ಮದ್ಯದಂಗಡಿಗಳನ್ನು ಶಾಶ್ವತವಾಗಿ ಲಾಕ್‌ಡೌನ್ ಮಾಡಿದರು ಈ ಗ್ರಾಮಸ್ಥರು

ಮದ್ಯ ನಿಷೇಧ  ಎನ್ನುವುದು ಬಹುಕಾಲದಿಂದ ದೇಶದಲ್ಲಿ ಚರ್ಚೆಯಲ್ಲಿರುವ ವಿಚಾರ.ಕೆಲವು ಸರಕಾರಗಳು ಮದ್ಯ ನಿಷೇಧಕ್ಕೆ ಪ್ರಯತ್ನಿಸಿದರೂ ಈ ನಿಟ್ಟಿನಲ್ಲಿ ಪೂರ್ಣ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ. ಲಾಕ್‌ಡೌನ್ ಮುಗಿದು ಅನ್‌ ಲಾಕ್‌ ಪ್ರಕ್ರಿಯೆ ಪ್ರಾರಂಭವಾದಾಗ ಹಲವು ಧಾರ್ಮಿಕ ಮುಖಂಡರು ಮತ್ತು ಗಣ್ಯರು ಮದ್ದಂಗಡಿಗಳನ್ನು ಮರಳಿ ತೆರೆಯುವುದು ಬೇಡ ಎಂದು ವಿನಂತಿಸಿದ್ದರು. ಆದರೆ ಬೊಕ್ಕಸ ತುಂಬಿಸುವ ಚಿಂತೆಯಲ್ಲಿದ್ದ ಸರಕಾರ ಇದನ್ನು ಕಿವಿ ಮೇಲೆ  ಹಾಕಿಕೊಂಡಿರಲಿಲ್ಲ.  ಹೀಗಿರುವಾಗ ಒಂದು ಹಳ್ಳಿ ಜನರು ತಮ್ಮ ಊರಿನಲ್ಲಿ ಸಂಪೂರ್ಣ ಮದ್ಯನಿಷೇಧ ಮಾಡುವ  ಮೂಲಕ ಗಮನ ಸೆಳೆದಿದ್ದಾರೆ.

  ಕೊರೋನಾ ಕಾಲಘಟ್ಟದಲ್ಲಿ  ತುಮಕೂರು ಜಿಲ್ಲೆಯ ಕೊಡಿಗೆಹಳ್ಳಿಯ ಜನರು ಎಲ್ಲರಿಗೂ ಮಾದರಿಯಾಗುವಂತಹ ಮಹತ್ವದ ಬದಲಾವಣೆಯೊಂದನ್ನು ಮಾಡಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಮುಚ್ಚಲಾದ ಮದ್ಯ ಮಾರಾಟ ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚಿಸುವ ಮೂಲಕ ತಮ್ಮ ಹಳ್ಳಿಯನ್ನು ಲಿಕ್ಕರ್ ಫ್ರೀ ವಿಲೇಜ್ (ಮದ್ಯಪಾನ ರಹಿತ ಗ್ರಾಮ)ವನ್ನಾಗಿ ಮಾಡುವ ಮೂಲಕ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದಾರೆ.

ಅಂದ ಹಾಗೆ ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ದೇಶದಲ್ಲಿ ಅಗತ್ಯ ವಸ್ತುಗಳ ಮಾರಾಟ ಬಿಟ್ಟರೆ, ಇನ್ಯಾವುದೇ ತರಹದ ವ್ಯಾಪಾರ ವಹಿವಾಟುಗಳನ್ನು ನಡೆಸುವುದಕ್ಕೆ ಅವಕಾಶ ಇರಲಿಲ್ಲ. ದೇಶದ ಎಲ್ಲಾ ಮದ್ಯದಂಗಡಿಗಳನ್ನೂ ಮುಚ್ಚುವಂತೆ ಲಾಕ್ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಆದೇಶಿಸಿತ್ತು. ಈ ಸಂದರ್ಭವನ್ನು ಅವಕಾಶವಾಗಿ ಪರಿವರ್ತಿಸಿಕೊಂಡ ಕೊಡಿಗೆಹಳ್ಳಿ ಗ್ರಾಮಸ್ಥರು ಅಂದಿನಿಂದಲೇ ಆ ಹಳ್ಳಿಯಲ್ಲಿ ಮದ್ಯ ಮಾರಾಟ, ಸೇವನೆ ಎಲ್ಲಕ್ಕೂ ಗುಡ್ ಬೈ ಹೇಳಿದ್ದಾರೆ. ಜನರ ಸಾಂಘಿಕ ಪ್ರಯತ್ನದ ಫಲ ಎಂಬಂತೆ ಕೊರೋನಾ ಲಾಕ್‌ ಡೌನ್‌ ಮಹುತೇಕ ತೆರವಾಗಿದ್ದರೂ  ಈ ಪ್ರದೇಶದಲ್ಲಿ ಯಾವುದೇ ಮದ್ಯದಂಗಡಿಗಳುತೆರೆದಿಲ್ಲ. ಈ ಮಹತ್ಕಾರ್ಯಕ್ಕೆ ಇಲ್ಲಿನ ಜನರಿಗೆ ಸಂಪೂರ್ಣ ಬೆಂಬಲ ನೀಡಿದ್ದು ಈ ವ್ಯಾಪ್ತಿಗೆ ಸಂಬಂಧಿಸಿದ ಪೊಲೀಸ್ ಸಿಬ್ಬಂದಿಗಳು.

ಲಾಕ್‌ಡೌನ್ ಸಂದರ್ಭದಲ್ಲಿ ಮುಚ್ಚಲಾದ ಮದ್ಯದಂಗಡಿಗಳನ್ನು ತೆರೆಯಲು ಸರ್ಕಾರ ಮತ್ತೆ ಅನುಮತಿ ನೀಡಿದಾಗ, ಇಲ್ಲಿಯೂ ಮದ್ಯದಂಗಡಿಗಳನ್ನು ಮತ್ತೆ ತೆರೆಯಲಾಯಿತು‌. ಇಲ್ಲಿನ ಜನರು ಕುಡಿತದ ಚಟವನ್ನು ಹಠದಿಂದ ಬಿಟ್ಟಿದ್ದರೂ, ಲಿಕ್ಕರ್ ಶಾಪ್‌ಗಳು ಮತ್ತೆ ಆರಂಭವಾದಾಗ ಸಮೀಪದ ರಾಜ್ಯ ಆಂದ್ರಪ್ರದೇಶದ ಜನರು ಗ್ರಾಮದೊಳಕ್ಕೆ ಅಕ್ರಮ ಪ್ರವೇಶಿಸಿ ದುಪ್ಪಟ್ಟು ಹಣ ನೀಡಿ ಕುಡಿಯುವುದನ್ನು ಕಂಡ ಈ ಗ್ರಾಮಸ್ಥರು, ಪೊಲೀಸರ ಸಹಾಯ ಪಡೆದುಕೊಂಡು ಅದಕ್ಕೂ ಕಡಿವಾಣ ಹಾಕಿದ್ದಾರೆ. ಹಳ್ಳಿಯಲ್ಲಿನ ಮದ್ಯದಂಗಡಿಗಳನ್ನು ಮುಚ್ಚಿಸುತ್ತಾರೆ. ಹಳ್ಳಿಯ ತುಂಬೆಲ್ಲಾ ಮದ್ಯ ಮುಕ್ತ ಗ್ರಾಮ, ಮದ್ಯಪಾನ ನಿಷೇಧಿಸಲಾಗಿದೆ ಎಂಬ ಬ್ಯಾನರ್ ಗಳನ್ನು ಹಾಕುತ್ತಾರೆ. ಜೊತೆಗೆ ಯಾರಾದರೂ ಕುಡಿದು ಬಂದರೆ ಅವರಿಗೆ ಪೊಲೀಸರು 2,500 ರೂ. ದಂಡವನ್ನೂ ವಿಧಿಸುತ್ತಾರೆ. ಆ ಮೂಲಕ ಹಳ್ಳಿಗರ ಮದ್ಯಪಾನ ನಿಷೇಧದ ಇಚ್ಛಾಶಕ್ತಿಗೆ ತಾವೂ ಸಹಾಯ ಮಾಡುತ್ತಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಕೊಡಿಗೆಹಳ್ಳಿ ಗ್ರಾಮಸ್ಥರು, ಲಾಕ್‌ಡೌನ್ ಸಂದರ್ಭದಲ್ಲಿ ಜನರು ತುತ್ತು ಅನ್ನಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲಿ ಕುಡಿತದ ಚಟ ಕುಡುಕರ ಕುಟುಂಬ ಜೀವನದ ಮೇಲೆಯೂ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇತ್ತು. ಕುಡಿತ ದೇಹಾರೋಗ್ಯವನ್ನು ಮಾತ್ರವೇ ಕೆಡಿಸುವುದಲ್ಲ‌. ಬದಲಾಗಿ ಸಂಸಾರ, ಸಾಮಾಜಿಕ ಪರಿಸರದ ಮೇಲೆಯು ಅಡ್ಡ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಲಾಕ್ಡೌನ್ ಸಂದರ್ಭವನ್ನು ಸರಿಯಾಗಿ ಬಳಸಿಕೊಂಡು ಗ್ರಾಮವನ್ನು ಮದ್ಯಪಾನ ಮುಕ್ತವನ್ನಾಗಿಸುವ ಪ್ರಯತ್ನ ನಡೆಸಿದ್ದಾಗಿ ತಿಳಿಸಿದ್ದಾರೆ. ಇವರ ಶ್ರಮದ ಫಲ ಎಂಬಂತೆ, ಲಾಕ್‌ಡೌನ್ ನಂತರವೂ ಈ ಹಳ್ಳಿಯಲ್ಲಿ ಮದ್ಯದಂಗಡಿಗಳು ಬಾಗಿಲು ಹಾಕುವಂತಾಗಿದೆ.

ಲಾಕ್ಡೌನ್ ಸಂದರ್ಭವನ್ನು ಧನಾತ್ಮಕವಾಗಿ ತೆಗೆದುಕೊಂಡು, ಜಗತ್ತಿಗೇ ಮಾದರಿಯಾಗಿ ಇಂದು ಮದ್ಯಪಾನ ಮುಕ್ತ ಕೊಡಿಗೆಹಳ್ಳಿ ನಿಂತಿದೆ ಎಂದರೆ ಅದಕ್ಕೆ ಕಾರಣ ಇಲ್ಲಿನ ಜನರ ಇಚ್ಛಾಶಕ್ತಿ. ಮನಸ್ಸಿದ್ದರೆ ಯಾವ ಕೆಲಸವೂ ಅಸಾಧ್ಯವಲ್ಲ ಎಂಬುದನ್ನು ತೋರಿಸಿಕೊಟ್ಟ ಕೊಡಿಗೆಹಳ್ಳಿ ಗ್ರಾಮಸ್ಥರ ಕಾರ್ಯಕ್ಕೆ ಶಹಬ್ಬಾಸ್ ಎನ್ನಲೇ ಬೇಕು.error: Content is protected !!
Scroll to Top