಸಿಂಗ್ ತನಿಖೆ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ ಎಂದು ಕಂಡುಬಂದರೆ ವಾರಂಟ್ ಹೊರಡಿಸಿ ಅವರನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

ಶಾಸಕ ಬನ್ವರ್ ಲಾಲ್ ಶರ್ಮ, ಬಿಜೆಪಿ ನಾಯಕ ಸಂಜಯ್ ಜೈನ್ ಅವರನ್ನು ಸಹ ಬಂಧಿಸಬೇಕು. ಶಾಸಕರನ್ನು ಸೆಳೆಯಲು ಬಿಜೆಪಿ ಕಡೆಯಿಂದ ಯಾರು ಕಪ್ಪು ಹಣ ನೀಡುವ ಬಗ್ಗೆ ವ್ಯವಸ್ಥೆ ಮಾಡಿದ್ದರು. ಯಾರು, ಯಾರಿಗೆಲ್ಲಾ ಲಂಚ ಕೊಟ್ಟಿದ್ದಾರೆ ಎಂದು ಸಹ ತನಿಖೆ ನಡೆಯಬೇಕೆಂದು ಸುರ್ಜೆವಾಲಾ ಒತ್ತಾಯಿಸಿದ್ದಾರೆ.error: Content is protected !!
Scroll to Top