ಬೆಂಗಳೂರು: ಕಳೆದ ಐದು ದಿನಗಳಲ್ಲಿ ನಗರದಲ್ಲಿ ಐದು ಸಾವಿರ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ತಿಂಗಳಾಂತ್ಯಕ್ಕೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗಲಿದ್ದು, ಜುಲೈ ತಿಂಗಳು ನಗರದ ನಾಗರಿಕರಿಗೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಗೋಚರಿಸಿದೆ.
ಪ್ರತಿನಿತ್ಯ ನೂರಾರು ಸೋಂಕಿತರು ಪತ್ತೆಯಾಗುತ್ತಿರುವುದರಿಂದ ನಾಗರಿಕರು ಎಚ್ಚೆತ್ತುಕೊಳ್ಳದಿದ್ದರೆ ಸಿಲಿಕಾನ್ ಸಿಟಿ ಕೊರೊನಾ ತವರೂರಾಗಿ ಪರಿಣಮಿಸಲಿದೆ. 198 ವಾರ್ಡ್‍ಗಳ ಪೈಕಿ ಈಗಾಗಲೇ 47 ವಾರ್ಡ್‍ಗಳಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲೂ ದಕ್ಷಿಣ ವಲಯದಲ್ಲೇ ಅತಿ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿರುವುದು ಕಂಡುಬಂದಿದೆ.
ಸುದಾಮನಗರ, ಧರ್ಮರಾಯಸ್ವಾಮಿ ದೇವಸ್ಥಾನ, ಸುಂಕೇನಹಳ್ಳಿ, ವಿವಿ ಪುರಂ, ಸಿದ್ದಾಪುರ, ಹೊಂಬೇಗೌಡ ನಗರ, ಕೋರಮಂಗಲ, ಸದ್ದುಗುಂಟೆಪಾಳ್ಯ, ಜಯನಗರ, ಹನುಮಂತನಗರ, ಬಸವನಗುಡಿ, ವಿದ್ಯಾಪೀಠ, ಯಡಿಯೂರು, ಪಟ್ಟಾಭಿರಾಮನಗರ, ಮಡಿವಾಳ, ಬಿಟಿಎಂ ಲೇಔಟ್, ಶಾಕಾಂಬರಿನಗರಗಳಲ್ಲಿ ಅತಿ ಹೆಚ್ಚು ಸೋಂಕಿತರಿದ್ದಾರೆ.
ಪಶ್ಚಿಮ ವಲಯದ ಕಾಡುಮಲ್ಲೇಶ್ವರ, ಗಾಂಧಿನಗರ, ಸುಭಾಷ್‍ನಗರ, ರಾಜಾಜಿನಗರ, ಚಿಕ್ಕಪೇಟೆ, ಕಾಟನ್‍ಪೇಟೆ, ಪಾದರಾಯನಪುರ, ಕೆಆರ್ ಮಾರುಕಟ್ಟೆ, ಚಾಮರಾಜಪೇಟೆ ಪೂರ್ವ ವಲಯದ ಬಾಣಸವಾಡಿ, ಪುಲಕೇಶಿನಗರ, ಶಿವಾಜಿನಗರ, ವಸಂತನಗರ, ಸಂಪಂಗಿರಾಮನಗರ, ಶಾಂತಲಾನಗರ ಮತ್ತು ಶಾಂತಿನಗರದಲ್ಲಿ ಸೋಂಕಿತರಿದ್ದಾರೆ.
ಬೊಮ್ಮನಹಳ್ಳಿಯ ಉತ್ತರಹಳ್ಳಿ, ಯಲಹಂಕ, ಹೊಂಗಸಂದ್ರ, ಸಿಂಗಸಂದ್ರ, ವಸಂತಪುರ, ಎಚ್‍ಎಸ್‍ಆರ್ ಲೇಔಟ್, ಆರ್‍ಆರ್ ನಗರದ ರಾಜರಾಜೇಶ್ವರಿನಗರ, ಹೆಮ್ಮಿಗೆಪುರ, ಜ್ಞಾನಭಾರತಿ, ಮಹದೇವಪುರದ ಹೊರಮಾವು ಮತ್ತು ಯಳಂದೂರು, ಯಲಹಂಕದ ಥಣಿಸಂದ್ರ ಮತ್ತು ವಿದ್ಯಾರಣ್ಯಪುರದಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ವಾರ್ಡ್‍ಗಳಲ್ಲಿ ವಾಸಿಸುವ ಜನರು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.