ನಮ್ಮ ಒಂದೇ ಒಂದು ಇಂಚು ಜಾಗ ಕಬಳಿಸಲು ಬಿಡುವುದಿಲ್ಲ – ಲಡಾಕ್‌ ನಲ್ಲಿ ರಾಜನಾಥ್ ಸಿಂಗ್ ಎಚ್ಚರಿಕೆ

ದಿಲ್ಲಿ : ಭಾರತ ದುರ್ಬಲ ರಾಷ್ಟ್ರವಲ್ಲ. ಮತ್ತು ನಮ್ಮ ದೇಶದ ಒಂದೇ ಒಂದು ಇಂಚು ಭೂ ಭಾಗವನ್ನುಜಗತ್ತಿನ ಯಾವ ಶಕ್ತಿಗಳು ಮುಟ್ಟಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದರು.
ಭಾರತ ಮತ್ತು ಚೀನ ನಡುವೆ ಉಂಟಾಗಿರುವ ಗಡಿ ಸಂಘರ್ಷ ಸಂಬಂಧ ಶುಕ್ರವಾರ ಲಡಾಕ್​ಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಮಗ್ರವಾಗಿ ಸಮಾಲೋಚನೆ ನಡೆಸಿದರು. ಈ ವೇಳೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಆರ್ಮಿ ಮುಖ್ಯಸ್ಥ ಜನರಲ್ ಎಂಎಂ ನರವಣೆ  ಉಪಸ್ಥಿತರಿದ್ದರು.
ಗಡಿ ಸಂಘರ್ಷ ಪರಿಹಾರಕ್ಕೆ ಮಾತುಕತೆ ನಡೆಯುತ್ತಿದೆ. ಆದರೆ, ಅದು ಎಷ್ಟರಮಟ್ಟಿಗೆ ಪರಿಹಾರವಾಗಬಲ್ಲದು ಎಂಬುದನ್ನು ನಾನು ಖಾತರಿಪಡಿಸಲಾರೆ. ಈ ಜಗತ್ತಿನ ಯಾವುದೇ ಶಕ್ತಿಗಳು ನಮ್ಮ ನೆಲದಲ್ಲಿ ಒಂದೇ ಒಂದು ಇಂಚು ಜಾಗವನ್ನು ಮುಟ್ಟಲು ಸಾಧ್ಯವಿಲ್ಲ ಎಂಬುದನ್ನು ನಾನು ಭರವಸೆ ನೀಡುತ್ತೇನೆ ಎಂದು ರಕ್ಷಣಾ ಪಡೆಗಳೊಂದಿಗಿನ ಸಂವಾದದಲ್ಲಿ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಮಾತುಕತೆಯ ಮೂಲಕವೇ ಸಂಘರ್ಷ ಪರಿಹಾರವಾದರೆ ಅದಕ್ಕಿಂತ ಉತ್ತಮವಾದುದು ಬೇರೆಯದಿಲ್ಲ ಎಂದು ರಕ್ಷಣಾ ಸಚಿವರು ಇದೇ ವೇಳೆ ಹೇಳಿದರು. ಹಾಗಯೇ ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗಲು ಭಾರತ ಬಿಡುವುದಿಲ್ಲ ಎಂದೂ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಜುಲೈ 3ರಂದು ಲಡಾಕ್​ಗೆ ದಿಢೀರ್ ಭೇಟಿ ನೀಡಿ ಸೈನಿಕರೊಂದಿಗೆ ಸಂವಾದ ನಡೆಸಿದ ಎರಡು ವಾರಗಳ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಡಾಕ್​ಗೆ ಭೇಟಿ ನೀಡಿದ್ದಾರೆ. ಜುಲೈ 3ರಂದೇ ರಾಜನಾಥ್ ಸಿಂಗ್ ಲಡಾಕ್​ಗೆ ಭೇಟಿ ನೀಡಲು ದಿನಾಂಕ ನಿಗದಿಯಾಗಿತ್ತು. ಆದರೆ, ಆ ಭೇಟಿ ರದ್ದಾಗಿತ್ತು.


error: Content is protected !!
Scroll to Top