ಕೊರೊನಾ ಸಂಕಷ್ಟಗಳ ನಡುವೆಯೇ ಬಿಹಾರದ ವಿಧಾನಸಭೆಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ತಯಾರಿ ನಡೆಸುತ್ತಿದೆ. ಕೊರೊನ ಕಾಲದ ಚುನಾವಣೆ ಮಾಮೂಲಿನಂತಿರುವುದಿಲ್ಲ.ಜನರು ಮತಗಟ್ಟೆಗೆ ಬರುವಂತೆ ಮಾಡಲು ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳವುದು ಅನಿವಾರ್ಯ. ಹೇಗಿರಬಹುದು ದೆ ಈ ಬಾರಿಯ ಚುನಾವಣೆಯ ತಯಾರಿ.ಇಲ್ಲಿದೆ ಒಂದಷ್ಟು ವಿವರ.
ದಿಲ್ಲಿ: ಕೊರೊನಾ ಕಾಲದಲ್ಲಿ ದೇಶದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಯಲಿದೆ. ಕೋಟ್ಯಂತರ ಮತದಾರರನ್ನು ಹೊಂದಿರುವ ಬಿಹಾರ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ವಿಶೇಷ ಸಿದ್ಧತೆ ನಡೆಸಲಾಗುತ್ತಿದೆ. ಇವಿಎಂಗಳನ್ನು ಸ್ಪರ್ಶಿಸದೆಯೇ ಬಿದಿರಿನ ಕಡ್ಡಿಯ ಮೂಲಕ ಮತದಾನ, ಪೋಲಿಂಗ್ ಆಫಿಸರ್ ಟೇಬಲ್ ಬಳಿ ಗಾಜಿನ ಪರದೆ, ದಿಸ್ಪೋಸೆಬಲ್ ಸಿರಿಂಜ್ ಮೂಲಕ ಬೆರಳಿನ ಮೇಲೆ ಶಾಹಿ ಗುರುತುಹಾಕುವಂಥ ಸುರಕ್ಷಿತ ಕ್ರಮಗಳ ಮೂಲಕ ಚುನಾವಣಾ ನಡೆಸಲು ಚುನಾವಣಾ ಆಯೋಗ ಚಿಂತನೆ ನಡೆಸುತ್ತಿದೆ. ಕೊರೊನಾ ಮಹಾಮಾರಿಯ ನಡುವೆ ಬಿಹಾರದಂತಹ ದೊಡ್ಡ ರಾಜ್ಯದಲ್ಲಿ ಚುನಾವಣೆ ನಡೆಸುವುದು ಒಂದು ದೊಡ್ಡ ಸವಾಲು.
ಕೊರೊನಾ ವೈರಸ್ ಮಹಾಮಾರಿ ದೇಶಾದ್ಯಂತ ಹರಡಿದ ನಂತರದ ಕಾಲದಲ್ಲಿ ದೇಶದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಅಕ್ಟೋಬರ್-ನವೆಂಬರ್ ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಏನೇ ಆದರೂ ಕೊರೊನಾ ಮಹಾಮಾರಿಯ ಈ ಕಾಲದಲ್ಲಿ ಈ ಚುನಾವಣೆ ಭಿನ್ನವಾಗಿರಲಿದೆ.
ಈ ಕುರಿತಾದ ಪ್ರಸ್ತಾವಗಳನ್ನು ಚುನಾವಣಾ ಆಯೋಗದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು ಡಿಸ್ಪೋಸೆಬಲ್ ಸಿರಿಂಜ್ ಮೂಲಕ ಬೆರಳಿನ ಮೇಲೆ ಶಾಹಿ ಗುರುತು ಹಾಕುವುದು ಒಂದು ಸುರಕ್ಷಿತ ಕ್ರಮವಾಗಿದೆ ಎನ್ನುತ್ತಾರೆ. ಪ್ರತಿ ಸಲ ಬಳಸಿದ ಬಳಿಕ ಇದನ್ನು ಎಸೆಯಬಹುದು. ಪೋಲಿಂಗ್ ಅಧಿಕಾರಿಯನ್ನು ಗಾಜಿನ ಪರದೆಯ ಹಿಂದೆ ಕೂರಿಸುವ ಆವಶ್ಯಕತೆ ಇದೆ. ಇದರಿಂದ ಅಧಿಕಾರಿಯೇ ಆಗಲಿ ಅಥವಾ ಮತದಾರರಿಗೆ ಆಗಲಿ ಸೋಂಕು ತಗಲುವ ಸಾಧ್ಯತೆ ಕಡಿಮೆ ಇರುತ್ತದೆ. ಬಿದಿರಿನ ಕಡ್ಡಿಗಳು ಇಕೋ ಫ್ರೆಂಡ್ಲಿ ಆಗಿವೆ ಹಾಗೂ ಇವುಗಳನ್ನು ವಿಲೇವಾರಿ ಮಾಡುವುದು ಸುಲಭವಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು, “ಇವಿಎಂ ಬಟನ್ ಕ್ಲಿಕ್ಕಿಸಲು ಹಾಗೂ ವೋಟರ್ ರಿಜಿಸ್ಟರ್ ನಲ್ಲಿ ಹಸ್ತಾಕ್ಷರ ನಮೂದಿಸಲು ಗ್ಲೌಸ್ ಗಳ ಬಳಕೆ ಹಾಗೂ ಬಿದಿರಿನ ಕಡ್ಡಿಗಳ ಬಳಕೆಯ ಕುರಿತು ಚಿಂತನೆ ನಡೆಯುತ್ತಿದೆ. ಏಕೆಂದರೆ ಪ್ರತಿಯೊಂದು ವೋಟ್ ಬಳಿಕ ಇವಿಎಂ ಸ್ಯಾನಿಟೈಸ್ ಮಾಡುವುದು ಅಸಂಭವ ಹಾಗೂ ನಾವು ಪ್ಲಾಸ್ಟಿಕ್ ನ ಯಾವುದೇ ಪರಿಕರಗಳನ್ನು ಬಳಸುತ್ತಿಲ್ಲ. ಏಕೆಂದರೆ ಇದರಿಂದ ಸೋಂಕಿನ ಸಾಧ್ಯತೆ ಹೆಚ್ಚಾಗಿದೆ. ಬಿದಿರಿನ ಕಡ್ಡಿ ಪರಿಸರ ಸ್ನೇಹಿಯಾಗಿದ್ದು, ಇವುಗಳನ್ನು ವಿಲೇವಾರಿ ಮಾಡುವುದು ಕೂಡ ಸುಲಭವಾಗಿದೆ” ಎಂದಿದ್ದಾರೆ.
ಮೂಲಗಳ ಪ್ರಕಾರ ಈ ಎಲ್ಲ ಪ್ರಸ್ತಾವನೆಗಳನ್ನು ಮುಖ್ಯ ಚುನಾವಣಾ ಆಯುಕ್ತರ ಅನುಮೋದನೆಗಾಗಿ ಬಿಹಾರ ಚುನಾವಣಾ ಆಯುಕ್ತರು ಕಳುಹಿಸಿಕೊಟ್ಟಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಬಿಹಾರ್ ಮುಖ್ಯ ಚುನಾವಣಾ ಅಧಿಕಾರಿ ಹೆಚ್. ಆರ್. ಶ್ರೀನಿವಾಸ್, “ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ಸುರಕ್ಷತೆಗಾಗಿ ನಾವು ಕೆಲ ಪ್ರಸ್ತಾವಗಳನ್ನು ಕಳುಹಿಸಿದ್ದು, ಈ ನಿಟ್ಟಿನಲ್ಲಿ ನಾವು ಕೆಲಸ ಕೂಡ ಆರಂಭಿಸಿದ್ದೇವೆ. ಮತದಾರರು ಯಾವುದೇ ವಸ್ತುಗಳ ಸಂಪರ್ಕಕ್ಕೆ ಬರಬಾರದು ಎಂಬುದೇ ನಮ್ಮ ಮುಖ್ಯ ಗುರಿಯಾಗಿದ್ದು, ಸ್ಪರ್ಶರಹಿತ ಮತದಾನ ನಡೆಸಬೇಕು ಎಂಬುದಾಗಿದೆ” ಎಂದಿದ್ದಾರೆ.
ಆದರೆ ಇದನ್ನು ಅನುಷ್ಠಾನಗೊಳಿಸುವುದು ಕೂಡ ಒಂದು ದೊಡ್ಡ ಸವಾಲು ಆಗಿದೆ. ರಾಜ್ಯದಲ್ಲಿ ಒಟ್ಟು 7.18 ಕೋಟಿ ಮತದಾರರಿದ್ದು, 1.06 ಲಕ್ಷ ಬೂತ್ ಗಳಿವೆ. ಇದಲ್ಲದೆ ಪ್ರತಿಯೊಂದು ಬೂತ್ ನಲ್ಲಿ ಸಾಮಾಜಿಕ ಅಂತರ ಪಾಲಿಸುವುದು ಕೂಡ ಒಂದು ಸವಾಲಿನ ಕಾರ್ಯವಾಗಿದೆ. ಈ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ. ಬಿಹಾರ ರಾಜ್ಯ ಖಾದಿ ಬೋರ್ಡ್ ನಿಂದ ಗ್ಲೌಸ್ ಗಳನ್ನು ಖರೀದಿಸಲಾಗುವುದು ಮತ್ತು ಇದರಿಂದ ಗ್ರಾಮೀಣ ಮಟ್ಟದಲ್ಲಿ ಉದ್ಯೋಗದ ಅವಕಾಶಗಳೂ ಕೂಡ ಹೆಚ್ಚಾಗಲಿವೆ.
ಈ ಕುರಿತು ಮಾಹಿತಿ ನೀಡಿರುವ ಮತ್ತೋರ್ವ ಅಧಿಕಾರಿ, “ರಾಜ್ಯ ಖಾದಿ ಬೋರ್ಡ್ ಗೆ ಖಾದಿ ಗ್ಲೌಸ್ ಹೊಲಿಯಲು ಸೂಚಿಸಲಾಗಿದೆ. ಇತರ ವಸ್ತುಗಳ ಖರೀದಿ ಕೂಡ ಸ್ಥಳೀಯ ಮಟ್ಟದಲ್ಲಿ ನಡೆಯಲಿದೆ. ಇದಕ್ಕಾಗಿ ಜಿಲ್ಲಾಧಿಕಾರಿಹಾಗೂ ಜಿಲ್ಲೆಯ ಚುನಾವಣಾ ಅಧಿಕಾರಿಗಳಿಗೆ ಅಧಿಕಾರ ನೀಡಲಾಗುವುದು” ಎಂದಿದ್ದಾರೆ.