ಉಡುಪಿ :ಕರಾವಳಿ ಪ್ರದೇಶದಲ್ಲಿ ಮಳೆಯಬ್ಬರ ಮುಂದುವರಿದಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು ಭಾಗದಲ್ಲಿ ಭಾರೀ ಮಳೆ ಆಗುತ್ತಿದೆ.
ತಿಂಗಳ ಆರಂಭದಿಂದಲೇ ಮಲೆನಾಡು, ಕರಾವಳಿ ಭಾಗದಲ್ಲಿ ಉತ್ತಮ ಮಳೆ ಆಗುತ್ತಿದೆ. ಪರಿಣಾಮ ಹಳ್ಳ, ಕೊಳ್ಳ, ನದಿಗಳು ಉಕ್ಕಿ ಹರಿದಿವೆ. ಉತ್ತಮ ಮಳೆ ಆಗುತ್ತಿರುವುದು ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಆದರೆ ನದಿ ತಟದ ಭಾಗದ ಜನರು ಮಳೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಹಲವೆದೆ ನದಿಗಳು ಉಕ್ಕಿ ಹರಿಯುತ್ತಿದ್ದು, ಮನೆಮಠ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಗುಲ್ಬರ್ಗದ ಚಿಮ್ಮನಚೋಡ ಗ್ರಾಮದಲ್ಲಿ ಸಂಗಮೇಶ್ವರ ದೇವಾಲಯ ಭಾಗದಲ್ಲಿ ಪ್ರವಾಹ ಉಂಟಾಗಿದ್ದು, ದೇವಾಲಯದಲ್ಲಿದ್ದ ಐವರನ್ನು ರಕ್ಷಣೆ ಮಾಡಲಾಗಿದೆ. ಸಂಗಮೇಶ್ವರ ದೇವಾಲಯದ ಬಳಿ ನಾಗರಾಳ ಜಲಾಶಯ ಇದೆ. ಇಲ್ಲಿ ಭಾರೀ ಪ್ರಮಾಣದ ನೀರು ಬಿಡಲಾಗಿತ್ತು. ಈ ವೇಳೆ ದೇವಾಲಯ ಮುಳುಗಿತ್ತು. ನಂತರ ನೀರು ಬಿಡುವುದನ್ನು ನಿಲ್ಲಿಸಿ, ದೇವಾಲಯದಲ್ಲಿ ಇರುವವರನ್ನು ರಕ್ಷಣೆ ಮಾಡಲಾಗಿದೆ.
ಉಕ್ಕಿ ಹರಿದ ನದಿಗಳು
ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರಾಜ್ಯದ ನದಿಗಳು ಉಕ್ಕಿ ಹರಿಯುತ್ತಿವೆ. ಹೀಗಾಗಿ, ನದಿ ಅಂಚಿನ ಗ್ರಾಮಗಳು ಕಂಗಾಲಾಗಿವೆ. ಅಘನಾಶಿನಿ, ಗಂಗಾವಳಿ, ನೇತ್ರಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಸದ್ಯ, ನದಿಗಳು ಅಪಾಯದ ಮಟ್ಟ ತಲುಪಿಲ್ಲ. ಆದರೆ, ಮಳೆ ಹೆಚ್ಚಾದರೆ, ಕೆಲ ಗ್ರಾಮಗಳು ಮುಳುಗುವ ಭೀತಿ ಎದುರಾಗಿದೆ.
ಮಹಾರಾಷ್ಟ್ರ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಆಗುತ್ತಿದೆ. ಮುಂದಿನ ಒಂದು ವಾರಗಳ ಕಾಲ ಇದೇ ರೀತಿಯ ಮಳೆ ಮುಂದುವರಿಯಲಿದೆ ಎನ್ನಲಾಗಿದೆ. ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಪುಣೆ, ಮುಂಬಯಿ ಸೇರಿದಂತೆ ಅನೇಕ ಕಡೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ರಾಜ್ಯದ ನದಿಗಳು ಉಕ್ಕಿ ಹರಿಯುತ್ತಿವೆ. ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ನದಿ ಅಂಚಿನ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.